ಬಾಲ್ಯ ವಿವಾಹ ನಿಷೇಧಿಸುವ ಕಾನೂನು ವಿವಿಧ ಸಮುದಾಯಗಳಿಗೆ ಸರಿಹೊಂದುವಂತೆ ಇರಬೇಕು ಮತ್ತು ಅದನ್ನು ಯಶಸ್ವಿಗೊಳಿಸಲು ಕಾನೂನನ್ನು ಜಾರಿಗೊಳಿಸುವಾಗ ಸಮುದಾಯ ಪ್ರೇರಿತ ವಿಧಾನ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.
ಬಾಲ್ಯ ವಿವಾಹ ನಡೆಸುವ ವ್ಯಕ್ತಿಗಳನ್ನು ತಡೆಯುವ ಕೆಲಸ ಪರಿಣಾಮಕಾರಿಯಾಗಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ವಿಭಾಗೀಯ ಪೀಠ ಹೇಳಿದೆ.
“ಕಾನೂನು ಜಾರಿಯ ಉದ್ದೇಶವು ಕಾನೂನು ಕ್ರಮ ಜರುಗಿಸುವುದಾಗಿರಬಾರದು, ಏಕೆಂದರೆ ಕಾನೂನು ಕ್ರಮ ಜರುಗಿಸುವ ವಿಧಾನವು ವ್ಯತಿರಿಕ್ತಾತ್ಮಕ ಎಂದು ಸಾಬೀತಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ, ಬಾಲ್ಯ ವಿವಾಹ ಕಾಯಿದೆ 2006 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಲವು ವಲಯದಲ್ಲಿ ಸಮನ್ವಯ ಸಾಧಿಸುವ ಮತ್ತು ಅಧಿಕಾರಿಗಳಿಗೆ ಪರಿಣಾಮಕಾರಿ ತರಬೇತಿ ನೀಡುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
ಬಾಲ್ಯ ವಿವಾಹ ನಿಷೇಧ ಕಾಯಿದೆಯಲ್ಲಿ ಸಾಕಷ್ಟು ನಿರ್ವಾತವಿದ್ದು, ಬಾಲ್ಯ ವಿವಾಹ ಸಿಂಧುತ್ವದ ಕುರಿತು ಕಾನೂನು ಮಾತನಾಡುವುದಿಲ್ಲ. ಇಂಥ ವಿವಾಹಗಳು ವ್ಯಕ್ತಿಗತವಾಗಿ ಆತ/ಆಕೆ ತನ್ನ ಸಂಗಾತಿ ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಕಿತ್ತುಕೊಳ್ಳುತ್ತದೆ. ಆದ್ದರಿಂದ, ಇಂಥ ವಿವಾಹಗಳನ್ನು ನಿಷೇಧಿಸಬೇಕಾದ ಅಗತ್ಯವಿದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಈ ನೆಲೆಯಲ್ಲಿ ಕಾನೂನಿನ ಉದ್ದೇಶ ಈಡೇರಿಸುವುದಕ್ಕಾಗಿ ನ್ಯಾಯಾಲಯವು ಕೆಲವು ವಿಸ್ತೃತ ಮಾರ್ಗಸೂಚಿಗಳನ್ನು ರೂಪಿಸಿರುವುದಾಗಿ ತಿಳಿಸಿತು. ಈ ಮಾರ್ಗಸೂಚಿಗಳನ್ನು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಸಂಬಂಧಿತ ಇಲಾಖೆಗಳಿಗೆ ಕಳುಹಿಸಲು ಸೂಚಿಸಿತು.