[ಪಿಎಸ್‌ಐ ಹಗರಣ] ಪೌಲ್ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಪೌಲ್‌ ಪರ ವಕೀಲರ ವಾದ

ಅನಿಗದಿತ ದಿನದಂದು 31ನೇ ಆರೋಪಿಯು ಪೌಲ್‌ಗೆ 1.35 ಲಕ್ಷ ರೂಪಾಯಿ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಇದಕ್ಕಾಗಿ ಸಾಕ್ಷಿಯ ರೂಪದಲ್ಲಿ ಶಂಭುಲಿಂಗಯ್ಯ ಎಂಬವರನ್ನು ಎಳೆದು ತರಲಾಗಿದೆ ಎಂದು ಆಕ್ಷೇಪ.
IPS officer Amrit Paul and Karnataka HC
IPS officer Amrit Paul and Karnataka HC

ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಅವರ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಪೌಲ್ ಪರ ವಕೀಲರು ಸೋಮವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಬಲವಾಗಿ ವಾದಿಸಿದ್ದಾರೆ.

“ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿಗೆ ಸಂಬಂಧಿಸಿದಂತೆ ಓಎಂಆರ್‌ ಶೀಟ್‌ಗಳನ್ನು ಇಟ್ಟಿದ್ದ ಸ್ಟ್ರಾಂಗ್‌ ರೂಮ್‌ನ ಮತ್ತೊಂದು ಕೀ ನೇಮಕಾತಿ ವಿಭಾಗದಲ್ಲಿ ಸಹಾಯಕ ಆಡಳಿತಾತ್ಮಕ ಅಧಿಕಾರಿ ಸುನೀತಾ ಬಾಯಿ ಅವರ ಬಳಿ ಇತ್ತು. ಆದರೆ, ಇಲ್ಲಿ ಆಕೆಯನ್ನು ಸಾಕ್ಷಿಯಾಗಿ ಪರಿಗಣಿಸಿ, ನನ್ನನ್ನು ಆರೋಪಿ ಮಾಡಲಾಗಿದೆ. ನನ್ನ ವಿರುದ್ಧದ ಯಾವುದೇ ಆರೋಪಕ್ಕೆ ಸಾಕ್ಷಿ ಇಲ್ಲ. ಬದಲಿಗೆ ಇರುವುದು ಬರೀ ಹೇಳಿಕೆಗಳಷ್ಟೇ” ಎಂದು ಅಮಾನತುಗೊಂಡಿರುವ ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಪರ ಹಿರಿಯ ವಕೀಲ ಎಂ ಎಸ್‌ ಶ್ಯಾಮ್‌ಸುಂದರ್‌ ಅವರು ನ್ಯಾಯಾಲಯದಲ್ಲಿ ಬಲವಾಗಿ ವಾದಮಂಡನೆ ಮಾಡಿದರು.

ಪೌಲ್‌ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠ ಇಂದೂ ಮುಂದುವರಿಸಿತು. ಸುಮಾರು ಒಂದು ತಾಸು ವಾದ ಆಲಿಸಿದ ಪೀಠವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

ಶ್ಯಾಮ್‌ಸುಂದರ್‌ ಅವರ ವಾದದ ಪ್ರಮುಖ ಅಂಶಗಳು ಇಂತಿವೆ:

  • ಸುನೀತಾ ಬಾಯಿ ಅವರ ಬಳಿ ಮತ್ತೊಂದು ಕೀ ಇತ್ತು. ಸ್ಟ್ರಾಂಗ್‌ ರೂಮ್‌ನ ಕೀಯನ್ನು ಪೌಲ್‌ ಬೇರೊಬ್ಬರಿಗೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಇಲ್ಲಿ ಪೌಲ್‌ ಆರೋಪಿಯಾಗಿದ್ದು, ಸುನೀತಾ ಬಾಯಿ ಅವರು ಸಾಕ್ಷಿಯಾಗಿದ್ದಾರೆ. ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ಆಕೆ ಹೇಳಿಕೆ ದಾಖಲಿಸಿ, ಸಾಕ್ಷಿಯಾಗಿದ್ದಾರೆ. ಆದರೆ, ಆಕೆಯನ್ನು ಅನುಮಾನದಿಂದ ನೋಡಿಯೇ ಇಲ್ಲ. ಸುನೀತಾ ಬಾಯಿ ಅವರನ್ನು ಬಿಟ್ಟು ಪೌಲ್‌ ವಿರುದ್ಧ ನೇರ ಸಾಕ್ಷಿ ಇಲ್ಲದಿದ್ದರೂ ಆರೋಪ ಮಾಡಲಾಗಿದೆ. ಪೌಲ್ ವಿರುದ್ದ ಸಾಕ್ಷಿಗಾಗಿ ಸುನೀತಾ ಬಾಯಿ ಅವರನ್ನು ಬಳಕೆ ಮಾಡಲಾಗಿದೆ. ಇಲ್ಲಿ ಆಕೆಯ ವಿರುದ್ದ ಯಾವುದೇ ತನಿಖೆ ನಡೆದಿಲ್ಲ. ಆಕೆ ಸತ್ಯದ ದೇವತೆಯಂತೆ ಚಿತ್ರಿಸಲಾಗಿದೆ.

