ಪಿಎಸ್‌ಐ ಅಮಾನತು; ವಕೀಲ ಚಾಂದ್‌ ಪಾಷ‌ ವಿರುದ್ಧ ಕಠಿಣ ಕ್ರಮ: ಸಚಿವ ಪರಮೇಶ್ವರ್‌

ರಾಮನಗರ ಜಿಲ್ಲಾ ವಕೀಲರ ಸಂಘದ 40 ವಕೀಲರ ವಿರುದ್ಧ ಐಜೂರು ಠಾಣೆಯ ಪಿಎಸ್‌ಐ ಪ್ರಕರಣ ದಾಖಲಿಸಿರುವ ವಿಚಾರವು ಹೋರಾಟದ ಕಿಡಿ ಹೊತ್ತಿಸಿತ್ತು.
ಪಿಎಸ್‌ಐ ಅಮಾನತು; ವಕೀಲ ಚಾಂದ್‌ ಪಾಷ‌ ವಿರುದ್ಧ ಕಠಿಣ ಕ್ರಮ: ಸಚಿವ ಪರಮೇಶ್ವರ್‌

ರಾಮನಗರದ ಐಜೂರು ಠಾಣೆಯ ಪಿಎಸ್‌ಐ ಸಯ್ಯದ್‌ ತನ್ವೀರ್‌ ಹುಸೇನ್‌ ಅವರನ್ನು ಅಮಾನತು ಮಾಡಲಾಗಿದೆ ಮತ್ತು ವಕೀಲ ಚಾಂದ್‌ ಪಾಷಾ ವಿರುದ್ಧ ಕಠಿಣ ಕ್ರಮ ಕ್ರಮಕೈಗೊಳ್ಳಲಾಗುವುದು ಎಂದು ವಿಧಾನಸಭೆಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ವಿಧಾನಸಭೆಗೆ ಮಾಹಿತಿ ನೀಡಿದರು.

ಈ ಹಿನ್ನೆಲೆಯಲ್ಲಿ ಫೆಬ್ರವರಿ 22ರಂದು ಕರೆ ನೀಡಲಾಗಿದ್ದ ಬಂದ್‌ ಮತ್ತು ವಿಧಾನ ಸೌಧ ಚಲೋ ಹೋರಾಟ ಕೈಬಿಟ್ಟಿರುವುದಾಗಿ ಬೆಂಗಳೂರು ವಕೀಲರ ಸಂಘ ತಿಳಿಸಿದೆ. ರಾಮನಗರದಲ್ಲೂ ವಕೀಲರು ಒಂಭತ್ತು ದಿನಗಳಿಂದ ಸತತವಾಗಿ ನಡೆಸಿದ್ದ ಧರಣಿ ಕೈಬಿಟ್ಟು ಕರ್ತವ್ಯಕ್ಕೆ ಮರಳಿದ್ದಾರೆ. ರಾಮನಗರ ಜಿಲ್ಲಾ ವಕೀಲರ ಸಂಘದ 40 ವಕೀಲರ ವಿರುದ್ಧ ಐಜೂರು ಠಾಣೆಯ ಪಿಎಸ್‌ಐ ಪ್ರಕರಣ ದಾಖಲಿಸಿರುವ ವಿಚಾರವು ಮಂಗಳವಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತ್ತು.

ವಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ ಆಗ್ರಹದ ಹಿನ್ನೆಲೆಯಲ್ಲಿ ಬುಧವಾರ ವಿಧಾನಸಭೆಗೆ ಹಾಜರಾದ ಸಚಿವ ಪರಮೇಶ್ವರ್‌ ಅವರು “ಪಿಎಸ್‌ಐ ಸಯ್ಯದ್‌ ತನ್ವೀರ್‌ ಹುಸೇನ್‌ ಅಮಾನತು ಮಾಡುತ್ತಿದ್ದೇವೆ. ಈಗಾಗಲೇ ಅವರ ವಿರುದ್ದ ಚನ್ನಪಟ್ಟಣದ ಡಿವೈಎಸ್‌ಪಿ ತನಿಖೆ ನಡೆಸುತ್ತಿರುವುದರಿಂದ ಅದಕ್ಕೂ ಅಮಾನತು ನೆರವಾಗಲಿದೆ. ಇನ್ನು ಅಪರಾಧ ಎಸಗುವುದನ್ನು ಹವ್ಯಾಸ ಮಾಡಿಕೊಂಡಿರುವ ವಕೀಲ ಚಾಂದ್‌ ಪಾಷಾ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು” ಎಂದು ಸದನಕ್ಕೆ ಭರವಸೆ ನೀಡಿದರು. ಇದನ್ನು ವಿಪಕ್ಷಗಳ ನಾಯಕರು ಮೇಜು ತಟ್ಟುವ ಮೂಲಕ ಸ್ವಾಗತಿಸಿದರು.

