21 ವರ್ಷಕ್ಕೆ ಹೆಣ್ಣುಮಕ್ಕಳ ವಿವಾಹ ವಯೋಮಿತಿ ಏರಿಕೆ: ಪ್ರಸ್ತಾವನೆಯ ಸುತ್ತ ಅಪಸ್ವರ ಕೇಳಿಬರುತ್ತಿರುವುದು ಏಕೆ?

ಪ್ರಸ್ತಾವನೆ ಕುರಿತು ಮಕ್ಕಳ ಮತ್ತು ಮಹಿಳಾ ಹಕ್ಕುಗಳ ತಜ್ಞರು, ಹೋರಾಟಗಾರರು ವಿಶೇಷ ಉತ್ಸಾಹವನ್ನೇನೂ ತೋರಿಲ್ಲ. ಇರುವ ಕಾಯಿದೆಯೇ ಸಮರ್ಪಕವಾಗಿ ಅನುಷ್ಠಾನ ಆಗದಿರುವಾಗ ಕೇವಲ ವಯೋಮಿತಿಯ ಹೆಚ್ಚಳ ಎಷ್ಟು ಪರಿಣಾಮಕಾರಿ ಎನ್ನುವ ಪ್ರಶ್ನೆ ಮೂಡಿದೆ.
21 ವರ್ಷಕ್ಕೆ ಹೆಣ್ಣುಮಕ್ಕಳ ವಿವಾಹ ವಯೋಮಿತಿ ಏರಿಕೆ: ಪ್ರಸ್ತಾವನೆಯ ಸುತ್ತ ಅಪಸ್ವರ ಕೇಳಿಬರುತ್ತಿರುವುದು ಏಕೆ?

ತಾಯಂದಿರ ಮರಣ ಪ್ರಮಾಣ ತಡೆ, ಬಾಲ್ಯ ವಿವಾಹಕ್ಕೆ ನಿರ್ಬಂಧ, ಶಿಶು ಆರೋಗ್ಯ, ಗರ್ಭಕೋಶ ಸುರಕ್ಷತೆ, ಹೆಣ್ಣುಮಕ್ಕಳ ಬೌದ್ಧಿಕ ವಿಕಸನ ಇತ್ಯಾದಿ ಅಂಶಗಳ ದೃಷ್ಟಿಯಿಂದ ಹೆಣ್ಣುಮಕ್ಕಳ ವಿವಾಹ ವಯೋಮಿತಿಯನ್ನು 18 ರಿಂದ 21 ವರ್ಷಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಅಗತ್ಯ ತಯಾರಿ ನಡೆಸಿದೆ. ಈ ಕುರಿತು ಅಧ್ಯಯನ ನಡೆಸಿ ಶಿಫಾರಸು ಸಲ್ಲಿಸಲು ವಿಶೇಷ ಕಾರ್ಯಪಡೆ ರಚಿಸಲಾಗುತ್ತದೆ ಎಂದು ಈ ಹಿಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದರು. ಅದರಂತೆ ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಅವರ ನೇತೃತ್ವದಲ್ಲಿ ಹತ್ತು ಮಂದಿ ಸದಸ್ಯರ ಕಾರ್ಯಪಡೆ ಕೂಡ ರೂಪುಗೊಂಡಿತು.

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಆಗಸ್ಟ್‌ 15ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೆಣ್ಣುಮಕ್ಕಳ ಮದುವೆ ವಯೋಮಿತಿಯನ್ನು ಪರಿಷ್ಕರಿಸುವ ಸುಳಿವು ನೀಡಿದ ಬಳಿಕ ಈ ಕುರಿತ ಚರ್ಚೆಯೂ ದಟ್ಟವಾಗುತ್ತಾ ಹೋಯಿತು. ಆದರೆ ಈ ಬಗೆಯ ಪರಿಕಲ್ಪನೆಗಳು ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತವೆ. ಅವುಗಳನ್ನು ಕಾರ್ಯಗತಗೊಳಿಸುವಲ್ಲಿ ನೂರಾರು ಸಮಸ್ಯೆಗಳಿವೆ ಎನ್ನುವುದು ಅನೇಕ ತಜ್ಞರ ಅಭಿಮತ. ಆ ಕಾರಣಕ್ಕೆ ಅನೇಕ ಸಂಘಟನೆಗಳಿಗೆ ವಯೋಮಿತಿ ಏರಿಕೆ ಕುರಿತಂತೆ ಸಹಮತ ಇಲ್ಲ.

