

ಕರ್ನಾಟಕ ವಕೀಲರ ಕ್ಷೇಮನಿಧಿಯ ಅಡಿ ನೀಡಲಾಗುತ್ತಿರುವ ಮರಣ ಪರಿಹಾರ ಹಾಗೂ ನಿವೃತ್ತಿ ಸೌಲಭ್ಯದ ಮೊತ್ತ ಹೆಚ್ಚಳ ಮತ್ತು ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮ ರೂಪಿಸಲು ಅನುವಾಗುವಂತೆ ಮೂಲನಿಧಿ ಸ್ಥಾಪಿಸುವ ಪ್ರಸ್ತಾವಗಳು ಪರಿಶೀಲನೆಯಲ್ಲಿವೆ ಎಂದು ರಾಜ್ಯ ಸರ್ಕಾರವು ವಿಧಾನಸಭೆಗೆ ತಿಳಿಸಿದೆ.
ಹುಬ್ಬಳ್ಳಿ-ಧಾರವಾಡ ಕೇಂದ್ರೀಯ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಈಚೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಉತ್ತರಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ನೋಂದಾಯಿತ ಖಾಸಗಿ ವಕೀಲರ ಸಂಖ್ಯೆ ಎಷ್ಟು ಮತ್ತು ಕರ್ನಾಟಕ ವಕೀಲರ ಕ್ಷೇಮನಿಧಿ ಅಡಿಯಲ್ಲಿ ನೀಡಲಾಗುತ್ತಿರುವ ಮರಣ ಪರಿಹಾರ ಹಾಗೂ ನಿವೃತ್ತಿ ಸೌಲಭ್ಯದ ಮೊತ್ತವನ್ನು ಪ್ರಸ್ತುತ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಹೆಚ್ಚಿಸುವ ಪ್ರಸ್ತಾವ ಸರ್ಕಾರದ ಮುಂದಿದೆಯೇ ಎನ್ನುವ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಡಿ ಧಾರವಾಡ ಜಿಲ್ಲೆಯಲ್ಲಿ 5,582 ವಕೀಲರು ನೋಂದಾಯಿಸಿದ್ದಾರೆ. ಅಂತೆಯೇ ಮರಣ ಪರಿಹಾರ ನಿವೃತ್ತಿ ಸೌಲಭ್ಯದ ಮೊತ್ತವನ್ನು ಪ್ರಸ್ತುತ ಆರ್ಥಿಕ ವರ್ಷದಿಂದ ಹೆಚ್ಚಿಸುವ ಪ್ರಸ್ತಾವ ಸರ್ಕಾರದ ಮುಂದಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ಮುಂದುವರಿದು, ಖಾಸಗಿ ವಕೀಲರು ಮತ್ತು ಅವರ ಕುಟುಂಬದವರಿಗೆ ಸರ್ಕಾರಿ ನೌಕರರ ಮಾದರಿಯಲ್ಲಿ ಅಥವಾ ವಿಶೇಷ ಯೋಜನೆಯಡಿ ರಿಯಾಯಿತಿ ದರದ ಆರೋಗ್ಯ ವಿಮೆ ಒದಗಿಸುವ ಪ್ರಸ್ತಾವ ಸರ್ಕಾರದ ಮುಂದಿದೆಯೇ; ಈ ಯೋಜನೆಯನ್ನು ಧಾರವಾಡ ಜಿಲ್ಲೆಯ ಎಲ್ಲಾ ವಕೀಲರ ಸಂಘಗಳ ಸದಸ್ಯರಿಗೆ ವಿಸ್ತರಿಸಲಾಗುವುದೇ? ಎಂಬ ಪ್ರಶ್ನೆಗೆ ರಾಜ್ಯದ ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮ ರೂಪಿಸಲು ಅನುವಾಗುವಂತೆ ಮೂಲನಿಧಿ ಸ್ಥಾಪಿಸುವ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದೂ ಸಚಿವ ಪಾಟೀಲ್ ತಿಳಿಸಿದ್ದಾರೆ.
ಅಂತೆಯೇ ಧಾರವಾಡ ಜಿಲ್ಲೆಯಲ್ಲಿ ಆರು ನ್ಯಾಯಧೀಶರ ಹುದ್ದೆಗಳು ಮತ್ತು 123 ನ್ಯಾಯಾಂಗ ಸಿಬ್ಬಂದಿ ಹುದ್ದೆ ಖಾಲಿ ಇವೆ ಎಂದು ಸರ್ಕಾರ ಮಾಹಿತಿ ಒದಗಿಸಿದೆ. ಹೊಸ ಕಾನೂನು ಪದವೀಧರರಿಗೆ ಪ್ರೋತ್ಸಾಹ ಧನ ಪಾವತಿಸುವ ಯೋಜನೆಯನ್ನು ಮುಂದುವರಿಸಲಾಗಿದೆ. ಅದರ ಭಾಗವಾಗಿ ಧಾರವಾಡ ಜಿಲ್ಲೆಯ 23 ನವ ಕಾನೂನು ಪದವೀಧರರು ಯೋಜನೆಯಡಿ ಆಯ್ಕೆಯಾಗಿದ್ದಾರೆ. ಈ ಯೋಜನೆಯಡಿ ವಾರ್ಷಿಕ ವರಮಾನ ಪುನರ್ ಪರಿಶೀಲಿಸುವ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದು ಸರ್ಕಾರ ತಿಳಿಸಿದೆ.