D K Shivakumar and Karnataka HC
D K Shivakumar and Karnataka HC

ರಾಹುಲ್‌ ವಿರುದ್ಧ ಇ ಡಿ ವಿಚಾರಣೆ ವಿರೋಧಿಸಿ ಪ್ರತಿಭಟನೆ: ಡಿಸಿಎಂ ಡಿ ಕೆ ಶಿವಕುಮಾರ್‌ ವಿರುದ್ಧದ ಪ್ರಕರಣ ವಜಾ

ವಿಚಾರಣೆ ನೆಪದಲ್ಲಿ ಇ ಡಿ ರಾಹುಲ್‌ಗೆ ಅನಗತ್ಯ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ವತಿಯಿಂದ 2022ರ ಜೂ. 16ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗಿಯಾಗಿದ್ದ ಸಂಬಂಧ ಶಿವಕುಮಾರ್‌ ವಿರುದ್ಧ ಪ್ರಕರಣ ದಾಖಲಾಗಿತ್ತು.

ಕಾಂಗ್ರೆಸ್‌ ಮುಖವಾಣಿ ʼನ್ಯಾಷನಲ್ ಹೆರಾಲ್ಡ್ ಪತ್ರಿಕೆʼ ಹೆಸರಿನಲ್ಲಿ ಹಣ ಅಕ್ರಮ ವರ್ಗಾವಣೆ ಮಾಡಿದ್ದ ಪ್ರಕರಣದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇ ಡಿ) ವಿಚಾರಣೆ ನಡೆಸಿದ್ದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ ಸಂಬಂಧ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಶಿವಾಜಿನಗರ ಠಾಣಾ ಪೊಲೀಸರು ದಾಖಲಿಸಿದ್ದ ಖಾಸಗಿ ದೂರನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾ ಮಾಡಿದೆ.

ತಮ್ಮ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ಶಿವಾಜಿನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ದಾಖಲಿಸಿದ್ದ ಖಾಸಗಿ ದೂರು ಮತ್ತು ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿ ಕೆ ಶಿವಕುಮಾರ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕು ಎಂದು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ನಿಯಮ ಪ್ರಕಾರ ಈ ಆದೇಶ ಉಲ್ಲಂಘನೆಯಾದರೆ, ಆ ಕುರಿತು ನಗರ ಪೊಲೀಸ್ ಆಯುಕ್ತರು ಅಥವಾ ಜಿಲ್ಲಾಧಿಕಾರಿ ಮ್ಯಾಜಿಸ್ಟ್ರೇಟ್‌ಗೆ ಖಾಸಗಿ ದೂರು ಸಲ್ಲಿಸಬೇಕು. ಆದರೆ, ಅವರಿಗಿಂತ ಕಡಿಮೆ ಶ್ರೇಣಿಯ ಅಧಿಕಾರಿಯಾದ ಸಬ್ ಇನ್ಸ್‌ಪೆಕ್ಟರ್ ಖಾಸಗಿ ದೂರು ಸಲ್ಲಿಸಿದ್ದಾರೆ. ಹೀಗಿದ್ದರೂ ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇರ್ಟ್ ನ್ಯಾಯಾಲಯವು ಸಂಜ್ಞೇಯ ತೆಗೆದುಕೊಂಡು ಸಮನ್ಸ್ ಜಾರಿ ಮಾಡಿದ್ದು, ಆ ಮೂಲಕ ಕಾನೂನು ಲೋಪ ಎಸಗಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಖಾಸಗಿ ದೂರು ರದ್ದುಪಡಿಸಲು ಅರ್ಹವಾಗಿದೆ” ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ವಿಚಾರಣೆ ನೆಪದಲ್ಲಿ ಜಾರಿ ನಿರ್ದೇಶನಾಲಯವು ರಾಹುಲ್ ಗಾಂಧಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ವತಿಯಿಂದ 2022ರ ಜೂನ್‌ 16ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅದರಲ್ಲಿ ಭಾಗವಹಿಸಿ ಪ್ರತಿಭಟನೆ ನಡೆಸಿದ್ದರು. ಇದರಿಂದ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಶಿವಾಜಿನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅವರು ಖಾಸಗಿ ದೂರು ದಾಖಲಿಸಿದ್ದರು.

‘ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟನೆ ನಡೆಸುವುದನ್ನು ಕಡ್ಡಾಯಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಮಾಡಿದ್ದಾರೆ. ಈ ಆದೇಶ ಉಲ್ಲಂಘಿಸಿ ಡಿ ಕೆ ಶಿವಕುಮಾರ್ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಪ್ರತಿಭಟನೆ ನಡೆಸಿದ್ದಾರೆ. ಆ ಮೂಲಕ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡಿದ್ದಾರೆ. ಮತ್ತೊಂದೆಡೆ ಪ್ರತಿಭಟನೆ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಸಹ ಪಡೆದಿಲ್ಲ ಎಂದು 2022ರ ಜೂನ್‌ 16ರಂದು ದಾಖಲಿಸಿದ್ದ ಖಾಸಗಿ ದೂರಿನಲ್ಲಿ ಆರೋಪಿಸಲಾಗಿತ್ತು. ಪ್ರಕರಣ ಸಂಬಂಧ ಸಂಜ್ಞೇಯ ತೆಗೆದುಕೊಂಡಿದ್ದ 42ನೇ ಎಸಿಎಂಎಂ ನ್ಯಾಯಾಲಯವು ಡಿ ಕೆ ಶಿವಕುಮಾರ್‌ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಈ ಪ್ರಕರಣ ವಜಾ ಕೋರಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com