ಮಕ್ಕಳು ಮತ್ತು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ದೇಶದ 21 ಸಂಘಟನೆಗಳು ʼನ್ಯಾಷನಲ್‌ ಕೊವಲಿಷನ್ ಅಡ್ವೊಕೇಟಿಂಗ್‌ ಫಾರ್‌ ಅಡೋಲೆಸೆಂಟ್‌ ಕನ್ಸರ್ನ್ಸ್‌ʼ (ಹದಿಹರೆಯದವರ ಕಾಳಜಿಯ ಪರವಾದ ರಾಷ್ಟ್ರೀಯ ಸಮ್ಮಿಶ್ರ ಒಕ್ಕೂಟ) ಎಂಬ ಸಂಘಟನೆ ರೂಪಿಸಿಕೊಂಡು ಹೆಣ್ಣುಮಕ್ಕಳ ವಿವಾಹ ವಯೋಮಿತಿ ಕುರಿತ ಹಲವು ತಕರಾರುಗಳಿರುವ ನಿವೇದನಪತ್ರವನ್ನು ಕಳೆದ ಜುಲೈನಲ್ಲಿ ಜಯಾ ಜೇಟ್ಲಿ ನೇತೃತ್ವದ ಕಾರ್ಯಪಡೆ ಮುಂದಿಟ್ಟಿವೆ. ವಯೋಮಿತಿ ಏರಿಕೆಯ ಅಗತ್ಯವನ್ನೇ ಅವು ಪ್ರಶ್ನೆ ಮಾಡಿವೆ. ಅಲ್ಲದೆ ಸಮಾಜದಲ್ಲಿ ಸುಧಾರಣೆ ಎಂಬುದು ನಿಧಾನವೂ, ಸಂಕೀರ್ಣವೂ ಹಲವು ಅಂಶಗಳ ಮೇಲೆ ಪರಿಣಾಮ ಬೀರುವಂಥದ್ದೂ ಆಗಿರುತ್ತದೆ. ಹೀಗಾಗಿ ಇರುವ ಕಾನೂನುಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಒಕ್ಕೂಟ ಸಲಹೆ ನೀಡಿದೆ.

