
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಅಕ್ರಮ ಪ್ರಕರಣದ ಏಳು ಮಂದಿ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಜಾಮೀನು ನಿರಾಕರಿಸಿದೆ.
ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾದ ಕೆ ಸಿ ದಿಲೀಪ್ ಕುಮಾರ್, ಎಚ್ ಆರ್ ಪ್ರವೀಣ್ ಕುಮಾರ್, ಸಿ ಎನ್ ಶಶಿಧರ್, ಆರ್ ಶರತ್‌ಕುಮಾರ್, ಎಚ್ ಯು ರಘವೀರ್, ಕೆ ಸೂರಿ ನಾರಾಯಣ್ ಸಲ್ಲಿಸಿದ್ದ ಜಾಮೀನು ಅರ್ಜಿ ಮತ್ತು ತಲೆಮರೆಸಿಕೊಂಡಿರುವ ಆರೋಪಿಯಾದ ಬ್ಯಾಡರಹಳ್ಳಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನವೀನ್ ಪ್ರಸಾದ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿತು.
ಪ್ರತ್ಯೇಕವಾಗಿ ಸಲ್ಲಿಕೆಯಾಗಿದ್ದ ಮನವಿಗಳನ್ನು ಒಟ್ಟಾಗಿ ಸೇರಿಸಿ ವಿಚಾರಣೆ ನಡೆಸಿದ್ದ ಪೀಠವು ಜುಲೈ 20ರಂದು ತೀರ್ಪು ಕಾಯ್ದಿರಿಸಿತ್ತು.
ವಿಚಾರಣೆ ವೇಳೆ ಅರ್ಜಿದಾರರ ಜಾಮೀನು ಅರ್ಜಿಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಅಪರಾಧ ತನಿಖಾ ದಳದ ಸರ್ಕಾರಿ ಅಭಿಯೋಜಕ ವಿ ಎಸ್ ಹೆಗ್ಡೆ ಅವರು “ಇದು ಸಾಧಾರಣ ಅಪರಾಧವಲ್ಲ. ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ, ಇನ್ಸ್‌ಪೆಕ್ಟರ್‌ಗಳು, ಹಣ ಸಂಗ್ರಹಿಸಿರುವ ದಲ್ಲಾಳಿಗಳು ಮತ್ತು ಕೆಲ ಅಭ್ಯರ್ಥಿಗಳು ಭಾಗಿಯಾಗಿದ್ದಾರೆ. ಹಗರಣದಲ್ಲಿ ಸಂಸ್ಥೆಯೊಳಗಿನ ಕಳಂಕಿತರ ಪಾತ್ರವಿದ್ದು, ಅವರನ್ನು ಪತ್ತೆ ಹಚ್ಚಬೇಕಿದೆ. ಹೀಗಾಗಿ ಜಾಮೀನು ನೀಡಬಾರದು” ಎಂದು ವಾದಿಸಿದ್ದರು. “ತನಿಖೆ ಪ್ರಗತಿಯಲ್ಲಿದ್ದು, ಅರ್ಜಿದಾರರ ಕೃತ್ಯದ ಸಾಬೀತುಪಡಿಸುವ ಸಾಕಷ್ಟು ಸಾಕ್ಷ್ಯಧಾರಗಳು ತನಿಖಾಧಿಕಾರಿಗಳಿಗೆ ಲಭ್ಯವಾಗಿವೆ. ಈ ಹಂತದಲ್ಲಿ ಅವರಿಗೆ ಜಾಮೀನು ನೀಡಿದರೆ ತನಿಖೆಗೆ ಸಮಸ್ಯೆಯಾಗುತ್ತದೆ” ಎಂದು ಜಾಮೀನಿಗೆ ವಿರೋಧಿಸಿದ್ದರು.
ಪೀಠವು ವಿಚಾರಣೆಯ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಕಠಿಣ ಶಬ್ದಗಳನ್ನು ಬಳಕೆ ಮಾಡಿತ್ತು. ಮೇಲಿಂದ ಮೇಲೆ ಸಿಐಡಿಯಿಂದ ತನಿಖಾ ವರದಿ ತರಿಸಿಕೊಂಡು ನ್ಯಾಯಾಲಯ ಪರಿಶೀಲಿಸಿತ್ತು. “ಇದು ಕೊಲೆಗಿಂತಲೂ ದೊಡ್ಡ ಅಪರಾಧವಾಗಿದ್ದು ಸಮಾಜದ ಮೇಲಿನ ದಾಳಿಯಾಗಿದೆ. ಪ್ರಕರಣದಲ್ಲಿ ಲಿಖಿತ ಪರೀಕ್ಷೆ ಬರೆದಿದ್ದ 50 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಅಕ್ರಮದಿಂದ ಸಂತ್ರಸ್ತರಾಗಿದ್ದಾರೆ. ನೊಂದ ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡಬೇಕಿದೆ” ಎಂದು ಹೇಳಿತ್ತು.