ಪೊಲೀಸ್ ಸಬ್ ಇನ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಅಕ್ರಮದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ (ಪಿಎಂಎಲ್‌ಎ) ದಾಖಲಿಸಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ಅನುಮತಿಸಿದ್ದ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.
ಬೆಂಗಳೂರಿನ ಒಂದನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅರ್ಜಿದಾರ-ಆರೋಪಿ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಡಿ ಹರ್ಷ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.
“ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿ ನೀಡಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅಧಿಕಾರವಿಲ್ಲ. ಆದರೆ, ವಿಶೇಷ ನ್ಯಾಯಾಲಯ ಅಥವಾ ಸೆಷನ್ಸ್ ನ್ಯಾಯಾಲಯ ಮಾತ್ರ ಅನುಮತಿ ನೀಡಬಹುದಾಗಿದೆ. ಈ ನೆಲೆಯಲ್ಲಿ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಗಳ ವಿಚಾರಣೆಗೆ ಅನುಮತಿ ಕೋರಿ ವಿಶೇಷ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬಹುದು” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆಯಾಗಿರುವ ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದೆ. ಇದರ ಮುಂದುವರಿದ ಭಾಗವಾಗಿ, ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಡಿ ಹರ್ಷ, ಆರ್ ಮಂಜುನಾಥ್, ಆರ್ ಶರತ್ ಕುಮಾರ್, ಶಾಂತಕುಮಾರ ಹಾಗೂ ಎಸ್ ಜಾಗೃತ್ ಅವರ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ಕಾಯಿದೆ 2002ರ ಸೆಕ್ಷನ್ 50 (2) ಮತ್ತು (3)ರ ಅಡಿ ದಾಖಲಿಸಿಕೊಳ್ಳಲು ಅನುಮತಿಸುವಂತೆ ಜಾರಿ ನಿರ್ದೇಶನಾಲಯ ಕೋರಿತ್ತು. ಇದಕ್ಕೆ 1ನೇ ಎಸಿಎಂಎಂ ನ್ಯಾಯಾಲಯ 2022ರ ಸೆಪ್ಟೆಂಬರ್ 14ರಂದು ಅನುಮತಿಸಿತ್ತು. ಇದನ್ನು ಹರ್ಷ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ, ವಕೀಲ ಜಿ ಅರುಣ್ ಅವರು “ಜಾರಿ ನಿರ್ದೇನಾಲಯ ದಾಖಲಿಸಿರುವ ಪ್ರಕರಣವು ವಿಶೇಷ ಅಥವಾ ಸತ್ರ ನ್ಯಾಯಾಲಯದ ವ್ಯಾಪ್ತಿಗೆ ಬರಲಿದೆ. ಯಾವುದೇ ತೆರನಾದ ಆದೇಶ ಪಡೆಯಲು ಅರ್ಜಿದಾರರು ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಈ ವಿಚಾರದಲ್ಲಿ ಆದೇಶ ಮಾಡುವ ಅಧಿಕಾರ ವ್ಯಾಪ್ತಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಇಲ್ಲ” ಎಂದು ವಾದಿಸಿದ್ದರು.
ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಮಧುಕರ್ ದೇಶಪಾಂಡೆ ಅವರು “ಪಿಎಸ್‌ಐ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ನಿರ್ದಿಷ್ಟ (ಡೆಸಿಗ್ನೇಟೆಡ್) ನ್ಯಾಯಾಲಯವು ನಡೆಸಬೇಕು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಲಿ ಪ್ರಕರಣದಲ್ಲಿ ಅರ್ಜಿದಾರ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇಲ್ಲಿ, ಅರ್ಜಿದಾರರು ನ್ಯಾಯಾಂಗ ಬಂಧನದಲ್ಲಿದ್ದಾಗ, ಹೇಳಿಕೆ ದಾಖಲಿಸಿಕೊಳ್ಳಲು ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿ ಮಾಡಲಾಗದು. ಹೀಗಾಗಿ, ಅನುಮತಿ ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಮ್ಯಾಜಿಸ್ಟ್ರೇಟ್ ಆದೇಶ ಮಾಡಿದ್ದಾರೆ. ಹೀಗಾಗಿ, ಆ ಆದೇಶದಲ್ಲಿ ಯಾವುದೇ ತಪ್ಪಿಲ್ಲ” ಎಂದು ವಾದಿಸಿದ್ದರು. ಈ ವಾದವನ್ನು ಹೈಕೋರ್ಟ್ ಪುರಸ್ಕರಿಸಿಲ್ಲ.
ಸಿಐಡಿಯನ್ನು ಸರ್ಕಾರದ ಪರ ವಕೀಲ ಕೆ ಎಸ್ ಅಭಿಜಿತ್ ಪ್ರತಿನಿಧಿಸಿದ್ದರು.