ಇದರೊಂದಿಗೆ ಹೆಣ್ಣುಮಕ್ಕಳ ವಯೋಮಿತಿ ಪರಿಷ್ಕರಿಸುವ ವಿಚಾರವನ್ನು ನಾಡಿನ ಅನೇಕ ಮಕ್ಕಳ ಮತ್ತು ಮಹಿಳಾ ಹಕ್ಕುಗಳ ತಜ್ಞರು ಹಲವು ನೆಲೆಗಳಲ್ಲಿ ವಿಶ್ಲೇಷಿಸಿದ್ದಾರೆ. ಹೆಣ್ಣುಮಕ್ಕಳ ಮದುವೆಗೆ 18 ವರ್ಷ ವಯೋಮಿತಿಯ ನಿಯಮ ಜಾರಿಯಲ್ಲಿ ಇರುವಾಗಲೇ ಸುಧಾರಣೆ ತರಲು ವ್ಯವಸ್ಥೆಗೆ ಸಾಧ್ಯವಾಗಿಲ್ಲ. ಹೀಗಿರುವಾಗ 21 ವರ್ಷಕ್ಕೆ ವಯೋಮಿತಿ ಏರಿಸುವುದರಿಂದ ಸಮಸ್ಯೆಗಳ ಸಂಖ್ಯೆ ಹೆಚ್ಚುತ್ತದೆ ವಿನಾ ಪರಿಹಾರ ದೊರೆಯದು. ಬದಲಿಗೆ ಕಾನೂನನ್ನು ಶೇಕಡಾ ನೂರರಷ್ಟು ಅನುಷ್ಠಾನಕ್ಕೆ ತಂದರೆ ಮಾತ್ರ ಸುಧಾರಣೆ ಸಾಧ್ಯವಿದೆ. ಜೊತೆಗೆ ಮಹಿಳಾ ಸಬಲೀಕರಣದ ಪ್ಯಾಕೇಜ್‌ಗಳನ್ನು ಪೂರಕವಾಗಿ ನೀಡಬೇಕು. ತಳಮಟ್ಟದಲ್ಲಿ ಅಂದರೆ ವಿಕೇಂದ್ರೀಕೃತ ಹಂತದಲ್ಲಿ ಕಾನೂನು ಜಾರಿ ಎಂಬುದು ಇಲ್ಲವೇ ಇಲ್ಲ. ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿ, ಪೊಲೀಸರ ಮಕ್ಕಳ ರಕ್ಷಣಾ ಘಟಕ, ತಹಶೀಲ್ದಾರರು, ಬಿಇಒ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿಗಳಿಗೆ ಮಕ್ಕಳ ರಕ್ಷಣೆಯ ಜವಾಬ್ದಾರಿ ವಹಿಸಲಾಗಿದೆ. ಹೀಗಿದ್ದೂ, ಹೆಣ್ಣಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರರು ಆದರೆ ಯಾರೂ ಜವಾಬ್ದಾರರಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಬಾಲ್ಯ ವಿವಾಹಗಳು ಸಾಕಷ್ಟು ಸಂಖ್ಯೆಯಲ್ಲಿ ನಡೆಯುತ್ತಿದ್ದರೂ ಅವುಗಳು ವರದಿಯಾಗುತ್ತಿಲ್ಲ ಎಂಬ ಮಾತುಗಳು ಢಾಳಾಗಿಯೇ ಕೇಳಿಬರುತ್ತಿವೆ.

ದಿಢೀರನೆ ಇಂತಹ ಕಾಯಿದೆ ರೂಪುಗೊಂಡರೆ ಆಗುವ ಪರಿಣಾಮಗಳನ್ನು ಕೂಡ ತಜ್ಞರು ಅಂದಾಜಿಸಿದ್ದಾರೆ. ಅವುಗಳು ಹೀಗಿವೆ:

 • ಬಾಲ್ಯ ವಿವಾಹಗಳ ಸಂಖ್ಯೆ ಮಿತಿ ಮೀರುತ್ತದೆ.

 • ದೌರ್ಜನ್ಯದ ಪ್ರಮಾಣ ಹೆಚ್ಚುತ್ತದೆ.

 • ಅನಗತ್ಯ ಗರ್ಭಧಾರಣೆ ಹೆಚ್ಚಿ ತಾಯ್ತನದ ಆರೋಗ್ಯ ಕುಸಿಯುತ್ತದೆ.

 • ಹೆಣ್ಣುಮಕ್ಕಳ ಸಾಮಾಜಿಕ, ಕೌಟುಂಬಿಕ ಸ್ಥಿತಿಗತಿ, ಭದ್ರತೆ ಮೇಲೆ ದುಷ್ಪರಿಣಾಮ ಬೀರುತ್ತದೆ.

 • ಪೋಷಕರಿಗೆ ಹೆಣ್ಣುಮಕ್ಕಳು ಹೊರೆಯಾಗಿ ಕಾಣಬಹುದು.

 • ಕಾಯಿದೆ ನಾಮ್‌ಕೇವಾಸ್ತೆಯಾಗಿ ಉಳಿಯಬಹುದು.

