ಒಂದು ರಾಜ್ಯದ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ದೇಶದ ಉಳಿದೆಡೆಯೂ ರಕ್ಷಣೆ ಇದೆ: ಬಾಂಬೆ ಹೈಕೋರ್ಟ್

ಒಬ್ಬ ವ್ಯಕ್ತಿ ತನ್ನ ಊರು, ವೃತ್ತಿ ಬದಲಿಸಿದರೂ ಜಾತಿ ಅಸ್ಮಿತೆಯನ್ನು ಅಲುಗಾಡಿಸುವುದು ಕಷ್ಟಕರ ಎಂದು ನ್ಯಾಯಾಲಯ ನುಡಿದಿದೆ.
Justice Bharati Dangre, Justice Revati Mohite Dere and Justice NJ Jamadar
Justice Bharati Dangre, Justice Revati Mohite Dere and Justice NJ Jamadar

ಒಂದು ನಿರ್ದಿಷ್ಟ ರಾಜ್ಯ ಇಲ್ಲವೇ ಕೇಂದ್ರಾಡಳಿತ ಪ್ರದೇಶ ಅಧಿಸೂಚಿಸಿರುವ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿಗೆ ಪರಿಶಿಷ್ಟ ಜಾತಿ/ ಪಂಗಡ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ನೀಡಿರುವ ರಕ್ಷಣೆ ದೇಶದೆಲ್ಲೆಡೆ ಅನ್ವಯಿಸುತ್ತದೆ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ [ಸಂಜಯ್ ಕಾಟ್ಕರ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಎಸ್‌ಸಿ/ಎಸ್‌ಟಿ ಕಾಯಿದೆಯಡಿ ವಿವಿಧ ಅಪರಾಧಗಳಿಗೆ ಸೂಚಿಸಲಾದ ಶಿಕ್ಷೆಯನ್ನು ಲೆಕ್ಕಿಸದೆ ಸದರಿ ಕಾಯಿದೆಯಡಿ ವಿಚಾರಣಾ ನ್ಯಾಯಾಲಯದ ಆದೇಶಗಳನ್ನು ಪ್ರಶಿಸಿರುವ ಮಹಾರಾಷ್ಟ್ರದ ಎಲ್ಲಾ ಮೇಲ್ಮನವಿಗಳನ್ನು ಹೈಕೋರ್ಟ್‌ನ ಏಕಸದಸ್ಯ ಪೀಠದೆದುರು ಇರಿಸಬೇಕು ಎಂದು ಕೂಡ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ, ಭಾರತಿ ಡಾಂಗ್ರೆ ಮತ್ತು ಎನ್‌ ಜೆ ಜಮಾದಾರ್ ಅವರಿದ್ದ ಪೂರ್ಣ ಪೀಠ ತಿಳಿಸಿದೆ.

ನ್ಯಾ. ಎಸ್‌ ವಿ ಕೊತ್ವಾಲ್‌ ಅವರಿದ್ದ ಏಕಸದಸ್ಯ ಪೀಠ ಈ ಎರಡು ವಿಷಯಗಳನ್ನು ಪೂರ್ಣ ಪೀಠ ನಿರ್ಧರಿಸಬೇಕು ಎಂದು ಈ ಹಿಂದೆ ತಿಳಿಸಿತ್ತು. ಅದರಂತೆ ನ್ಯಾಯಾಲಯ ತೀರ್ಪು ನೀಡಿದೆ. ಮೊದಲ ವಿಚಾರಕ್ಕೆ ಸಂಬಂಧಿಸಿದಂತೆ ಅದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವೊಂದು ಘೋಷಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗೆ ಮಾತ್ರ 1989ರ ಎಸ್‌ಸಿ/ಎಸ್‌ಟಿ ಕಾಯಿದೆಯನ್ನು ಸೀಮಿತಗೊಳಿಸಲಾಗದು. ಬದಲಿಗೆ ತಮ್ಮ ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದವರೆಂದು ಗುರುತಿಸಿಕೊಂಡಿದ್ದು ಕೃತ್ಯ ನಡೆದ ದೇಶದ ಯಾವುದೇ ಪ್ರದೇಶದಲ್ಲಿ ಆ ಭಾಗದ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿರದಿದ್ದರೂ ಕಾಯಿದೆಯಡಿ ರಕ್ಷಣೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ನುಡಿದಿದೆ.

