ಪಿಎಸ್‌ಐ ನೇಮಕಾತಿ ಹಗರಣ: ಅಮೃತ್‌ ಪೌಲ್‌ರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

ಪೌಲ್‌ರನ್ನು ಹೆಚ್ಚುವರಿಯಾಗಿ ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿ ನೀಡಿದ್ದ ಅವಧಿ ಇಂದು ಮುಗಿದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರ ಮುಂದೆ ಹಾಜರುಪಡಿಸಲಾಗಿತ್ತು.
Senior IPS officer Amrit Paul and PSI Scam
Senior IPS officer Amrit Paul and PSI Scam

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಬಂಧಿತರಾಗಿ ಅಮಾನತುಗೊಂಡಿರುವ ಪೊಲೀಸ್‌ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮೃತ್‌ ಪೌಲ್‌ ಅವರನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಶುಕ್ರವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪೌಲ್‌ ಅವರನ್ನು ಹೆಚ್ಚುವರಿಯಾಗಿ ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿ ನೀಡಿದ್ದ ಅವಧಿ ಇಂದು ಮುಗಿದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆನಂದ್‌ ಟಿ. ಚವ್ಹಾಣ್‌ ಅವರ ಮುಂದೆ ಹಾಜರುಪಡಿಸಲಾಗಿತ್ತು.

ಮ್ಯಾಜಿಸ್ಟ್ರೇಟ್‌ ಅವರು ಪೌಲ್‌ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಜುಲೈ 4ರಂದು ಬಂಧಿತರಾಗಿದ್ದ ಪೌಲ್‌ ಅವರನ್ನು ಮೊದಲಿಗೆ 10 ಪೊಲೀಸ್‌ ವಶಕ್ಕೆ ನೀಡಲಾಗಿತ್ತು. ಜುಲೈ 13ರಂದು ಮತ್ತೆ ಮೂರು ದಿನಗಳ ಕಾಲ ಮ್ಯಾಜಿಸ್ಟ್ರೇಟ್‌ ಅವರು ಪೌಲ್‌ರನ್ನು ಪೊಲೀಸ್‌ ಕಸ್ಟಡಿಗೆ ನೀಡಿದ್ದರು.

ವೈದ್ಯಕೀಯ ಚಿಕಿತ್ಸೆಯಲ್ಲಿರುವುದರಿಂದ ಪೌಲ್‌ ಅವರಿಗೆ ಸುಳ್ಳು ಪತ್ತೆ ಪರೀಕ್ಷೆ ಬೇಡ ಎಂದು ನ್ಯಾಯಾಲಯವು ಹೇಳಿದೆ. ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್‌ ಶೀಟ್‌ ಹಾಗೂ ಸ್ಟ್ರಾಂಗ್‌ ರೂಮ್‌ನಲ್ಲಿ ಅಕ್ರಮ ಎಸಗಿರುವುದಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಿದ ಸಾಕ್ಷ್ಯವನ್ನು ಆಧರಿಸಿ ನೇಮಕಾತಿ ವಿಭಾಗದ ಮುಖಸ್ಥ ಪೌಲ್‌ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

Also Read
ಪಿಎಸ್‌ಐ ಹಗರಣ: ಅಮೃತ್‌ ಪೌಲ್‌ರನ್ನು ಮತ್ತೆ ಮೂರು ದಿನ ಸಿಐಡಿ ವಶಕ್ಕೆ ನೀಡಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

545 ಪಿಎಸ್‌ಐ ಹುದ್ದೆ ನೇಮಕಾತಿಗೆ ನಡೆದ ಪರೀಕ್ಷೆಯನ್ನು 54,287 ಅಭ್ಯರ್ಥಿಗಳು ಎದುರಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯು 50ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದೆ. ಕಲ್ಯಾಣ ಕರ್ನಾಟಕ ವಿಭಾಗದಿಂದ ಆಯ್ಕೆಯಾಗಿದ್ದ 67 ಮಂದಿಯ ಪೈಕಿ ವೀರೇಶ್‌ ಎನ್‌ ಎಂಬ ಅಭ್ಯರ್ಥಿಯು ಏಳನೇ ರ್ಯಾಂಕ್‌ ಪಡೆದಿದ್ದರು. ಆತನ ಓಎಂಆರ್‌ ಹಾಳೆಯ ಕಾರ್ಬನ್‌ ಕಾಪಿಯಲ್ಲಿ 150 ಅಂಕಗಳಿಗೆ ನಿಗದಿಯಾಗಿದ್ದ 100 ಪ್ರಶ್ನೆಗಳನ್ನು ಒಳಗೊಂಡಿದ್ದ ಬಹು ಪ್ರಶ್ನೆ ಪತ್ರಿಕೆಯಲ್ಲಿ ಕೇವಲ 21 ಪ್ರಶ್ನೆಗಳಿಗೆ ಉತ್ತರಿಸಿದ್ದರೂ ವೀರೇಶ್‌ಗೆ 121 ಅಂಕ ನೀಡಲಾಗಿತ್ತು. ಇದು ಇಡೀ ಹಗರಣ ಬೆಳಕಿಗೆ ಬರಲು ನಾಂದಿ ಹಾಡಿತ್ತು. ಆನಂತರ ಹಗರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯ ಚೌಕ್‌ ಮತ್ತು ಸ್ಟೇಷನ್‌ ಬಜಾರ್‌ ಠಾಣೆ, ಬೆಂಗಳೂರಿನ ಹೈಗ್ರೌಂಡ್ಸ್‌ ಸೇರಿದಂತೆ ಹಲವು ಕಡೆ ಆರೋಪಿಗಳ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.

Related Stories

No stories found.
Kannada Bar & Bench
kannada.barandbench.com