 • ಹಲವಾರು ಕಾಯಿದೆಗಳಿಗೆ ತಿದ್ದುಪಡಿ ಮಾಡುವ ಕಸರತ್ತು ನಡೆಸಬೇಕಾಗುತ್ತದೆ.

ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಮಾತನಾಡಿದ ʼಪ್ರೇರಣಾ ವಿಕಾಸ ವೇದಿಕೆʼಯ ಸಂಸ್ಥಾಪಕರಾದ ರೂಪ ಹಾಸನ ʼ2009ರಲ್ಲಿ ಶೇ 48ರಷ್ಟು ಇದ್ದ ಹದಿನೆಂಟು ವರ್ಷದೊಳಗಿನ ಹೆಣ್ಣುಮಕ್ಕಳ ವಿವಾಹ ಪ್ರಮಾಣ ಈಗ ಶೇ 30ಕ್ಕೆ ಇಳಿದಿದೆ ಎನ್ನುವುದೇನೋ ನಿಜ. ಆದರೆ ಅಪಹರಣ ಪ್ರಮಾಣ ಪ್ರತಿವರ್ಷ ಏರಿಕೆಯಾಗುತ್ತಲೇ ಇದೆ. ಗುಜ್ಜರ್‌ ವಿವಾಹ, ವೇಶ್ಯಾವಾಟಿಕೆಯಂತಹ ಚಟುವಟಿಕೆಗಳಿಗೆ ಅಪ್ರಾಪ್ತ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ. ಅತ್ಯಂತ ನಿರ್ಲಕ್ಷಿತ ಕ್ಷೇತ್ರ ಎಂದರೆ ಹೆಣ್ಣುಮಕ್ಕಳ ರಕ್ಷಣೆ ಕುರಿತಾದದ್ದು. ಕಾನೂನುಗಳೇನೋ ಇವೆ. ಆದರೆ ಅವು ತಮ್ಮ ಪಾಡಿಗೆ ಇವೆʼ ಎನ್ನುತ್ತಾರೆ.

ವಯೋಮಿತಿ ಪರಿಷ್ಕರಣೆಯ ಪರಿಕಲ್ಪನೆ ತುಂಬಾ ಅಸ್ಪಷ್ಟವಾಗಿದೆ ಎನ್ನುತ್ತಾರೆ ಅವರು. ʼವಯೋಮಿತಿಯನ್ನು 21ಕ್ಕೆ ಏರಿಸಿದರಷ್ಟೇ ಸಾಲದು. ಬಾಲ್ಯ ವಿವಾಹ, ವೇಶ್ಯಾವಾಟಿಕೆ, ಮಾನವ ಕಳ್ಳಸಾಗಣೆ ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಕಾಯಿದೆಯನ್ನುಜಾರಿಗೆ ತಾರದ ಅಧಿಕಾರಶಾಹಿಯನ್ನು ಶಿಕ್ಷಿಸುವಂತಹ ಕೆಲಸವಾಗಬೇಕು. ಬಾಲ್ಯವಿವಾಹವನ್ನು ತಡೆಯಲೆಂದು ಪ್ರತ್ಯೇಕವಾಗಿ ʼಬಾಲ್ಯ ವಿವಾಹ ನಿಯಂತ್ರಣ ಆಯೋಗʼವನ್ನು ಸ್ಥಾಪಿಸಬೇಕು ಎನ್ನುವ ಆಶಯ ಅವರದು.

