ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರ ಬಂಧನ ಕಾನೂನುಬಾಹಿರ ಎಂದು ಅವರ ಪರ ಹಿರಿಯ ವಕೀಲ ಶ್ಯಾಮ್ ಸುಂದರ್ ಅವರು ಗುರುವಾರ ವಾದಿಸಿದರು.
ಪ್ರಕರಣದಲ್ಲಿ 35ನೇ ಆರೋಪಿಯಾಗಿರುವ ಅಮೃತ್ ಪೌಲ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಮೊಹಮ್ಮದ್ ನವಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಅಮೃತ್ ಪೌಲ್ ಅವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಎಂ ಎಸ್ ಶ್ಯಾಮ್ ಸುಂದರ್ ಅವರು ಪೌಲ್ ಬಂಧನವಾಗಿ ಒಂದು ವರ್ಷ ಸಮೀಪಿಸುತ್ತಿದ್ದು, ಸಂಜ್ಞೇಯ ಪರಿಗಣಿಸದೇ ಬಂಧಿಸಿ, ರಿಮ್ಯಾಂಡ್‌ನಲ್ಲಿ ಇಟ್ಟಿರುವುದು ಕಾನೂನುಬಾಹಿರ ಎಂದರು.
ಕಲಬುರ್ಗಿ ಚೌಕ್ ಠಾಣೆಯ ತನಿಖಾಧಿಕಾರಿಯ ಸೂಚನೆಯ ಮೇರೆಗೆ ಪೌಲ್ ಅವರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖಾಧಿಕಾರಿಯೇ ದೂರುದಾರರಾಗುವುದು ನ್ಯಾಯದಾನ ತತ್ವದ ಗಂಭೀರ ಉಲ್ಲಂಘನೆಯಾಗಿದೆ. ಪ್ರಕರಣಕ್ಕೆ ಎರಡು ಮುಖಗಳಿದ್ದು, ಅಭ್ಯರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡುವುದು ಮತ್ತು ಅದಕ್ಕೆ ಅಧಿಕಾರಿಗಳು ನೆರವು ನೀಡುವುದಾಗಿದೆ. ಹೀಗಿರುವಾಗ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಮಾತ್ರ ಪ್ರಕರಣ ದಾಖಲಿಸಬಹುದೇ ವಿನಾ ಬೇರೆ ಸೆಕ್ಷನ್‌ಗಳ ಅಡಿ ಅಲ್ಲ. ನಕಲು ಮಾಡುವುದು ಐಪಿಸಿ ಅಡಿ ಅಪರಾಧವಲ್ಲ. ಆದ್ದರಿಂದ, ಬಿಂಬಿಸುತ್ತಿರುವಂತೆ ಪ್ರಕರಣ ಗಂಭೀರವಲ್ಲ ಎಂದು ಪ್ರತಿಪಾದಿಸಿದರು.
ಕಂತುಗಳ ರೂಪದಲ್ಲಿ ಆರೋಪ ಪಟ್ಟಿ ಸಲ್ಲಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗೆ ಮಾಡುವುದು ಆರೋಪಿಯ ಹಕ್ಕಿಗೆ ವಿರುದ್ಧವಾಗಿದ್ದು, ಅದನ್ನು ಬದಿಗೆ ಸರಿಸಬೇಕು. ಈ ನಡೆಯನ್ನು ಪ್ರಕರಣವೊಂದರಲ್ಲಿ ದೆಹಲಿ ಹೈಕೋರ್ಟ್ ಖಂಡಿಸಿದೆ. ತನಿಖೆ ಪೂರ್ಣಗೊಂಡಿದ್ದರೂ ಬಾಕಿ ಎಂದು ಹೇಳಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಮೊದಲಿಗೆ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದ್ದು, ಆನಂತರ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳನ್ನು ಸೇರಿಸಲಾಗಿದೆ. ಹೀಗಿರುವಾಗ ವಿಶೇಷ ನ್ಯಾಯಾಲಯವು ವ್ಯಾಪ್ತಿ ಮೀರಬಾರದಿತ್ತು ಎಂದು ವಾದಿಸಿದರು.
ವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿದೆ. ಈ ಹಿಂದೆ ಸತ್ರ ನ್ಯಾಯಾಲಯವು ಹಲವು ಬಾರಿ ಪೌಲ್ ಅವರ ಜಾಮೀನು ಅರ್ಜಿ ವಜಾ ಮಾಡಿತ್ತು.
ಅಮೃತ್ ಪೌಲ್ ಅವರಿಗೆ 5 ಕೋಟಿ ರೂಪಾಯಿ ನೀಡಿದ್ದು, ಹೀಗಾಗಿ ಅವರು ಪಿಎಸ್‌ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಓಎಂಆರ್ ಕಿಟ್‌ಬಾಕ್ಸ್‌ಗಳನ್ನು ಇರಿಸಿದ್ದ ಅಲ್ಮೇರಾಗಳ ಕೀಗಳನ್ನು ನೀಡಿದ್ದು, ಇದನ್ನು ಬಳಸಿ ಓಎಂಆರ್ ತಿರುಚಿರುವುದಾಗಿ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಬಂಧಿತರಾಗಿ ಅಮಾನತುಗೊಂಡಿರುವ 31ನೇ ಆರೋಪಿ ಶಾಂತಕುಮಾರ್ ಹೇಳಿಕೆ ನೀಡಿದ್ದಾರೆ ಎಂದು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಆಧರಿಸಿ 2022ರ ಜುಲೈ 4ರಂದು ಅಮೃತ್ ಪೌಲ್ ಅವರನ್ನು ಸಿಐಡಿ ಬಂಧಿಸಿತ್ತು.
ಈಚೆಗೆ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನು ಅಕ್ರಮವಾಗಿ ವಶದಲ್ಲಿ ಇಡಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಅಪರಾಧ ತನಿಖಾ ದಳಕ್ಕೆ (ಸಿಐಡಿ) ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.
ಸಿಐಡಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್ ವಾದಿಸಿದರು. ವಕೀಲೆ ಪಿ ಎಲ್ ವಂದನಾ ಅವರು ಪೌಲ್ ಅವರ ಅಡ್ವೊಕೇಟ್ ಆನ್ ರೆಕಾರ್ಡ್ ಆಗಿದ್ದಾರೆ.