ಪಿಎಸ್‌ಐ ಮರುಪರೀಕ್ಷೆ: ಆಯ್ಕೆಯಾದ ಅಭ್ಯರ್ಥಿಗಳಿಗೆ ವಿಶೇಷ ಪರೀಕ್ಷೆ ಅಸಾಧ್ಯ ಎಂದು ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಸರ್ಕಾರದ ವರದಿ ಪರಿಶೀಲಿಸಿದ ಪೀಠವು ಹಾಗಾದರೆ ಅರ್ಜಿಗಳನ್ನು ಅರ್ಹತೆ ಆಧಾರದ ಮೇಲೆ ಸೋಮವಾರ ವಿಚಾರಣೆ ನಡೆಸಲಾಗುವುದು ಎಂದಿತು. ಪಕ್ಷಕಾರರ ಪರ ಎಲ್ಲಾ ವಕೀಲರಿಗೂ ಲಿಖಿತ ವಾದ ಸಲ್ಲಿಸುವಂತೆ ಪೀಠವು ಸೂಚಿಸಿ, ವಿಚಾರಣೆ ಮುಂದೂಡಿತು.
PSI exam scam and Karnataka HC
PSI exam scam and Karnataka HC

ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮದಲ್ಲಿ ಭಾಗಿಯಾಗಿರುವವರನ್ನು ಹೊರತುಪಡಿಸಿ ಉಳಿದವರಿಗೆ ವಿಶೇಷ ಪರೀಕ್ಷೆ ನಡೆಸಲು ಏಕೆ ಸಾಧ್ಯವಿಲ್ಲ ಎಂಬುದಕ್ಕೆ ಸಂಬಂಧಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ರಾಜ್ಯ ಸರ್ಕಾರವು ಸಲ್ಲಿಸಿತು. ಇದನ್ನು ಪರಿಶೀಲಿಸಿದ ನ್ಯಾಯಾಲಯವು ವಿಚಾರಣಾರ್ಹತೆಯ ಆಧಾರದಲ್ಲಿ ಅರ್ಜಿಗಳ ಅಂತಿಮವಾಗಿ ಸೋಮವಾರ ಆಲಿಸಲಾಗುವುದು ಎಂದು ಮೌಖಿಕವಾಗಿ ಹೇಳಿತು.

ನೇಮಕಾತಿಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಆಯ್ಕೆಯಾಗಿದ್ದ 100ಕ್ಕೂ ಅಧಿಕ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಪಿಎಸ್‌ಐ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳ ಪೈಕಿ ಆರೋಪ ಎದುರಿಸುತ್ತಿರುವವರನ್ನು ಹೊರತುಪಡಿಸಿ ಉಳಿದವರಿಗೆ ಮಾತ್ರ ಪರೀಕ್ಷೆ ನಡೆಸಲಾಗದು. ಈ ಸಂಬಂಧದ ಸರ್ಕಾರದ ಮಟ್ಟದಲ್ಲಿನ ಚರ್ಚೆಯ ವರದಿಯನ್ನು ನ್ಯಾಯಾಲಯಕ್ಕೆ ಗೌಪ್ಯವಾಗಿ ಸಲ್ಲಿಸಲಾಗುತ್ತಿದೆ ಎಂದರು.

ಸರ್ಕಾರದ ವರದಿ ಪರಿಶೀಲಿಸಿದ ಪೀಠವು ಹಾಗಾದರೆ ಅರ್ಜಿಗಳನ್ನು ವಿಚಾರಣಾರ್ಹತೆಯ ಆಧಾರದಲ್ಲಿ ಸೋಮವಾರ ಮಧ್ಯಾಹ್ನ 2.30ಕ್ಕೆ ಆಲಿಸಲಾಗುವುದು ಎಂದಿತು. ಪಕ್ಷಕಾರರ ಪರ ಎಲ್ಲಾ ವಕೀಲರಿಗೂ ಲಿಖಿತ ವಾದ ಸಲ್ಲಿಸುವಂತೆ ಪೀಠವು ಸೂಚಿಸಿ, ವಿಚಾರಣೆ ಮುಂದೂಡಿತು.

Also Read
ಪಿಎಸ್‌ಐ ಹಗರಣ: ಮರು ಪರೀಕ್ಷೆ ಸಾಧ್ಯತೆ ಕುರಿತು ಮಾಹಿತಿ ನೀಡಲು ಸರ್ಕಾರಕ್ಕೆ ಜುಲೈ 5ರವರೆಗೆ ಹೈಕೋರ್ಟ್‌ ಕಾಲಾವಕಾಶ

ಹಿರಿಯ ವಕೀಲರಾದ ಪಿ ಎಸ್‌ ರಾಜಗೋಪಾಲ್‌, ಕೆ ಎನ್‌ ಫಣೀಂದ್ರ ಮತ್ತು ಡಿ ಆರ್‌ ರವಿಶಂಕರ್‌ ಹಾಗೂ ವಕೀಲರಾದ ಸಂತೋಷ್‌ ನಗರ್ಲೆ ಮತ್ತಿತರರು ಇದ್ದರು.

ಇದೇ ಸಂದರ್ಭದಲ್ಲಿ ಪಿಎಸ್‌ಐ ಪರೀಕ್ಷೆಯಲ್ಲಿ ಪಾಸಾಗಿರುವ ಮತ್ತು ಆಕಾಂಕ್ಷಿಗಳಾಗಿರುವ ಅಭ್ಯರ್ಥಿಗಳು ವಿಡಿಯೊ ಕಾನ್ಫರೆನ್ಸ್‌ನಲ್ಲಿ ಗಲಾಟೆ ಮಾಡುವ ಮೂಲಕ ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸಿರುವುದಕ್ಕೆ ನ್ಯಾಯಾಲಯವು ತೀವ್ರ ಅಸಮಾಧಾನ ಹೊರಹಾಕಿತು.

Kannada Bar & Bench
kannada.barandbench.com