ʼವಯಸ್ಸಿನ ಕಾರಣಕ್ಕಷ್ಟೇ ಹೆಣ್ಣುಮಕ್ಕಳ ಮದುವೆ ನಡೆಯುತ್ತಿಲ್ಲʼ ಎನ್ನುತ್ತಾರೆ ಅಸ್ತಿತ್ವ ಲೀಗಲ್‌ ಟ್ರಸ್ಟ್‌ ಸಂಸ್ಥಾಪಕರು ಮತ್ತು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಬೆಂಗಳೂರು ಘಟಕದ ಅಧ್ಯಕ್ಷರಾದ ಅಂಜಲಿ ರಾಮಣ್ಣ. ಅವರ ಪ್ರಕಾರ ಬಡತನ, ಅಭದ್ರತೆ, ಅನಕ್ಷರತೆ, ಪ್ರೇಮ ಪ್ರಕರಣಗಳ ಭೀತಿ, ಮಾನವ ಕಳ್ಳಸಾಗಣೆಯಂತಹ ಅನೇಕ ಅಂಶಗಳು ಇದರ ಹಿಂದೆ ಕೆಲಸ ಮಾಡುತ್ತಿವೆ. ಕೋವಿಡ್‌ ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ಸಾಂಕ್ರಾಮಿಕ ರೋಗದ ಕಾರಣಕ್ಕೇ ಅನೇಕ ಬಾಲ್ಯ ವಿವಾಹಗಳು ನಡೆದಿವೆ. ಕೆಲವು ವರದಿಯಾಗುತ್ತವೆ ಅನೇಕವು ವರದಿಯಾಗುವುದಿಲ್ಲ ಎನ್ನುತ್ತಾರೆ.

ಪ್ರಸ್ತಾವನೆ ರೂಪುಗೊಂಡ ಬಗೆಯನ್ನು ವಿವರಿಸಿರುವ ಅವರು ʼಗುಂಪೊಂದು ಜನಸಂಖ್ಯೆ ನಿಯಂತ್ರಿಸುವ ಸಂಬಂಧ ಈ ಪ್ರಸ್ತಾವನೆಯ ಕುರಿತು ಧ್ವನಿ ಎತ್ತಿದೆ. ಮತ್ತೊಂದು ಗುಂಪು ಹೆಣ್ಣುಮಕ್ಕಳ ಸ್ವಾಸ್ಥ್ಯದ ನಿಟ್ಟಿನಲ್ಲಿ ಕಾನೂನು ಜಾರಿಯಾಗಬೇಕು ಎನ್ನುತ್ತಿದೆ. ಆದರೆ ಜನಸಂಖ್ಯೆ ನಿಯಂತ್ರಣಕ್ಕೂ ಹೆಣ್ಣುಮಕ್ಕಳ ಮದುವೆಗೂ ಸಂಬಂಧವೇ ಇಲ್ಲ. ಮದುವೆಯೇ ಆಗದೆ ಎಷ್ಟೋ ಮಕ್ಕಳಿಗೆ ಜನ್ಮಕೊಟ್ಟ ಹದಿಹರೆಯದವರಿದ್ದಾರೆ. ಹಾಗೆಯೇ ಪೂರ್ಣ ಪ್ರಮಾಣದಲ್ಲಿ ದೈಹಿಕ ಫಲವತ್ತತೆ ಪಡೆದವರೂ ಮಾತೃತ್ವ ಮರಣ ಕಂಡಿದ್ದಾರೆ. ಮಕ್ಕಳ ವೈಯಕ್ತಿಕ ಹಕ್ಕುಗಳಲ್ಲಿ ಸರ್ಕಾರ ಮಧ್ಯಪ್ರವೇಶಿಸುವಂತೆ ಇಲ್ಲ. ಇಂತಹ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿದ ನಂತರ ಸರ್ಕಾರ ದೊಡ್ಡ ಮಟ್ಟದಲ್ಲಿ ಜನಾಭಿಪ್ರಾಯ‌ ಹಾಗೂ ತಜ್ಞರ ಅಭಿಪ್ರಾಯ ಪಡೆಯಬೇಕು. ನಂತರವಷ್ಟೇ ತಿದ್ದುಪಡಿಗೆ ಮುಂದಾಗಬೇಕುʼ ಎನ್ನುತ್ತಾರೆ ಅವರು.

