[ಪಿಎಸ್‌ಐ ಹಗರಣ] ಆರೋಪಿಗಳು ಎಸಗಿರುವ ಕೃತ್ಯವು ಮರಣ ದಂಡನೆ ಶಿಕ್ಷೆ ವಿಧಿಸುವ ಅಪರಾಧಕ್ಕಿಂತ ಗಂಭೀರವಾದದ್ದು: ನ್ಯಾಯಾಲಯ

ಹಗರಣದ ರೂವಾರಿ ಎಂದು ಗುರುತಿಸಿರುವ ಕಲಬುರ್ಗಿಯ ಜ್ಞಾನ ಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಅವರಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ.
PSI exam scam
PSI exam scam

ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಪ್ರಕರಣದಲ್ಲಿ ಆರೋಪಿಗಳು ಎಸಗಿರುವ ಕೃತ್ಯವು ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವ ಅಪರಾಧಕ್ಕಿಂತಲೂ ಗಂಭೀರವಾದುದಾಗಿದೆ ಎಂದು ಕಲಬುರ್ಗಿ ಜಿಲ್ಲಾ ನ್ಯಾಯಾಲಯವು ಈಚೆಗೆ ಹೇಳಿದ್ದು, ಹಗರಣದ ರೂವಾರಿ ಎಂದು ಗುರುತಿಸಿರುವ ಕಲಬುರ್ಗಿಯ ಜ್ಞಾನ ಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಅವರಿಗೆ ಜಾಮೀನು ನಿರಾಕರಿಸಿದೆ.

ಕಲಬುರ್ಗಿಯ ಚೌಕ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ದಿವ್ಯಾ ಹಾಗರಗಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹೇಮಾವತಿ ಅವರು ನಡೆಸಿದರು.

ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯನ್ನು ದಿವ್ಯಾ ಮತ್ತು ಇತರೆ ಆರೋಪಿಗಳು ವಾಣಿಜ್ಯ ಚಟುವಟಿಕೆಯನ್ನಾಗಿಸಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ದುರಾಚಾರ, ವಂಚನೆ ಮತ್ತು ಪಿತೂರಿಯ ಮೂಲಕ ಇಡೀ ನೇಮಕಾತಿ ವ್ಯವಸ್ಥೆಯನ್ನೇ ಆರೋಪಿಗಳು ನಲುಗಿಸಿದ್ದಾರೆ. ಅಪರಾಧದ ಗಂಭೀರತೆ ಮತ್ತು ಅದು ಸಮಾಜದ ಮೇಲೆ ಬೀರುವ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಆರೋಪಿಗಳ ದುಷ್ಕೃತ್ಯದಿಂದ ಪರೀಕ್ಷೆ ಬರೆದಿದ್ದ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ತೀವ್ರ ಸಮಸ್ಯೆಯಾಗಿದೆ. ಸರ್ಕಾರಿ ಉದ್ಯೋಗದ ನೇಮಕಾತಿಯಲ್ಲಿ ಪಾರದರ್ಶಕತೆ ಬಯಸುವ, ವಿಸ್ತೃತ ನೆಲೆಯಲ್ಲಿ ಸಮಾಜ ಸುಧಾರಣೆಯ ವಿಚಾರದಲ್ಲಿ ಇದು ಮಹತ್ವದ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಆರೋಪಿಯು ಮಹಿಳೆಯಾಗಿರುವುದರಿಂದ ಸಿಆರ್‌ಪಿಸಿ ಸೆಕ್ಷನ್‌ 437(1)ರ ಅಡಿ ಕೆಲವು ಸೌಲಭ್ಯ ಕಲ್ಪಿಸಬೇಕು. ಆದರೆ, ಈ ಪ್ರಕರಣದಲ್ಲಿ ಸೆಕ್ಷನ್‌ 437(1)ರ ಲಾಭ ನೀಡಲಾಗದು. ಏಕೆಂದರೆ ಪ್ರತಿಭಾನ್ವಿತ ಅಭ್ಯರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಉಂಟು ಮಾಡಬಹುದಾದ ಅಪರಾಧದಲ್ಲಿ ದಿವ್ಯಾ ಭಾಗಿಯಾಗಿದ್ದಾರೆ ಎಂದಿರುವ ಪೀಠವು ಜಾಮೀನು ನಿರಾಕರಿಸಿದೆ.

Kannada Bar & Bench
kannada.barandbench.com