ಅನೇಕ ಕಾನೂನುಗಳಿದ್ದರೂ ಪುರುಷ ಪ್ರಧಾನತೆಯಿಂದಾಗಿ ಮಹಿಳೆಯರ ರಕ್ಷಣೆ ಸಾಧ್ಯವಾಗುತ್ತಿಲ್ಲ: ನ್ಯಾ. ವಿ ಗೋಪಾಲ ಗೌಡ ವಿಷಾದ

“ಮಹಿಳೆಯರಿಗಾಗಿ ಭರವಸೆ ಎಂಬ ಆಪ್ತ ಸಲಹಾ ಕೇಂದ್ರ ರೂಪಿಸಿರುವುದು ಸ್ವಾಗತಾರ್ಹ ಕ್ರಮ. ಸಂಘಟನೆಯ ವಕೀಲ ಸದಸ್ಯರು ಸಂಕಷ್ಟದಲ್ಲಿರುವ ಮಹಿಳೆಯರ ಬದುಕಿಗೆ ಒತ್ತಾಸೆಯಾಗಿ ನಿಲ್ಲಬೇಕು” ಎಂದು ನ್ಯಾಯಮೂರ್ತಿಗಳು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
Justice V Gopala Gowda
Justice V Gopala Gowda
Published on

“ದೇಶದಲ್ಲಿಯಷ್ಟೇ ಅಲ್ಲದೆ ವಿಶ್ವದಲ್ಲಿ ಅನೇಕ ಕಾನೂನುಗಳು ಮಹಿಳೆಯರ ಪರವಾಗಿ ರೂಪುಗೊಂಡಿದ್ದರೂ ಕೂಡ ಪುರುಷ ಪ್ರಧಾನ ವ್ಯವಸ್ಥೆಯಿಂದಾಗಿ ಸ್ತ್ರೀಯರಿಗೆ ಸ್ವಾತಂತ್ರ್ಯ, ಸಮಾನತೆ ಹಾಗೂ ರಕ್ಷಣೆ ಒದಗಿಸಲು ಸಾಧ್ಯವಾಗುತ್ತಿಲ್ಲ” ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲ ಗೌಡ ವಿಷಾದ ವ್ಯಕ್ತಪಡಿಸಿದರು.

ಕೊರೊನಾ ಕಾಲದ ಮಹಿಳೆಯರ ಸಂಕಟಗಳ ಪರಿಹಾರಕ್ಕಾಗಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯೂಎ) ಮತ್ತು ಅಖಿಲ ಭಾರತ ವಕೀಲರ ಸಂಘ (ಎಐಎಲ್‌ಯು) ರೂಪಿಸಿರುವ ʼಭರವಸೆʼ ಹೆಸರಿನ ಆಪ್ತ ಸಲಹಾ ಕೇಂದ್ರವನ್ನು ವರ್ಚುವಲ್‌ ವಿಧಾನದ ಮೂಲಕ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

"ಸಂವಿಧಾನದ ವಿವಿಧ ಪರಿಚ್ಛೇದಗಳು ಮಹಿಳೆಯರ ಸಮಾನತೆ ಬಗ್ಗೆ ಮಾತನಾಡುತ್ತವೆ. ಸ್ತ್ರೀಯರ ಏಳಿಗೆಗಾಗಿ ಹಲವು ಕಾನೂನುಗಳು ರೂಪುಗೊಂಡಿವೆ. ಆ ಕಾನೂನುಗಳನ್ನು ಆಧರಿಸಿ ಸಹಸ್ರಾರು ತೀರ್ಪುಗಳನ್ನು ನ್ಯಾಯಾಲಯಗಳು ನೀಡಿವೆ. ಇಷ್ಟಾದರೂ ಮಹಿಳೆಯರನ್ನು ಕೌಟುಂಬಿಕ ಹಿಂಸಾಚಾರಗಳಿಂದ ವಿಮುಕ್ತಿಗೊಳಿಸಲು ಸಾಧ್ಯವಾಗುತ್ತಿಲ್ಲ" ಎಂದು ಅವರು ಬೇಸರ ವ್ಯಕ್ತಪಡಿಸಿದರು.