ಬಾಲ್ಯ ವಿವಾಹ ಕೇವಲ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದೆ ಎಂಬ ವಾದಕ್ಕೆ ಅವರ ಆಕ್ಷೇಪ ಇದೆ. ʼಹಳ್ಳಿಗಳಷ್ಟೇ ಅಲ್ಲ ನಗರದಲ್ಲಿ, ಅನಕ್ಷರಸ್ಥರಲ್ಲದೆ ವಿದ್ಯಾವಂತರು ಕೂಡ ಬಾಲ್ಯ ವಿವಾಹಕ್ಕೆ ಕಟ್ಟುಬಿದ್ದಿದ್ದಾರೆ. ದೊಡ್ಡ ದೊಡ್ಡ ಶಾಲೆಗಳಲ್ಲಿ ಓದಿದ ಹೆಣ್ಣುಮಕ್ಕಳು ಬಾಲ್ಯ ವಿವಾಹಕ್ಕೆ ತುತ್ತಾಗಿದ್ದಾರೆ. ಇವುಗಳ ಬಗ್ಗೆ ಸರ್ಕಾರಗಳ ನಿಲುವು ಮೊದಲು ಸ್ಪಷ್ಟವಾಗಬೇಕುʼ ಎನ್ನುತ್ತಾರೆ ಅವರು.

ಯುನಿಸೆಫ್‌ ಯೋಜನೆಯಲ್ಲಿ ಕೆಲಸ ಮಾಡಿದ ಅನುಭವ ಇರುವ ಮಕ್ಕಳ ಹಕ್ಕುಗಳ ಕಾರ್ಯಕರ್ತ ಕೆ ರಾಘವೇಂದ್ರ ಭಟ್‌ ,ʼ "21 ವರ್ಷಕ್ಕೆ ಹೆಣ್ಣುಮಕ್ಕಳ ಮದುವೆ ವಯೋಮಿತಿ ಏರಿಕೆ ಮಾಡುವುದರಿಂದ ಬಾಲ್ಯ ವಿವಾಹ ಕಡಿಮೆಯಾಗುತ್ತದೆ ಎಂಬುದಕ್ಕೆ ಖಾತ್ರಿ ಏನು?" ಎಂದು ಪ್ರಶ್ನಿಸುತ್ತಾರೆ. ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ದೇಶದ ಬಹುಪಾಲು ಸಂಘ ಸಂಸ್ಥೆಗಳು, ತಜ್ಞರಿಗೆ ಸಹಮತ ಇಲ್ಲ ಎನ್ನುವ ಅವರು ʼಇಂತಹ ಮಾರ್ಪಾಡು ತರುವುದರಿಂದ ಸಂಖ್ಯಾತ್ಮಕವಾಗಿ ದೌರ್ಜನ್ಯಗಳ ಪ್ರಮಾಣ ಇನ್ನಷ್ಟು ಹೆಚ್ಚುತ್ತದೆ. ಹೆಣ್ಣುಮಕ್ಕಳ ಸಂರಕ್ಷಣೆ ಕುರಿತಂತೆ ಅಗತ್ಯ ಕ್ರಮ ಕೈಗೊಂಡ ಬಳಿಕವಷ್ಟೇ ವಯೋಮಿತಿ ಏರಿಕೆ ಬಗ್ಗೆ ಗಮನ ಹರಿಸಬೇಕುʼ ಎಂದು ಆಗ್ರಹಿಸುತ್ತಾರೆ.