ರಾಜ್ಯ ಸರ್ಕಾರದ ಕ್ರಮದಿಂದ ಕಳೆದ ಕೆಲವು ದಿನಗಳಿಂದ ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿದ್ದ ವಕೀಲರು-ಪೊಲೀಸರ ತಿಕ್ಕಾಟಕ್ಕೆ ಸದ್ಯಕ್ಕೆ ವಿರಾಮ ಬಿದ್ದಂತಾಗಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಕೀಲರ ಸಂಘಗಳು, ವಕೀಲರು, ವಿಪಕ್ಷ ನಾಯಕರು ರಾಮನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಕೀಲರಿಗೆ ಬೆಂಬಲ ಸೂಚಿಸಿದ್ದರು.

ಅಮಾನತು ಆದೇಶದಲ್ಲೇನಿದೆ?: ಫೆಬ್ರವರಿ 6ರಂದು ವಕೀಲರ ಸಂಘಕ್ಕೆ ರಫೀಕ್ ಖಾನ್ ಹಾಗೂ ಇತರರು ಭೇಟಿ ನೀಡಿದಾಗ ನಡೆದ ಘಟನೆ ಕುರಿತು, ಮಾರನೇಯ ದಿನ ರಫೀಕ್ ನೀಡಿದ ದೂರಿನ ಮೇರೆಗೆ ರೇಣುಕಾ ಪ್ರಸಾದ್ ಸೇರಿದಂತೆ 9 ವಕೀಲರು ಹಾಗೂ ಇತರ 35–40 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದೀರಿ. ಇದರ ವಿರುದ್ಧ ಅಸಮಾಧಾನಗೊಂಡ ಪೊಲೀಸರು ಫೆ. 12ರಿಂದ 20ರವರೆಗೆ ಪ್ರತಿಭಟನೆ ನಡೆಸಿದ್ದಾರೆ. ಬೇರೆ ಜಿಲ್ಲೆಗಳ ವಕೀಲರು ಸಹ ಬಂದು ಅವರನ್ನು ಬೆಂಬಲಿಸಿದ್ದಾರೆ. ಫೆ. 19ರಂದು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಘಟನೆಯನ್ನ ಪರಿಶೀಲಿಸದೆ ಪ್ರಕರಣ ದಾಖಲಿಸಿರುವುದರಿಂದ, ನಮಗೆ ಅನ್ಯಾಯವಾಗಿದೆ ಎಂದಿದ್ದಾರೆ. ಘಟನೆ ಕುರಿತು ನಿಮ್ಮ ವಿರುದ್ಧ ವಿಚಾರಣೆ ನಡೆಸಿ ವರದಿ ನೀಡಲು ಎಸ್‌ಪಿ ಅವರು ಚನ್ನಪಟ್ಟಣ ಡಿವೈಎಸ್ಪಿಗೆ ಆದೇಶಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಚಾರಣಾ ವರದಿ ನಿರೀಕ್ಷೆಯೊಂದಿಗೆ ಕರ್ನಾಟಕ ಪೊಲೀಸ್ (ಶಿಸ್ತುಕ್ರಮ) ನಿಯಮ 1965/85ರ ನಿಯಮ 5ರಡಿ ತಕ್ಷಣದಿಂದ ಜಾರಿಗೆ ಬರುವಂತೆ ನಿಮ್ಮನ್ನು ಕರ್ತವ್ಯದಿಂದ ಅಮಾನತಿನಲ್ಲಿರಿಸಲಾಗಿದೆ. ಅಮಾನತು ಅವಧಿಯಲ್ಲಿ ಖಾಸಗಿ ನೌಕರಿ ಅಥವಾ ಬೇರೆ ವ್ಯಾಪಾರ ಮಾಡುವಂತಿಲ್ಲ. ಈ ಬಗ್ಗೆ ಪ್ರತಿ ತಿಂಗಳು ಪ್ರಮಾಣಪತ್ರ ಸಲ್ಲಿಸಬೇಕು. ಕೇಂದ್ರ ಸ್ಥಾನ ಬಿಟ್ಟು ಹೋಗುವಾಗ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ನಿಯಮ ಮೀರಿ ದುರ್ನಡತೆ ತೋರಿದರೆ ಪ್ರತ್ಯೇಕವಾಗಿ ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಕೇಂದ್ರ ವಲಯ ಐಜಿಪಿ ಡಾ. ಬಿ ಆರ್ ರವಿಕಾಂತೇಗೌಡ ಆದೇಶದಲ್ಲಿ ತಿಳಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com