“2005ರಲ್ಲಿ ವರದಕ್ಷಿಣೆ ನಿಷೇಧ ಕಾಯಿದೆ ಜಾರಿಗೆ ತರಲಾಗಿದೆ. ಹಾಗಿದ್ದರೂ ವರದಕ್ಷಿಣೆಗೆ ಭಾರಿ ಬೇಡಿಕೆ ಇದೆ. ಬಹಳಷ್ಟು ಮಹಿಳೆಯರಿಗೆ ವರದಕ್ಷಿಣೆ ಕಿರುಕುಳದಿಂದ ರಕ್ಷಣೆ ಪಡೆಯಲು ಆಗುತ್ತಿಲ್ಲ. ಅದೇ ರೀತಿ ವಿಶಾಖಾ ಪ್ರಕರಣ, ನಿರ್ಭಯಾ ಪ್ರಕರಣಗಳ ನಂತರ ಹಲವು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಮಹಿಳೆಯರ ಶೋಷಣೆ ನಿಲ್ಲುತ್ತಿಲ್ಲ. ವಿಚ್ಛೇದನಾ ಕಾಯಿದೆ, ಗರ್ಭಧಾರಣೆ ಕಾಯಿದೆ, ಮಾಹಿತಿ ತಂತ್ರಜ್ಞಾನ ಕಾಯಿದೆ ಜಾರಿಯಲ್ಲಿದ್ದರೂ ಮಹಿಳೆಯರು ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿ ಕೂಡ ಇದೇ ಸ್ಥಿತಿ ಇದೆ” ಎಂದು ಅವರು ತಿಳಿಸಿದರು.

ಪುರುಷ ಪ್ರಧಾನ ವ್ಯವಸ್ಥೆ ಮತ್ತು ಬಂಡವಾಳಶಾಹಿ ವ್ಯವಸ್ಥೆಗಳು ಮಹಿಳೆಯರ ಬದುಕಿಗೆ ಮಾರಕವಾಗಿ ಪರಿಣಮಿಸಿವೆ.
- ನ್ಯಾ. ವಿ ಗೋಪಾಲ ಗೌಡ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ

“ಬಡವರು ಶ್ರೀಮಂತರು ಎಂಬ ಭೇದವಿಲ್ಲದೆ ಎಲ್ಲರ ಮನೆಗಳಲ್ಲೂ ಕೌಟುಂಬಿಕ ಶೋಷಣೆಗಳಿವೆ ಎಂದು ತಿಳಿಸಿದ ಅವರು, “ಕೊರೊನಾ ಕಾಲಘಟ್ಟದಲ್ಲಿ ಮಹಿಳೆಯರ ವಿರುದ್ಧದ ಶೋಷಣೆ ಮತ್ತಷ್ಟು ಹೆಚ್ಚಾಗಿದೆ. ವಲಸೆ ಕಾರ್ಮಿಕ ಮಹಿಳೆಯರು ಲಾಕ್‌ಡೌನ್‌ ಸಂದರ್ಭದಿಂದಲೂ ಅನುಭವಿಸಿದ ಸಂಕಷ್ಟಗಳು ಅಷ್ಟಿಷ್ಟಲ್ಲ. ಲಾಕ್‌ಡೌನ್‌ ನಿರ್ಬಂಧದ ಬಳಿಕ ಮಹಿಳೆಯರು ತಮ್ಮ ಯಜಮಾನರು, ಮಕ್ಕಳ ಸೇವೆಯಲ್ಲಿ ತೊಡಗಿದ್ದಾರೆ. ಇದರಿಂದ ಅವರಲ್ಲಿ ಒತ್ತಡ ಸೃಷ್ಟಿಯಾಗಿದೆ. ಅನೇಕ ಮಹಿಳೆಯರು ಕಾಯಿಲೆಗಳಿಗೆ ತುತ್ತಾಗುತ್ತಿರುವುದು ವೈದ್ಯಲೋಕದ ತಜ್ಞರಿಂದ ತಿಳಿದು ಬಂದಿದೆ” ಎಂದರು.

