[ಪಿಎಸ್‌ಐ ಹಗರಣ] ಅಮೃತ್‌ ಪೌಲ್‌ ಜಾಮೀನು ಆದೇಶ ಕಾಯ್ದಿರಿಸಿದ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

ಇಡೀ ಹಗರಣ ಮೇಲ್ನೋಟಕ್ಕೆ ಮಧ್ಯಪ್ರದೇಶದಲ್ಲಿ ನಡೆದಿದ್ದ ವ್ಯಾಪಂ ಹಗರಣದಂತೆಯೇ ಕಂಡುಬರುತ್ತಿದೆ. ಆ ಪ್ರಕರಣದಲ್ಲೂ ಓಎಂಆರ್ ಶೀಟ್‌ಗಳನ್ನು ತಿದ್ದಲಾಗಿತ್ತು ಎಂದಿರುವ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌.
Senior IPS officer Amrit Paul and PSI Scam
Senior IPS officer Amrit Paul and PSI Scam

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಜುಲೈ 25ರಂದು ಆದೇಶ ಪ್ರಕಟಿಸುವುದಾಗಿ ಬುಧವಾರ ತಿಳಿಸಿದೆ.

ಹಗರಣದಲ್ಲಿ 35ನೇ ಆರೋಪಿಯಾಗಿರುವ ಅಮೃತ್ ಪೌಲ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರಾದ ಆನಂದ್‌ ಟಿ. ಚವ್ಹಾಣ್‌ ಅವರು ನಡೆಸಿದರು.

ಅಪರಾಧ ತನಿಖಾ ದಳದ (ಸಿಐಡಿ) ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್ ಅವರು “ಪಿಎಸ್‌ಐ ಪರೀಕ್ಷೆಯ ಒಎಂಆರ್ ಶೀಟ್‌ಗಳನ್ನು ತಿರುಚಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯಿಂದ ಇದು ಸಾಬೀತಾಗಿದೆ. ಓಎಂಆರ್ ಶೀಟ್‌ಗಳನ್ನು ಒಳಗೊಂಡ ಕಿಟ್ ಬಾಕ್ಸ್‌ಗಳನ್ನು ಇರಿಸಲಾಗಿದ್ದ ಸ್ಟ್ರಾಂಗ್ ರೂಂನ ಕೀಲಿಕೈ ನೇಮಕಾತಿ ವಿಭಾಗದ ಮುಖ್ಯಸ್ಥರಾದ ಎಡಿಜಿಪಿ ಪೌಲ್‌ ಅವರ ಬಳಿ ಇತ್ತು. ಪೌಲ್‌ ಅವರು ಆರೋಪಿಗಳೊಂದಿಗೆ ಒಳಸಂಚು ರೂಪಿಸಿ, ಉದ್ದೇಶಪೂರ್ವಕವಾಗಿ ಸ್ಟ್ರಾಂಗ್ ರೂಂ ಕೀ ನೀಡಿದ್ದಾರೆ. ಇದರಿಂದ, ಪ್ರಕರಣದಲ್ಲಿ ಅರ್ಜಿದಾರರ ಪಾತ್ರ ಸ್ಪಷ್ಟವಾಗಿದೆ” ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಸಾಕ್ಷ್ಯಗಳ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ. ಅರ್ಜಿದಾರರ ಮೊಬೈಲ್ ಪೋನ್ ಜಫ್ತಿ ಮಾಡಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ವರದಿಗೆ ನಿರೀಕ್ಷಿಸಲಾಗುತ್ತಿದೆ. ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.

P Prasanna Kumar, SPP for CID
P Prasanna Kumar, SPP for CID

ವ್ಯಾಪಂ ಹಗರಣದಷ್ಟೇ ದೊಡ್ಡ ಹಗರಣ

ಹಿರಿಯ ಅಧಿಕಾರಿಯಾಗಿರುವ ಅಮೃತ್ ಪೌಲ್ ಈಗಾಗಲೇ ಪ್ರಕರಣದ ಸಹ ಆರೋಪಿಗಳಿಗೆ ಬೆದರಿಕೆ ಒಡ್ಡಿದ್ದು, ತಮ್ಮ ಹೆಸರು ಬಹಿರಂಗ ಪಡಿಸಬಾರದು, ಒಂದೊಮ್ಮೆ ಹೆಸರು ಹೊರ ಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೆದರಿಸಿದ್ದಾರೆ. ಇಡೀ ಹಗರಣ ಮೇಲ್ನೋಟಕ್ಕೆ ಮಧ್ಯಪ್ರದೇಶದಲ್ಲಿ ನಡೆದಿದ್ದ ವ್ಯಾಪಂ ಹಗರಣದಂತೆಯೇ ಕಂಡುಬರುತ್ತಿದೆ. ಆ ಪ್ರಕರಣದಲ್ಲೂ ಓಎಂಆರ್ ಶೀಟ್‌ಗಳನ್ನು ತಿದ್ದಲಾಗಿತ್ತು. ಈ ಪ್ರಕರಣದಲ್ಲಿ ಓಎಂಆರ್ ಶೀಟ್‌ಗಳನ್ನು ಇರಿಸಲಾಗಿದ್ದ ಸ್ಟ್ರಾಂಗ್ ರೂಂನ ಕೀಗಳನ್ನು ಆರೋಪಿಗಳಿಗೆ ನೀಡುವ ಮೂಲಕ ಪೌಲ್ ಹಗರಣದಲ್ಲಿ ನೇರ ಭಾಗಿದಾರಾಗಿದ್ದಾರೆ. ಹಗರಣದಿಂದ ಸಾವಿರಾರು ಜನ ತೊಂದರೆಗೆ ಸಿಲುಕಿದ್ದು, ನ್ಯಾಯಾಲಯ ಸಮಾಜದ ಅಳಲನ್ನು ಆಲಿಸಬೇಕಿದೆ ಎಂದು ಕೋರಿದರು.

ಅಮೃತ್ ಪೌಲ್ ಅವರನ್ನು ಪ್ರತಿನಿಧಿಸಿದ್ದ ವಕೀಲರಾದ ನಿತಿನ್‌ ರಮೇಶ್‌ ಅವರು “ಪೌಲ್‌ ಅವರ ಆರೋಗ್ಯ ಸರಿ ಇಲ್ಲ. ನಿತ್ಯವೂ ಐದು ಮಾತ್ರೆಗಳನ್ನು ನುಂಗುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದರಿಂದ, ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು” ಎಂದು ಆತಂಕ ವ್ಯಕ್ತಪಡಿಸಿದರು.

Related Stories

No stories found.
Kannada Bar & Bench
kannada.barandbench.com