ಪ್ರಚೋದನಕಾರಿ ಭಾಷಣ: ಪ್ರಮೋದ್‌ ಮುತಾಲಿಕ್‌ ವಿರುದ್ಧದ ಪ್ರಕರಣ ವಜಾ ಮಾಡಿದ ಹೈಕೋರ್ಟ್‌

ಪ್ರಚೋದನಕಾರಿ ಭಾಷಣದ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಗೂ ಎರಡು ಕೋಮುಗಳ ನಡುವೆ ಶತ್ರುತ್ವ ಬಿತ್ತಿದ ಆರೋಪದ ಮೇಲೆ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕು ಎಂದಿರುವ ನ್ಯಾಯಾಲಯ.
Pramod Muthalik and Karnataka HC
Pramod Muthalik and Karnataka HC

ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಸಂಬಂಧ ಆರು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ವಜಾ ಮಾಡಿದೆ.

ಪ್ರಕರಣ ರದ್ದು ಕೋರಿ ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಆರೋಪ ಪಟ್ಟಿಯನ್ನು ಪರಿಶೀಲಿಸಿದರೆ, ಅರ್ಜಿದಾರರ ವಿರುದ್ಧದ ಆರೋಪ ಸಾಬೀತುಪಡಿಸುವ ಅಂಶಗಳಿಲ್ಲ. ಪೊಲೀಸ್ ಸಿಬ್ಬಂದಿಯ ಹೇಳಿಕೆಗಳನ್ನು ಹೊರತುಪಡಿಸಿ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಲ್ಲ. ಅರ್ಜಿದಾರರು ಮಾಡಿದ್ದ ಪ್ರಚೋದನಕಾರಿ ಭಾಷಣದ ವಿಡಿಯೊ ಚಿತ್ರೀಕರಿಸಿದ್ದರೆನ್ನಲಾದ ವ್ಯಕ್ತಿಯ ಹೇಳಿಕೆ ದಾಖಲಿಸಲಾಗಿದೆಯಾದರೂ, ವಿಡಿಯೊ ವಶಪಡಿಸಿಕೊಂಡಿಲ್ಲ. ಪ್ರಚೋದನಕಾರಿ ಭಾಷಣದ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಗೂ ಎರಡು ಕೋಮುಗಳ ನಡುವೆ ಶತ್ರುತ್ವ ಬಿತ್ತಿದ ಆರೋಪದ ಮೇಲೆ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕು. ಒಂದೊಮ್ಮೆ, ಪೂರ್ವಾನುಮತಿ ಇಲ್ಲದಿದ್ದರೆ ಆ ಪ್ರಕರಣಗಳನ್ನು ಯಾವುದೇ ನ್ಯಾಯಾಲಯಗಳು ವಿಚಾರಣೆಗೆ ಅಂಗೀಕರಿಸಬಾರದು. ಈ ಪ್ರಕರಣದಲ್ಲಿ ಸರ್ಕಾರದ ಪೂರ್ವಾನುಮತಿ ಇಲ್ಲದಿದ್ದರೂ ಅರ್ಜಿದಾರರ ವಿರುದ್ಧದ ದೂರನ್ನು ಮ್ಯಾಜಿಸ್ಟ್ರೇಟ್ ವಿಚಾರಣೆಗೆ ಪರಿಗಣಿಸಿದ್ದು, ಇದು ಕಾನೂನಿನ ಪ್ರಕಾರ ಊರ್ಜಿತವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪ್ರಕರಣ ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: 2017ರ ಫೆಬ್ರವರಿ 25ರಂದು ಬಬಲೇಶ್ವರದಲ್ಲಿ ಶ್ರೀರಾಮ ಸೇನೆ ಕಚೇರಿ ಉದ್ಘಾಟನೆ ಹಾಗೂ ಶಿವಾಜಿ ಮಹಾರಾಜ ಜಯಂತಿ ಆಚರಣೆಯಲ್ಲಿ ಪ್ರಮೋದ್ ಮುತಾಲಿಕ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಭಿಕರನ್ನು ಉದ್ದೇಶಿಸಿ ಭಾಷಣ ಮಾಡುವಾಗ, ಗೋವನ್ನು ಹಿಂದೂಗಳು ತಾಯಿಯ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ. ಅನ್ಯ ಕೋಮಿನವರು ಗೋವನ್ನು ಕೊಂದು ತಿನ್ನುತ್ತಾರೆ. ಗೋಹತ್ಯೆ ಮಾಡುವವರ ಕೈಗಳನ್ನು ಕತ್ತರಿಸಬೇಕೆಂದು ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಎರಡು ಕೋಮುಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ಸಂಜ್ಞೇಯ ತೆಗೆದುಕೊಂಡಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮುತಾಲಿಕ್‌ಗೆ ಸಮನ್ಸ್ ಜಾರಿಗೊಳಿಸಿತ್ತು. ಇದರಿಂದ, ಪ್ರಕರಣ ರದ್ದು ಕೋರಿ ಮುತಾಲಿಕ್ ಹೈಕೋರ್ಟ್ ಮೆಟ್ಟಿಲೇರಿದ್ದರು.

Attachment
PDF
Pramod Mutalik Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com