ಪಿಎಸ್‌ಐ ನೇಮಕಾತಿ ಹಗರಣ: ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಪೊಲೀಸ್‌ ವಶಕ್ಕೆ

ಸುದೀರ್ಘ ವಿಚಾರಣೆಯ ಬಳಿಕ ಸಿಸಿಬಿ ಪೊಲೀಸರು ಪೌಲ್‌ ಅವರನ್ನು ಬಂಧಿಸಿದರು. ವೈದ್ಯಕೀಯ ತಪಾಸಣೆಯ ಬಳಿಕ ಅವರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಲಾಯಿತು.
PSI exam scam
PSI exam scam

ಪೊಲೀಸ್‌ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ಹಿಂದಿನ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಅಮೃತ್ ಪೌಲ್ ಅವರನ್ನು ಬೆಂಗಳೂರಿನ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸೋಮವಾರ ಹತ್ತು ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡಿದೆ.

ಸುದೀರ್ಘ ವಿಚಾರಣೆಯ ಬಳಿಕ ಸಿಐಡಿ ಪೊಲೀಸರು ಪೌಲ್‌ ಅವರನ್ನು ಬಂಧಿಸಿದರು. ವೈದ್ಯಕೀಯ ತಪಾಸಣೆಯ ಬಳಿಕ ಅವರನ್ನು ಪೊಲೀಸರು ನ್ಯಾಯಾಲಯ ಮುಂದೆ ಹಾಜರುಪಡಿಸಿದರು. ಅಂತಿಮವಾಗಿ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆನಂದ್‌ ಟಿ. ಚವ್ಹಾಣ್‌ ಅವರು ಪೌಲ್‌ ಅವರನ್ನು ಪ್ರಕರಣದ ಹೆಚ್ಚಿನ ತನಿಖೆಗಾಗಿ ಹತ್ತು ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡಿದರು.

ಹಗರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಅಲ್ಲದೆ ಡಿವೈಎಸ್‌ಪಿಗಳಾದ ಶಾಂತಕುಮಾರ್, ವೈಜನಾಥ ರೇವೂರ, ಆರ್‌ಎಸ್‌ಐ ಲೋಕೇಶಪ್ಪ, ಎಸ್‌ಐ ಲೋಕೇಶ್, ಹೆಡ್ ಕಾನ್‌ಸ್ಟೇಬಲ್ ಲೋಕೇಶ್, ಎಸ್‌ಡಿಎ ಹರ್ಷ, ಶ್ರೀಧರ್ ಎಂಬವರು ಈಗಾಗಲೇ ಸಿಐಡಿ ಬಂಧನಕ್ಕೆ ಒಳಗಾಗಿದ್ದಾರೆ. ಇವರಿಗೆ ದಲ್ಲಾಳಿಗಳಾಗಿ ಕೆಲಸ ಮಾಡಿದ್ದ ಸಬ್ ಇನ್‌ಸ್ಪೆಕ್ಟರ್‌ಗಳು ಸಹ ಬಂಧನಕ್ಕೆ ಒಳಗಾಗಿದ್ದಾರೆ.

2019ರಲ್ಲಿ ಪೂರ್ವ ವಲಯ ಐಜಿಪಿ ಆಗಿದ್ದ ಅಮೃತ್ ಪೌಲ್, ಸೇವಾ ಹಿರಿತನದ ಆಧಾರದ ಮೇಲೆ 2020ರಲ್ಲಿ ಫೆಬ್ರವರಿ 2ರಂದು ಎಡಿಜಿಪಿ ಹುದ್ದೆಗೆ ಬಡ್ತಿ ಪಡೆದು ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು. ಇದಕ್ಕೆ ಇಲಾಖೆಯಲ್ಲಿ ಅಪಸ್ವರಗಳು ಕೇಳಿ ಬಂದಿದ್ದವು.

Also Read
ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಬೆದರಿಕೆ ಎದುರಿಸಲೂ ಸಿದ್ಧ: ಹೈಕೋರ್ಟ್‌ ನ್ಯಾ. ಸಂದೇಶ್‌ ಸ್ಫೋಟಕ ನುಡಿ

ಈವರೆಗೆ 62 ಮಂದಿ ಜೈಲಿಗೆ: ನೇಮಕಾತಿ ಹಗರಣದಲ್ಲಿ ಈವರೆಗೆ 17 ಪೊಲೀಸರು, 8 ದಲ್ಲಾಳಿಗಳು, ಮೂವರು ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ನೌಕರರು, ಒಬ್ಬ ಸಹಾಯಕ ಎಂಜಿನಿಯರ್, ಪರೀಕ್ಷಾ ಕೇಂದ್ರಗಳ ನಾಲ್ವರು ಮೇಲ್ವಿಚಾರಕರು ಮತ್ತು 24 ಅಭ್ಯರ್ಥಿಗಳು, ಒಬ್ಬ ಅಭ್ಯರ್ಥಿಯ ತಂದೆ ಹಾಗೂ ಇನ್ನೊಬ್ಬ ಅಭ್ಯರ್ಥಿಯ ಪತಿಯನ್ನು ಸಿಐಡಿ ಬಂಧಿಸಿದೆ. ಒಟ್ಟಾರೆ ಬಂಧಿತರ ಸಂಖ್ಯೆ 62 ದಾಟಿದೆ. ಅಕ್ರಮದಲ್ಲಿ ಶಾಮೀಲಾದ ಆರೋಪದ ಮೇಲೆ ಸರ್ಕಾರಿ ನೌಕರರನ್ನು ಅಮಾನತುಗೊಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com