  • 31ನೇ ಆರೋಪಿ ಡಿವೈಎಸ್‌ಸಿ ಶಾಂತಕುಮಾರ್‌ ಸ್ವಯಂ ಹೇಳಿಕೆ ಹೊರತುಪಡಿಸಿ ಪೌಲ್‌ ವಿರುದ್ಧ ಯಾವುದೇ ಸಾಕ್ಷಿ ಇಲ್ಲ. ಪಿಎಸ್‌ಐ ಹಗರಣದ ಓಎಂಆರ್‌ ಶೀಟ್‌ಗಳನ್ನು ಶಾಂತಕುಮಾರ್‌ ಜೊತೆ ಸೇರಿ ತಿರುಚಲಾಗಿದೆ ಎಂಬ ಏಕೈಕ ಆರೋಪ ಅಮೃತ್‌ ಪೌಲ್‌ ವಿರುದ್ಧ ಇದೆ.

  • ಶಾಂತಕುಮಾರ್‌ ಅವರಿಂದ 5 ಕೋಟಿ ರೂಪಾಯಿ ಡೀಲ್‌ ಭಾಗವಾಗಿ 1.35 ಕೋಟಿ ರೂಪಾಯಿ ಸ್ವೀಕರಿಸಿದ್ದೇನೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನನ್ನಿಂದ ಯಾವುದೇ ಹಣ ಜಪ್ತಿ ಮಾಡಲಾಗಿಲ್ಲ. ಇದಕ್ಕೆ ಯಾವುದೇ ಪುರಾವೆ ಇಲ್ಲ.

  • ಹಣವಷ್ಟೇ ಅಲ್ಲ, ಬೇರೇನನ್ನೂ ವಶಕ್ಕೆ ಪಡೆಯಲಾಗಲಿಲ್ಲ. 2021ರ ಅಕ್ಟೋಬರ್‌ 7, 8 ಮತ್ತು 16ರಂದು ಓಎಂಆರ್‌ ತಿರುಚಲಾಗಿದೆ ಎಂಬುದು ತನಿಖಾಧಿಕಾರಿಯ ವಾದವಾಗಿದೆ. ಈ ದಿನಾಂಕಗಳಲ್ಲಿ ಅಕ್ರಮ ನಡೆದಿದೆ ಎಂಬುದು ಅವರ ವಾದ.  ಅಕ್ಟೋಬರ್‌ 7 ಮತ್ತು 8ರಂದು ಗೈರಾಗಿದ್ದರು ಎಂಬುದನ್ನು ಒತ್ತಿ ಹೇಳುತ್ತಿದ್ದಾರೆ. ಆದರೆ, ಅಕ್ಟೋಬರ್‌ 16ರಂದು ಪೌಲ್‌ ಕರ್ತವ್ಯದಲ್ಲಿದ್ದದ್ದನ್ನು ಹೇಳುತ್ತಿಲ್ಲ.

  • ಅನಿಗದಿತ ದಿನದಂದು 31ನೇ ಆರೋಪಿಯು ಪೌಲ್‌ಗೆ 1.35 ಕೋಟಿ ರೂಪಾಯಿ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಇದಕ್ಕೆ ಯಾವುದೇ ಸಾಕ್ಷಿ ಇಲ್ಲ. ಹೇಗಾದರೂ ಮಾಡಿ ಪೌಲ್‌ ಸಿಲುಕಿಸಲು, ಹಣ ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಸಾಬೀತುಪಡಿಸಲು, ಸಿಡಬ್ಲು 281 ಶಂಭುಲಿಂಗಯ್ಯ ಅವರನ್ನು ಎಳೆದು ತರಲಾಗಿದೆ. ಅವರ ಬಳಿ ಪೌಲ್‌ ಹಣ ಇಡುತ್ತಿದ್ದರು ಎಂದು ಆರೋಪಿಸಲಾಗಿದೆ. ಶಂಭುಲಿಂಗಯ್ಯ ಅವರಿಂದ ರೂ. 41 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಸಿಆರ್‌ಪಿಸಿ ಸೆಕ್ಷನ್‌ 164 ಅಡಿ ಹೇಳಿಕೆ ದಾಖಲಿಸಲಾಗಿದೆ. ಆದರೆ, ಇದಕ್ಕೂ ಯಾವುದೇ ಸಾಕ್ಷಿ ಇಲ್ಲ.

  • ಪೌಲ್‌ ಅವರನ್ನು ಬಂಧಿಸಿದಾಗ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಪ್ರಕರಣ ದಾಖಲಿಸಿರಲಿಲ್ಲ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅನ್ವಯಿಸುವುದಕ್ಕೂ ಮುನ್ನ ಆರೋಪ ಪಟ್ಟಿ ಸಲ್ಲಿಸಲಾಗಿದೆ. ನನ್ನನ್ನು ಜೈಲಿನಲ್ಲಿ ಇಡುವ ಉದ್ದೇಶದಿಂದ ಆನಂತರ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅನ್ವಯಿಸಲಾಗಿದೆ.

  • ಹಣಕ್ಕಾಗಿ ಹಗರಣದಲ್ಲಿ ಭಾಗಿಯಾಗಿದ್ದೇನೆ ಎಂಬುದು ಆರಂಭದಿಂದಲೂ ಪೌಲ್‌ ವಿರುದ್ಧದ ಆರೋಪ. ಮೊದಲನೇ ದಿನದಂದು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಸ್ತಿತ್ವದಲ್ಲಿರಲಿಲ್ಲವೇ? ಅದು ಇತ್ತು. ಆದರೆ, ಅದನ್ನು ಅವರು ಅನ್ವಯಿಸಿರಲಿಲ್ಲ ಎಂದು ವಾದ.

Related Stories

No stories found.
Kannada Bar & Bench
kannada.barandbench.com