ಇನ್ನೊಂದೆಡೆ ಕೇಂದ್ರ ಸರ್ಕಾರದ ಈ ನಿರ್ಧಾರ ಹಲವು ಕಾನೂನಾತ್ಮಕ ಸಮಸ್ಯೆಗಳಿಗೂ ಎಡೆ ಮಾಡಿಕೊಡಲಿದೆ ಎಂಬ ಆತಂಕ ಇದೆ. ಅನೇಕ ಕಾಯಿದೆಗಳ ಸ್ವರೂಪವನ್ನು ಬದಲಿಸಬೇಕಾಗುತ್ತದೆ. ಬಾಲ್ಯ ವಿವಾಹ ತಡೆ ಕಾಯಿದೆ, ಪೋಕ್ಸೊ ಕಾಯಿದೆ ಇತ್ಯಾದಿಗಳ ಅರ್ಥವನ್ನು ನಂತರದ ದಿನಗಳಲ್ಲಿ ಬೇರೆ ರೀತಿ ವ್ಯಾಖ್ಯಾನಿಸಬೇಕಾಗುತ್ತದೆ. ಅಪ್ರಾಪ್ತ ವಯಸ್ಸು ಯಾವುದು ಮದುವೆಯ ವಯಸ್ಸು ಯಾವುದು ಎಂಬ ಬಗ್ಗೆ ಸಾಕಷ್ಟು ಗೊಂದಲಗಳು ಏಳಲಿವೆ ಎಂದು ಹೇಳಲಾಗುತ್ತಿದೆ.

ವಕೀಲರೂ, ಸಿಡಬ್ಲ್ಯೂಸಿ ಶಿವಮೊಗ್ಗ ಜಿಲ್ಲಾ ಘಟಕದ ಸದಸ್ಯರೂ ಆಗಿರುವ ಪ್ರತಿಭಾ ಎಂ. ವಿ. ಸಾಗರ ʼಕೋವಿಡ್‌ ರೀತಿಯ ದೊಡ್ಡ ಸವಾಲುಗಳೆದ್ದಿರುವ ಸಂದರ್ಭದಲ್ಲಿ ಇಂತಹ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳಲು ಏಕೆ ಮುಂದಾಯಿತೋ ತಿಳಿಯುತ್ತಿಲ್ಲ. ಬಡತನದಿಂದಾಗಿ ಮದುವೆ ಮಾಡಿಕೊಡಲಾಗದೆ ಹೆಣ್ಣುಮಕ್ಕಳನ್ನು ಮಾರಾಟ ಮಾಡುವ ಸ್ಥಿತಿ ಇದೆ. ಅದರ ಜೊತೆಗೆ ಕೋವಿಡ್‌ ಬೇರೆ ವಕ್ಕರಿಸಿ ಬಡವರ ಸ್ಥಿತಿ ಇನ್ನಷ್ಟು ಕಂಗೆಟ್ಟಿದೆ. ಹೀಗಿರುವಾಗ ವಯೋಮಿತಿಯನ್ನು 21 ವರ್ಷಕ್ಕೆ ಏರಿಸುವುದರಿಂದ ಮಕ್ಕಳ ಮದುವೆ ಇನ್ನಷ್ಟು ದಿನ ತಡವಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಂದೆಡೆ ಮಕ್ಕಳ ಜೈವಿಕ ಅಗತ್ಯಗಳನ್ನು ಅಲ್ಲಗಳೆಯುವ ಹಾಗೆ ಇರುವುದಿಲ್ಲ. ಮತ್ತೊಂದೆಡೆ ಕಾನೂನಿನ ಹೊರೆ ಉಂಟಾಗಿ ಬಡ ಪೋಷಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಬೇಡವಾದ ಗರ್ಭಧಾರಣೆ, ಮಾನಸಿಕ ಒತ್ತಡದಂತಹ ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತವೆ ʼ ಎಂದು ಕಳವಳ ವ್ಯಕ್ತಪಡಿಸುತ್ತಾರೆ.

