![[ಆಸ್ತಿ ಕಬಳಿಕೆ ಆರೋಪ] ಜನಾರ್ದನ ರೆಡ್ಡಿ ಪುತ್ರ ಕಿರೀಟಿ ವಿರುದ್ಧ ಸಿಐಡಿ ತನಿಖೆಗೆ ಕೋರಿಕೆ: ಸರ್ಕಾರಕ್ಕೆ ನೋಟಿಸ್](http://media.assettype.com/barandbench-kannada%2F2025-12-08%2Fdtwo33hi%2FWhatsApp-Image-2025-12-08-at-9.29.03-PM.jpeg?w=480&auto=format%2Ccompress&fit=max)
![[ಆಸ್ತಿ ಕಬಳಿಕೆ ಆರೋಪ] ಜನಾರ್ದನ ರೆಡ್ಡಿ ಪುತ್ರ ಕಿರೀಟಿ ವಿರುದ್ಧ ಸಿಐಡಿ ತನಿಖೆಗೆ ಕೋರಿಕೆ: ಸರ್ಕಾರಕ್ಕೆ ನೋಟಿಸ್](http://media.assettype.com/barandbench-kannada%2F2025-12-08%2Fdtwo33hi%2FWhatsApp-Image-2025-12-08-at-9.29.03-PM.jpeg?w=480&auto=format%2Ccompress&fit=max)
ಬಳ್ಳಾರಿ ನಗರ ಮಧ್ಯ ಭಾಗದಲ್ಲಿರುವ ₹100 ಕೋಟಿಗೂ ಹೆಚ್ಚಿನ ಮೊತ್ತದ ಸ್ಥಿರಾಸ್ತಿ ಕಬಳಿಕೆ ಆರೋಪದಡಿ, ಶಾಸಕ ಗಾಲಿ ಜನಾರ್ದನ ರೆಡ್ಡಿ ಪುತ್ರ ಜಿ ಕಿರೀಟಿ ರೆಡ್ಡಿ ಹಾಗೂ ಆತನ ಸಹವರ್ತಿಗಳು ಭಾಗಿಯಾಗಿರುವ ಆರೋಪದ ಕ್ರಿಮಿನಲ್ ಪ್ರಕರಣವನ್ನು ಸಿಐಡಿ ಅಥವಾ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಒಪ್ಪಿಸುವಂತೆ ಕೋರಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ನೋಟಿಸ್ ಜಾರಿಗೊಳಿಸಿದೆ.
ಬಳ್ಳಾರಿಯವರಾದ ಸ್ಥಿರಾಸ್ತಿಯ ಮಾಲೀಕ ಎಂ ಗೋವರ್ಧನ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಾದ ಆಲಿಸಿದ ಪೀಠವು ಅರ್ಜಿದಾರ ಗೋವರ್ಧನ ಅವರ ಜೀವ ರಕ್ಷಣೆಗಾಗಿ ಪೊಲೀಸ್ ಭದ್ರತೆ ಒದಗಿಸಲು ನಿರ್ದೇಶಿಸಿತು. ಅಂತೆಯೇ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಿಐಡಿ, ಕೌಲ್ ಬಜಾರ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್, ಧಾರವಾಡ ವಲಯ ಐಜಿಪಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಡಿಸೆಂಬರ್ 15ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಅರ್ಜಿದಾರರ ಪರ ವಕೀಲ ಪಿ ಪ್ರಸನ್ನ ಕುಮಾರ್ ಅವರು “ಅರ್ಜಿದಾರರ ಒಂಭತ್ತು ಎಕರೆ ಜಾಗವನ್ನು ಸುಳ್ಳು ದಾಖಲೆ ಸೃಷ್ಟಿ ಮಾಡಿ ತಮ್ಮ ವಶಕ್ಕೆ ಪಡೆಯಲು ಜಿ ಕಿರೀಟಿ ರೆಡ್ಡಿ ಮತ್ತು ಅವರ ಸಹವರ್ತಿಗಳು ಯತ್ನಿಸಿದ್ದಾರೆ. ಅರ್ಜಿದಾರರ ಜೊತೆ ಕಿರೀಟಿ ರೆಡ್ಡಿಯ ಸಹವರ್ತಿಗಳಾದ ಬಿ ಸೀನ ಮತ್ತು ಮಂಜುನಾಥ್ 2005ರಲ್ಲಿ ಸಾಮಾನ್ಯ ಅಧಿಕಾರ ಪತ್ರ (ಜಿಪಿಎ) ಮತ್ತು ಕರಾರು ಪತ್ರ ಮಾಡಿಸಿಕೊಂಡು ದಾಖಲೆಗಳನ್ನು ತಿರುಚಿದ್ದಾರೆ” ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ದಾಖಲೆಗಳನ್ನು ಉಲ್ಲೇಖಿಸಿದರು.
“ಅರ್ಜಿದಾರರ ಸ್ವಾಧೀನಾನುಭವದಲ್ಲಿರುವ ಒಂಭತ್ತು ಎಕರೆ ಬೆಲೆ ಬಾಳುವ ಆಸ್ತಿಯನ್ನು ಪ್ರತಿವಾದಿ ಬಿ ಸೀನ ಮತ್ತಿತರರು ಶುದ್ಧ ಕ್ರಯಕ್ಕೆ ಮಾರಾಟ ಮಾಡಲಾಗಿದೆ ಎಂಬ ಪತ್ರ ಸೃಷ್ಟಿಸಿ 2008ರಲ್ಲಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ಮೂಲ ದಾವೆ ಮುಖಾಂತರ ಅರ್ಜಿದಾರರ ವಿರುದ್ಧ ಪ್ರತಿಬಂಧಕ ಆದೇಶ ಪಡೆದುಕೊಂಡು ಸಲ್ಲದ ವ್ಯಾಜ್ಯದಲ್ಲಿ ಸಿಲುಕಿಸಿ ಭಾರಿ ಮೊತ್ತದ ಆಸ್ತಿ ಕಬಳಿಕೆಗೆ ಪ್ರಯತ್ನಿಸಿದ್ದಾರೆ” ಎಂದು ದೂರಿದರು.
“ಈ ಸಂಬಂಧ ಕೌಲ್ ಬಜಾರ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 465, 467, 470, 471, 463 ಮತ್ತು 464ರ ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಪ್ರತಿವಾದಿ ಜಿ ಕಿರೀಟಿ ರೆಡ್ಡಿ ಪ್ರಭಾವಿ ವ್ಯಕ್ತಿ ಆಗಿದ್ದಾರೆ. ಅರ್ಜಿದಾರರಿಗೆ ಜೀವ ಭಯ ಇದ್ದು ಅಗತ್ಯ ರಕ್ಷಣೆ ಒದಗಿಸಬೇಕು ಮತ್ತು ಈ ಪ್ರಕರಣವನ್ನು ಸಿಐಡಿ ಅಥವಾ ಎಸ್‌ಐಟಿ ಇಲ್ಲವೇ ಸೂಕ್ತ ತನಿಖಾ ಸಂಸ್ಥೆಗೆ ವಹಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು.
ಅರ್ಜಿದಾರರ ಪರ ವಕೀಲ ಪವನ ಸಾಗರ ವಕಾಲತ್ತು ವಹಿಸಿದ್ದಾರೆ.