ಸಂರಕ್ಷಿತ ಅರಣ್ಯವು 1 ಕಿ ಮೀ ಪರಿಸರ ಸೂಕ್ಷ್ಮ ವಲಯ ಹೊಂದಬೇಕು; ರಾಷ್ಟ್ರೀಯ ಉದ್ಯಾನದಲ್ಲಿ ಗಣಿಗಾರಿಕೆ ಇಲ್ಲ: ಸುಪ್ರೀಂ

ಅರಣ್ಯ ಇಲಾಖೆಯ ಮುಖ್ಯ ಸಂರಕ್ಷಣಾಧಿಕಾರಿ ಅನುಮತಿ ಪಡೆದು ಪರಿಸರ ಸೂಕ್ಷ್ಮ ವಲಯದಲ್ಲಿ ಈಗ ನಡೆಯುತ್ತಿರುವ ಕಾಮಗಾರಿಗಳನ್ನು ಮುಂದುವರಿಸಬಹುದು ಎಂದು ನ್ಯಾಯಾಲಯ ಹೇಳಿದೆ.
Supreme Court
Supreme Court
Published on

ಪ್ರತಿ ಸಂರಕ್ಷಿತ ಅರಣ್ಯ ಪ್ರದೇಶದ ಸುತ್ತ ಒಂದು ಕಿ ಮೀ ಪರಿಸರ ಸೂಕ್ಷ್ಮ ವಲಯ ಇರಬೇಕು. ಅಲ್ಲಿ ಯಾವುದೇ ತೆರನಾದ ಅಭಿವೃದ್ಧಿ ಕಾರ್ಯಗಳಿಗೆ ಅನುಮತಿಸಬಾರದು. ಈಗಾಗಲೇ ಕೆಲಸ ಆರಂಭವಾಗಿಬಿಟ್ಟಿದ್ದರೆ ರಾಜ್ಯದ ಮುಖ್ಯ ಸಂರಕ್ಷಣಾಧಿಕಾರಿಯ ಅನುಮತಿ ಪಡೆದು ಮುಂದುವರಿಸಬೇಕು ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ (ಟಿ ಎನ್‌ ಗೋದವರ್ಮನ್‌ ತಿರುಮುಲ್ಪಾಡ್‌ ವರ್ಸಸ್‌ ಭಾರತ ಸರ್ಕಾರ ಮತ್ತು ಇತರರು).

ವನ್ಯಜೀವಿ ಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳಲ್ಲಿ ಗಣಿಗಾರಿಕೆಗೆ ಯಾವುದೇ ಅವಕಾಶವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌, ಬಿ ಆರ್‌ ಗವಾಯಿ ಮತ್ತು ಅನಿರುದ್ಧ ಬೋಸ್‌ ಅವರಿದ್ದ ತ್ರಿಸದಸ್ಯ ಪೀಠವು ಆದೇಶ ಮಾಡಿದೆ.

“ಪ್ರತಿ ಸಂರಕ್ಷಿತ ಅರಣ್ಯದ ಸುತ್ತ ಒಂದು ಕಿ ಮೀ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ವಲಯ ಇರಲಿದೆ. ಒಂದು ವೇಳೆ ಉಲ್ಲೇಖಿತ ಪರಿಸರ ಸೂಕ್ಷ್ಮ ವಲಯವು ಒಂದು ಕಿ ಮೀ ಬಫರ್‌ ವಲಯವನ್ನು ಮೀರಿ ವಿಸ್ತರಿಸಿದ್ದರೆ ಆಗ ಆ ವಿಸ್ತೃತವಾದ ಗಡಿಯು ಉಳಿಯಲಿದೆ. ಪ್ರತಿ ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪರಿಸರ ಸೂಕ್ಷ್ಮ ಪ್ರದೇಶದ ಪರಿಧಿಯಲ್ಲಿನ ಪ್ರಸಕ್ತ ಇರುವ ನಿರ್ಮಿತಿಗಳ ಪಟ್ಟಿ ಸಿದ್ಧಪಡಿಸಿ, ಮೂರು ತಿಂಗಳಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಅರಣ್ಯ ಇಲಾಖೆಯ ಮುಖ್ಯ ಸಂರಕ್ಷಣಾಧಿಕಾರಿ ಅನುಮತಿ ಪಡೆದು ಪರಿಸರ ಸೂಕ್ಷ್ಮ ವಲಯದಲ್ಲಿ ಈಗ ನಡೆಯುತ್ತಿರುವ ಕಾಮಗಾರಿಗಳನ್ನು ಮುಂದುವರಿಸಬಹುದು ಎಂದು ಇದೇ ವೇಳೆ ನ್ಯಾಯಾಲಯ ಸ್ಪಷ್ಟಪಡಿಸಿದೆ. ರಾಜಸ್ಥಾನದ ಜಾಮ್ವಾ ರಾಮ್‌ಗಢ ವನ್ಯಜೀವಿ ಪ್ರದೇಶದಲ್ಲಿ ನಡೆಸಲಾದ ಕಾನೂನುಬಾಹಿರ ಗಣಿಗಾರಿಕೆಗೆ ಪರಿಹಾರವನ್ನು ಲೆಕ್ಕಾಹಾಕಲು ಕೇಂದ್ರೀಯ ಉನ್ನತಾಧಿಕಾರ ಸಮಿತಿಗೆ ನ್ಯಾಯಾಲಯ ಸೂಚಿಸಿದೆ.

Kannada Bar & Bench
kannada.barandbench.com