“ಇಂತಹ ಸಂದರ್ಭದಲ್ಲಿ ಎಐಡಿಡಬ್ಲ್ಯೂಎ ಮತ್ತು ಎಐಎಲ್‌ಯು ಭರವಸೆ ಎಂಬ ಆಪ್ತ ಸಲಹಾ ಕೇಂದ್ರ ರೂಪಿಸಿರುವುದು ಸ್ವಾಗತಾರ್ಹ ಕ್ರಮ. ಸಂಘಟನೆಯ ವಕೀಲ ಸದಸ್ಯರು ಸಂಕಷ್ಟದಲ್ಲಿರುವ ಮಹಿಳೆಯರ ಬದುಕಿಗೆ ಒತ್ತಾಸೆಯಾಗಿ ನಿಲ್ಲಬೇಕು” ಎಂದು ಅವರು ಇದೇ ವೇಳೆ ಕಿವಿಮಾತು ಹೇಳಿದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ. ನೀಲಾ ಮಾತನಾಡಿ “ ಕೊರೊನಾ ಕಾಲಘಟ್ಟದಲ್ಲಿ ಮನೆಗಳು ಬಂಧೀಖಾನೆಗಳಾಗಿವೆ. ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುತ್ತಿರುವ ಅನೇಕ ಘಟನೆಗಳು ನಡೆಯುತ್ತಿವೆ. ಮಹಿಳೆಯರನ್ನು ಸಹಜೀವಿಣಿಯಾಗಿ ಕಾಣದೇ ಒಂದು ದೇಹವಾಗಿ ನೋಡಿದ್ದೇ ಇದಕ್ಕೆಲ್ಲಾ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಪ್ರಸ್ತುತ ಎರಡು ಸರತಿ ಸಾಲುಗಳನ್ನು ನಾವು ದೇಶದಲ್ಲಿ ಕಾಣುತ್ತಿದ್ದೇವೆ. ಒಂದು ಸಾಲು ಆಮ್ಲಜನಕಕ್ಕಾಗಿ ಪರದಾಡುತ್ತಿದ್ದು ಅದು ನಗರದಲ್ಲಿದೆ. ಇನ್ನೊಂದು ಸಾಲು ಹಳ್ಳಿಗಳಲ್ಲಿದೆ. ಆ ಸಾಲು ಕೆಲಸವನ್ನು ಬೇಡಿ ನಿಂತಿದೆ. ನಾವು ಕೊರೊನಾದಿಂದ ಸಾವನ್ನಪ್ಪಿದರೂ ಚಿಂತೆಯಿಲ್ಲ ಕೆಲಸ ಮಾಡುತ್ತೇವೆ, ಕೆಲಸ ಕೊಡಿ ಎನ್ನುತ್ತಿದ್ದಾರೆ” ಎಂದರು. ಭರವಸೆ ಆಪ್ತ ಸಲಹಾ ಕೇಂದ್ರ ಮಹಿಳೆಯರ ಕಷ್ಟಗಳಿಗೆ ಮಿಡಿಯಲಿ ಎಂದು ಅವರು ಈ ಸಂದರ್ಭದಲ್ಲಿ ಹಾರೈಸಿದರು.

ಎಐಡಿಡಬ್ಯೂಎ ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ, ಪದಾಧಿಕಾರಿ ಗೌರಮ್ಮ, ಎಐಎಲ್‌ಯು ಸಂಘಟನೆಯ ಹೆಚ್‌ ವಿ ರಾಮಚಂದ್ರ ರೆಡ್ಡಿ, ಕೆ ಕೋಟೇಶ್ವರ ರಾವ್‌ ಮತ್ತಿತರರು ಆನ್‌ಲೈನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Kannada Bar & Bench
kannada.barandbench.com