ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಮಾನತುಗೊಂಡಿರುವ ಹಿರಿಯ ಪೊಲೀಸ್ ಅಧಿಕಾರಿ ಅಮೃತ್ ಪೌಲ್ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಕೇಂದ್ರದ ಗೃಹ ಇಲಾಖೆಯು ಅನುಮತಿಸಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್ ಅವರು ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ತಿಳಿಸಿದರು.
ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನೇಮಕ ಮತ್ತು ವಜಾ ಮಾಡುವುದು ಕೇಂದ್ರ ಸರ್ಕಾರವಾಗಿರುವುದರಿಂದ ಅವರ ತನಿಖೆಗೆ ಕೇಂದ್ರ ಸರ್ಕಾರ ಅನುಮತಿ ನೀಡುವುದು ಅಗತ್ಯವಾಗಿದೆ. ಈ ನೆಲೆಯಲ್ಲಿ ರಾಷ್ಟ್ರಪತಿಯವರ ಪರವಾಗಿ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಯು ಜೂನ್ 28ರಂದು ಅನುಮತಿ ನೀಡಿ ಆದೇಶ ಮಾಡಿದ್ದಾರೆ.
ಪಿಎಸ್‌ಐ ಹಗರಣದಲ್ಲಿ 35ನೇ ಆರೋಪಿಯಾಗಿರುವ ಅಮೃತ್ ಪೌಲ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಹಗರಣದಲ್ಲಿ ಪೌಲ್ ಪಾತ್ರದ ಕುರಿತು ಎಳೆಎಳೆಯಾಗಿ ಪ್ರಸನ್ನಕುಮಾರ್ ಅವರು ನ್ಯಾಯಾಲಯಕ್ಕೆ ವಿವರಿಸಿದರು. ಪ್ರಭಾವಿಯಾದ ಪೌಲ್ ಅವರಿಗೆ ಜಾಮೀನು ನೀಡಿದರೆ ಅವರು ಪ್ರಾಸಿಕ್ಯೂಷನ್ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮೂಲಕ ಹಿನ್ನಡೆ ಉಂಟು ಮಾಡಲಿದ್ದಾರೆ ಎಂದು ಬಲವಾಗಿ ಆಕ್ಷೇಪಿಸಿದರು.
ಪೌಲ್ ಅವರು ತಮ್ಮ ಚೇಂಬರ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿಗಳನ್ನು ತೆರೆವು ಮಾಡಿಸಿರುವುದು ಪಿತೂರಿಗೆ ಸಾಕ್ಷಿಯಾಗಿದೆ. ಓಎಂಆರ್ ಶೀಟ್‌ಗಳನ್ನು ತಿದ್ದಲಾಗಿದೆ ಎನ್ನಲಾದ ದಿನಾಂಕದಂದು ವೈದ್ಯಕೀಯ ರಜೆಯಲ್ಲಿದ್ದುದಾಗಿ ಪೌಲ್ ಹೇಳಿದ್ದಾರೆ. ಆದರೆ, ಪೌಲ್ ರಜೆ ಪಡೆದಿರಲಿಲ್ಲ ಜೊತೆಗೆ ಆಸ್ಪತ್ರೆಗೆ ಭೇಟಿ ನೀಡಿರಲಿಲ್ಲ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಸಹ ಆರೋಪಿಗಳ ಜೊತೆ ಪೌಲ್ ಗೌಪ್ಯ ಸಭೆ ನಡೆಸಿರುವುದರ ಬಗ್ಗೆ ಸಾಕ್ಷಿಗಳು ಮಾಹಿತಿ ನೀಡಿದ್ದಾರೆ. ಪೌಲ್ ನಿಕಟವರ್ತಿ ಶಂಭುಲಿಂಗಯ್ಯ ಅವರ ಮೂಲಕ ಲಂಚದ ಹಣ ಪಡೆದಿರುವುದು ತನಿಖೆಯಿಂದ ಬಹಿರಂಗವಾಗಿದೆ. ಇಂಥ ಸಂದರ್ಭದಲ್ಲಿ ಪೌಲ್‌ಗೆ ಜಾಮೀನು ನೀಡಿದರೆ ಪ್ರಕರಣವು ದಿಕ್ಕುತಪ್ಪಲಿದೆ ಎಂದು ಪೀಠಕ್ಕೆ ವಿವರಿಸಿದರು.
ಇದಲ್ಲದೇ, ಆರೋಪಿ ಪೌಲ್ ಅವರು ತಮ್ಮ ಮೊಬೈಲ್ ಅನ್ನು ಫಾರ್ಮ್ಯಾಟ್ ಮಾಡುವ ಮೂಲಕ ಯಾವುದೇ ದಾಖಲೆ ಅಥವಾ ದತ್ತಾಂಶ ಲಭ್ಯವಾಗದಂತೆ ಮಾಡಿದ್ದಾರೆ ಎಂದು ಬಲವಾಗಿ ಆಕ್ಷೇಪಿಸಿದರು.
ಪ್ರಾಸಿಕ್ಯೂಷನ್ ವಾದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಎಂ ಎಸ್ ಶ್ಯಾಮಸುಂದರ್ ಅವರು “ಪ್ರಾಸಿಕ್ಯೂಷನ್ ವಕೀಲರು ಸಾಕ್ಷ್ಯಗಳ ಆಧಾರದಲ್ಲಿ ವಾದ ಮಾಡುತ್ತಿಲ್ಲ. ಆರೋಪ ಪಟ್ಟಿಯಲ್ಲಿ ಇಲ್ಲದ ಅಂಶಗಳೆನ್ನೆಲ್ಲಾ ಪ್ರಸ್ತಾಪಿಸುತ್ತಿದ್ದಾರೆ” ಎಂದರು.
ಅಂತಿಮವಾಗಿ ಪೀಠವು ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿತು. 2022ರ ಜುಲೈ 4ರಂದು ಬಂಧಿತರಾಗಿದ್ದ ಪೌಲ್ ಅವರು ಇದಾಗಲೇ ಜೈಲಿನಲ್ಲಿ ಒಂದು ವರ್ಷ ಕಳೆದಿದ್ದಾರೆ.