ರಾಜ್ಯದ ಗಡಿಭಾಗವಾದ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಹಲವು ವರ್ಷಗಳಿಂದ ಹೆಣ್ಣಮಕ್ಕಳಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ರೂಪಿಸಿರುವ ಜಾಗೃತ ಮಹಿಳಾ ಒಕ್ಕೂಟದ ಶಾರದಾ ಗೋಪಾಲ್‌ ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಎಚ್ಚರಿಕೆ ನೀಡುತ್ತಾರೆ. ʼನಮ್ಮಲ್ಲಿ ತುಂಬಾ ಒಳ್ಳೊಳ್ಳೆ ಕಾಯಿದೆಗಳೇನೋ ಇವೆ. ಆದರೆ ಅವೆಲ್ಲವೂ ಪುಸ್ತಕದ ಬದನೆಕಾಯಿ ರೀತಿ ಆಗಿವೆ. ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬಾಲ್ಯವಿವಾಹ ತಡೆಯಲು ಸೂಕ್ತ ಕ್ರಮ ಕೈಗೊಳ್ಳದೆ ಬರೀ ಸಂಖ್ಯೆ ಏರಿಕೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಪೋಷಕರ ದಯನೀಯ ಸ್ಥಿತಿ ನೋಡಿದರೆ ನಾವೇ ಅಸಹಾಯಕರಾಗಿ ಹೋಗುತ್ತೇವೆʼ ಎನ್ನುತ್ತಾರೆ ಅವರು.

ಮುಂದುವರೆದು, "ಶಿಕ್ಷಣವಷ್ಟೇ ಹೆಣ್ಣುಮಕ್ಕಳಿಗೆ ದಾರಿದೀಪವಾಗಬಲ್ಲದು. ಆದರೆ ಮಕ್ಕಳಿಗೆ 14 ವರ್ಷದವರೆಗೆ ಕಡ್ಡಾಯ ಶಿಕ್ಷಣ ಎಂಬ ನಿಯಮವಿದೆ. ಆದರೆ 21ರವರೆಗೆ ಮದುವೆಯಾಗುವಂತಿಲ್ಲ. ಒಂದು ವೇಳೆ 14 ವರ್ಷಕ್ಕೆ ಮಗು ಶಾಲೆ ತೊರೆದರೆ 21 ವರ್ಷದವರೆಗೆ ಏನು ಮಾಡಬೇಕು? ಇನ್ನೂ ಒಂದು ಉದಾಹರಣೆ ಕೊಡುತ್ತೇನೆ. ಎಷ್ಟೋ ಮಂದಿಗೆ ಹೆಣ್ಣುಮಕ್ಕಳ ಮದುವೆ ವಯೋಮಿತಿ 18 ವರ್ಷ ಎಂಬುದು ತಿಳಿದಿಲ್ಲ. ಹಾಗಾಗಿ ಆಮೂಲಾಗ್ರ ಬದಲಾವಣೆಯಷ್ಟೇ ಈಗಿರುವ ಪರಿಹಾರ" ಎನ್ನುತ್ತಾರೆ ಅವರು.

ಯಾವ ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ?

 • ನಿಯಮ ಪಾಲಿಸದ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.

 • ತಳಮಟ್ಟದಲ್ಲಿ ಜನಜಾಗೃತಿ ಉಂಟುಮಾಡಬೇಕು.

 • ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು.

 • ಶಿಕ್ಷಣ ಒದಗಿಸಬೇಕು.

 • ಶಾಲೆ ತೊರೆಯದಂತೆ ನಿಗಾ ವಹಿಸಬೇಕು.

 • ಹೆಣ್ಣುಮಕ್ಕಳ ಕಾಲೇಜು ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ, ಸವಲತ್ತುಗಳನ್ನು ಕಲ್ಪಿಸಬೇಕು

 • ವಿವಿಧ ಇಲಾಖೆಗಳ ಅಧಿಕಾರಿಗಳಲ್ಲಿ ಸಮನ್ವಯತೆ ಮೂಡಿಸಬೇಕು.

 • ಲೈಂಗಿಕ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಬೇಕು.

 • ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ, ಸಾಮಾಜಿಕ ಸ್ಥಾನಮಾನ, ಆರ್ಥಿಕತೆಗೆ ಮುಂದಾಗಬೇಕು.

Kannada Bar & Bench
kannada.barandbench.com