ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯು ಪ್ರಚೋದನಕಾರಿ ಉಡುಗೆ ಧರಿಸಿದ್ದರೆ ಆ ಪ್ರಕರಣವು ಮೇಲ್ನೋಟಕ್ಕೇ ನಿಲ್ಲುವುದಿಲ್ಲ ಎಂದು ವಿವಾದಾತ್ಮಕ ಆದೇಶ ನೀಡಿದ್ದ ಕೋರಿಕ್ಕೋಡ್ ಜಿಲ್ಲಾ ನ್ಯಾಯಾಧೀಶರೊಬ್ಬರು ತಮ್ಮ ವರ್ಗಾವಣೆ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಕೇರಳ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ [ಎಸ್ ಕೃಷ್ಣಕುಮಾರ್ ವರ್ಸಸ್ ಕೇರಳ ಸರ್ಕಾರ].
ಪ್ರಕರಣವನ್ನು ಆಲಿಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಅನು ಶಿವರಾಮನ್ ಅವರು ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಮನವಿ ಸಲ್ಲಿಸಿದ್ದ ಅರ್ಜಿದಾರರಾದ ನ್ಯಾಯಾಧೀಶ ಎಸ್ ಕೃಷ್ಣಕುಮಾರ್ ಅವರ ಮನವಿಯನ್ನು ವಜಾಗೊಳಿಸಿದರು.
"ಕಾರ್ಮಿಕ ನ್ಯಾಯಾಲಯದ ಅಧ್ಯಕ್ಷರ ಹುದ್ದೆಗೆ ವರ್ಗಾಯಿಸಲ್ಪಟ್ಟಿರುವುದರ ಬಗ್ಗೆ ಉನ್ನತ ನ್ಯಾಯಾಂಗ ಸೇವೆಯ ಸದಸ್ಯರೂ ಆಗಿರುವ ಅರ್ಜಿದಾರರು ಯಾವುದೇ ರೀತಿಯಲ್ಲೂ ಪೂರ್ವಗ್ರಹ ಪೀಡಿತರಾಗಿರಬೇಕಾದ ಅಗತ್ಯವಿಲ್ಲ. ಈ ಹುದ್ದೆಯು ಜಿಲ್ಲಾ ನ್ಯಾಯಾಧೀಶರ ಶ್ರೇಣಿಯವರು ಅಲಂಕರಿಸುವಂಥದ್ದಾಗಿದ್ದು, ರಾಜ್ಯ ಸರ್ಕಾರವು ಈ ಹುದ್ದೆಯನ್ನು ಹೈಕೋರ್ಟ್ ಶಿಫಾರಸ್ಸಿನನ್ವಯ ಭರ್ತಿ ಮಾಡಿರುತ್ತದೆ. ಜಿಲ್ಲಾ ನ್ಯಾಯಾಂಗದ ಗೌರವಾನ್ವಿತ ಸದಸ್ಯರಾಗಿರುವ ಅರ್ಜಿದಾರರಿಂದ ಎಲ್ಲಿ ಅವರನ್ನು ನಿಯೋಜಿಸಲಾಗುತ್ತದೆಯೋ ಅಲ್ಲಿ ಸೇವೆ ಸಲ್ಲಿಸಬೇಕು ಎನ್ನುವ ನಿರೀಕ್ಷೆ ಇರುತ್ತದೆ. ವರ್ಗಾವಣೆ ಆದೇಶದಿಂದ ಅರ್ಜಿದಾರರ ಯಾವ ಕಾನೂನಾತ್ಮಕ ಹಕ್ಕಿನ ಉಲ್ಲಂಘನೆಯಾಗಿದೆ ಎನ್ನುವುದು ನನಗೆ ಕಾಣುತ್ತಿಲ್ಲ. ರಿಟ್ ಅರ್ಜಿಯಲ್ಲಿ ಕೋರಲಾಗಿರುವ ಯಾವುದೇ ಪರಿಹಾರಗಳನ್ನು ಅದರಲ್ಲಿ ಉಲ್ಲೇಖಿಸಿರುವ ಆಧಾರಗಳು ಸಮರ್ಥಿಸುವುದಿಲ್ಲ," ಎಂದು ಆದೇಶದಲ್ಲಿ ಹೇಳಲಾಗಿದೆ.
ಸಂತ್ರಸೆಯು ಲೈಂಗಿಕವಾಗಿ ಪ್ರಚೋದನೆ ನೀಡುವಂಥ ಉಡುಪು ಧರಿಸಿದ್ದರೆ ಲೈಂಗಿಕ ಕಿರುಕುಳ ಪ್ರಕರಣ ಮೇಲ್ನೋಟಕ್ಕೆ ನಿಲ್ಲುವುದಿಲ್ಲ ಎಂಬ ವಿವಾದಾತ್ಮಕ ಆದೇಶವನ್ನು ಅರ್ಜಿದಾರ ನ್ಯಾಯಾಧೀಶರು ನೀಡಿದ್ದರು. ತಮ್ಮ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ಕೇರಳದ ಸಾಮಾಜಿಕ ಹೋರಾಟಗಾರ ಸಿವಿಕ್ ಚಂದ್ರನ್ ಅವರ ಮನವಿ ವಿಚಾರಣೆ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪ್ರಕರಣದಲ್ಲಿ ಚಂದ್ರನ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲಾಗಿತ್ತು. ತೀರ್ಪಿನ ವಿರುದ್ಧ ರಾಜ್ಯ ಸರ್ಕಾರವು ಹೈಕೋರ್ಟ್ ಮೊರೆ ಹೋಗಿದೆ.