ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಪ್ರಕರಣದಲ್ಲಿ ಆರೋಪಿಗಳಾಗಿರುವ ಕಾಂಗ್ರೆಸ್ ಮುಖಂಡ ಮಹಾಂತೇಶ್ ಪಾಟೀಲ್ ಮತ್ತು ಅವರ ಸಹೋದರನಾದ ಗುತ್ತಿಗೆದಾರ ಆರ್ ಡಿ ಪಾಟೀಲ್ ಅವರಿಗೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಗುರುವಾರ ಜಾಮೀನು ಮಂಜೂರು ಮಾಡಿದೆ.
ಕಲಬುರ್ಗಿಯ ಮಹಾಂತೇಶ್ ಮತ್ತು ಆರ್ ಡಿ ಪಾಟೀಲ್ ಅಲಿಯಾಸ್ ರುದ್ರಗೌಡ ಅವರ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ. ವಿವರವಾದ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ.
2022ರ ಏಪ್ರಿಲ್ 22ರಂದು ಬಂಧಿತರಾಗಿದ್ದ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಅವರು ಪ್ರಕರಣದಲ್ಲಿ 13ನೇ ಆರೋಪಿಯಾಗಿದ್ದು, ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳಿಗೆ ಉತ್ತರ ಹೇಳಿಕೊಡುತ್ತಿದ್ದ ಗುತ್ತಿಗೆದಾರ ಆರ್ ಡಿ ಪಾಟೀಲ್ ಅವರು 14ನೇ ಆರೋಪಿಯಾಗಿದ್ದಾರೆ.
ಕಲಬುರ್ಗಿಯ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ವೀರೇಶ ನಿಡಗುಂದಾ ಎಂಬ ಅಭ್ಯರ್ಥಿ ಬಂಧನದೊಂದಿಗೆ ಅಕ್ರಮ ಬಯಲಿಗೆ ಬಂದಿತ್ತು. ಆರೋಪಿಗಳ ವಿರುದ್ಧ ಕಲಬುರ್ಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 120 (ಬಿ), 465, 468, 471, 410 ಜೊತೆಗೆ 34ರ ಅಡಿ ಪ್ರಕರಣ ದಾಖಲಾಗಿದೆ.
ಈಚೆಗೆ ಬಿಜೆಪಿಯ ನಾಯಕಿ ಹಾಗೂ ಕಲಬುರ್ಗಿಯ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) ಸಹಾಯಕ ಕಮಾಂಡೆಂಟ್ (ಡಿವೈಎಸ್ಪಿ) ವೈಜನಾಥ್ ಕಲ್ಯಾಣಿ ರೇವೂರ ಅವರ ಜಾಮೀನು ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ವಜಾ ಮಾಡಿತ್ತು.
ಅರ್ಜಿದಾರರನ್ನು ವಕೀಲ ಅಶೋಕ್ ಮೂಲಗೆ ಮತ್ತು ರಾಜ್ಯ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕಿರಣ್ ಜವಳಿ, ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಪ್ರಕಾಶ್ ಎಲಿ ಪ್ರತಿನಿಧಿಸಿದ್ದರು.