ಒಂದು ರಾಜ್ಯದಿಂದ ಅಧಿಸೂಚಿತ ಜಾತಿಗೆ ಸೇರಿದ ವ್ಯಕ್ತಿಗೆ ಎಸ್‌ಸಿ/ಎಸ್‌ಟಿ ಕಾಯಿದೆಯ ಪ್ರಯೋಜನಗಳು ಆ ರಾಜ್ಯಕ್ಕೆ ಮಾತ್ರ ಸೀಮಿತ ಎಂದು ವಾದಿಸಿದ ವಕೀಲ ಅಭಿನವ್ ಚಂದ್ರಚೂಡ್ ಅವರ ವಾದವನ್ನು ನ್ಯಾಯಾಲಯ ನಿರಾಕರಿಸಿತು.

ಒಬ್ಬ ವ್ಯಕ್ತಿ ತನ್ನ ಊರು, ವೃತ್ತಿಗಳನ್ನು ಬದಲಿಸಿದರೂ ಜಾತಿ ಅಸ್ಮಿತೆಯನ್ನು ಅಲುಗಾಡಿಸುವುದು ಕಷ್ಟಕರ. ಜೊತೆಗೆ ತನ್ನ ಜಾತಿಯ ಸೀಮಿತತೆಯನ್ನು ಮದುವೆ ಅಥವಾ ಮತಾಂತರದ ಮೂಲಕ ಮುಕ್ತಗೊಳಿಸುವ ಸ್ಥಿತಿಯಲ್ಲಿ ವ್ಯಕ್ತಿ ಇರುವುದಿಲ್ಲ ಎಂದು ನ್ಯಾಯಾಲಯ ವಿವರಿಸಿದೆ.

ಎಸ್‌ಸಿ/ಎಸ್‌ಟಿ ಸಮುದಾಯದಲ್ಲಿ ಜನಿಸಿದ ವ್ಯಕ್ತಿ ಆಯಾ ಜಾತಿ/ಪಂಗಡಗಳ್ಲಲಿ ಜನಿಸಿದ ಕಾರಣಕ್ಕೆ ಅನನುಕೂಲತೆ, ನ್ಯೂನತೆ ಹಾಗೂ ಅಪಮಾನಗಳನ್ನು ಅನುಭವಿಸಬೇಕಾಗುತ್ತದೆ. ಈ ದೃಷ್ಟಿಯಲ್ಲಿ ಕಾಯಿದೆಯಡಿ ರಕ್ಷಣೆ ಒದಗಿಸುವುದು ರಾಜ್ಯದ ಗಡಿಗಳಿಗೆ ಸೀಮಿತ ಎನ್ನುವುದು ಮಿಥ್ಯೆಯಾಗುತ್ತದೆ ಎಂದು ಅದು ಹೇಳಿತು.

ಇನ್ನು ಎರಡನೇ ವಿಷಯಕ್ಕೆ ಸಂಬಂಧಿಸಿದಂತೆ ಎಸ್‌ಸಿ ಎಸ್‌ಟಿ ಕಾಯಿದೆಯಡಿ ಎಸಗಲಾದ ಅಪರಾಧಗಳಿಗೆ ವಿಧಿಸಲಾದ ಶಿಕ್ಷೆ ಪ್ರಶ್ನಿಸಿರುವ ಎಲ್ಲಾ ಮೇಲ್ಮನವಿಗಳನ್ನು ಹೈಕೋರ್ಟ್‌ನ ಏಕಸದಸ್ಯ ಪೀಠದ ಮುಂದಿಡಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.  

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Sanjay_Katkar_v__State_of_Maharashtra_and_connected_appeals.pdf
Preview

Related Stories

No stories found.
Kannada Bar & Bench
kannada.barandbench.com