
ಪಕ್ಷಪಾತದ ತನಿಖೆ ನಡೆಯುತ್ತಿದೆ ಎಂಬುದಾಗಿ ವ್ಯಾಪಕ ಸಾರ್ವಜನಿಕ ಟೀಕೆ ಎದುರಾಗುವ ಮಟ್ಟಕ್ಕೆ ಕೇಂದ್ರೀಯ ತನಿಖಾ ದಳದ (ಸಿಬಿಐ) ಕೆಲಸದ ಸಂಸ್ಕೃತಿ ಹದಗೆಟ್ಟಿದೆ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದೆ.
ಸಿಬಿಐನಲ್ಲಿ ಸಾರ್ವಜನಿಕ ನಂಬಿಕೆ ಮತ್ತೆ ಬೇರೂರುವುದಕ್ಕಾಗಿ ನ್ಯಾಯಮೂರ್ತಿ ಕೆ ಕೆ ರಾಮಕೃಷ್ಣನ್ ಅವರಿದ್ದ ಪೀಠ ಹಲವು ನಿರ್ದೇಶನಗಳನ್ನು ನೀಡಿತು.
ಇತ್ತೀಚಿನ ದಿನಗಳಲ್ಲಿ ಸಿಬಿಐನ ಕೆಲಸದ ಸಂಸ್ಕೃತಿ ಎನ್ನುವುದು ಅಸಂತುಲಿತ ತನಿಖೆಗಾಗಿ ಎಲ್ಲರಿಂದಲೂ ಟೀಕೆಗೆ ಗುರಿಯಾಗುವ ಮಟ್ಟಕ್ಕೆ ಇಳಿದಿದೆ... ಸಿಬಿಐ ಅಧಿಕಾರಿಗಳು ತಮಗೆ ಅಗಾಧ ಅಧಿಕಾರವಿದ್ದು ಯಾರೂ ತಮ್ಮನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಆಲೋಚಿಸುತ್ತಾರೆ. ಆದ್ದರಿಂದ, ಜನರು ಸಿಬಿಐನ ಕೆಲಸದ ಸಂಸ್ಕೃತಿ ಕುಸಿಯುತ್ತಿದೆ ಎಂದು ಭಾವಿಸುತ್ತಾರೆ. ಈ ಆರೋಪಗಳಿಗೆ ಕೆಲವು ಕಾರಣಗಳಿವೆ ಎಂದು ಈ ನ್ಯಾಯಾಲಯ ಕಂಡುಕೊಂಡಿದ್ದು ಸಿಬಿಐ ಮೇಲೆ ಜನರ ವಿಶ್ವಾಸ ಮರಳಿ ಮೂಡಲು ತಮ್ಮ ತನಿಖಾ ವೈಖರಿಯನ್ನು ಪುನರ್ವಿಮರ್ಶಿಸಲು ಮತ್ತು ಪರಿಷ್ಕರಿಸಲು ಸಿಬಿಐ ನಿರ್ದೇಶಕರಿಗೆ ಈ ಕೆಳಗಿನ ಸಲಹೆಗಳನ್ನು ನೀಡಲು ತಾನು ಒಲವು ತೋರುತ್ತಿರುವುದಾಗಿ ಏಪ್ರಿಲ್ 28ರ ತನ್ನ ತೀರ್ಪಿನಲ್ಲಿ ಅದು ತಿಳಿಸಿದೆ.
ಪ್ರಕರಣವನ್ನು ದಾಖಲಿಸುವ ಸೂಕ್ತತೆಯ ಬಗ್ಗೆ ಸಲಹೆ ನೀಡಲು ಮತ್ತು ಅನಗತ್ಯ ಪ್ರಕರಣ ದಾಖಲಿಸುವುದನ್ನು ತಪ್ಪಿಸಲು ಕಾನೂನು ತಂಡವೊಂದನ್ನು ಸಿಬಿಐ ನೇಮಿಸಿಕೊಳ್ಳಬೇಕು ಎಂಬುದು ನ್ಯಾಯಾಲಯ ನೀಡಿರುವ ವಿವಿಧ ನಿರ್ದೇಶನಗಳಲ್ಲಿ ಒಂದಾಗಿದೆ.
ಸಿಬಿಐ ಕುರಿತು ಸಾರ್ವಜನಿಕವಾಗಿ ಮರಳಿ ವಿಶ್ವಾಸ ಮೂಡಲು ನ್ಯಾಯಾಲಯ ನೀಡಿದ ನಿರ್ದೇಶನಗಳು ಹೀಗಿವೆ:
(i) ಸಿಬಿಐ ನಿರ್ದೇಶಕರು ಎಫ್‌ಐಆರ್ ಮತ್ತು ಅಂತಿಮ ವರದಿಯಲ್ಲಿ ಆರೋಪಿಗಳ ಪೂರ್ವಾಪರ, ವ್ಯಾಪ್ತಿಯ ಬಗ್ಗೆ ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಬೇಕು;
(ii) ನಿರ್ದೇಶಕರು ತನಿಖೆಯ ಪ್ರಗತಿಯನ್ನು ಪ್ರಜ್ಞಾಪೂರ್ವಕವಾಗಿ ಮೇಲ್ವಿಚಾರಣೆ ಮಾಡಬೇಕು ಮತ್ತು ಸಾಕ್ಷ್ಯ ಸಂಗ್ರಹ ಮತ್ತು ಸಾಕ್ಷ್ಯಗಳ ಲೋಪವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು;
(iii) ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ರೂಪಿಸುವ ಕಾನೂನು ತತ್ವಗಳ ಬಗ್ಗೆ ತನಿಖಾ ಅಧಿಕಾರಿಗೆ ಬೋಧನೆ ಮಾಡಲು ಮತ್ತು ನಿರುಪದ್ರವಿ ಪ್ರಕರಣಗಳ ದಾಖಲಾತಿ ತಪ್ಪಿಸಲು ಪ್ರಕರಣದ ದಾಖಲಾತಿ ಸೂಕ್ತವಾಗಿರುವಂತೆ ನೋಡಿಕೊಳ್ಳಲು ನಿರ್ದೇಶಕರು ಪ್ರತ್ಯೇಕ ಕಾನೂನು ತಂಡ ನೇಮಿಸಬೇಕು;
(iv) ತನಿಖಾಧಿಕಾರಿಯನ್ನು ವೈಜ್ಞಾನಿಕ ಪ್ರಗತಿಯೊಂದಿಗೆ ಸಜ್ಜುಗೊಳಿಸಲು ನಿರ್ದೇಶಕರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸಾಲ ಮಂಜೂರು ಮಾಡುವ ಮತ್ತು ಪಡೆಯುವ ಮೂಲಕ ಬ್ಯಾಂಕ್‌ಗೆ ₹2 ಕೋಟಿ ವಂಚಿಸಿದ ಆರೋಪದ ಮೇಲೆ 2019ರಲ್ಲಿ ಶಿಕ್ಷೆಗೊಳಗಾದ ತಿರುನಲ್ವೇಲಿ ಬ್ಯಾಂಕಿನ ಮಾಜಿ ಮುಖ್ಯ ವ್ಯವಸ್ಥಾಪಕ ಸೇರಿದಂತೆ ಎಂಟು ವ್ಯಕ್ತಿಗಳನ್ನು ಖುಲಾಸೆಗೊಳಿಸುವಾಗ ಪೀಠ ಈ ನಿರ್ದೇಶನಗಳನ್ನು ನೀಡಿತು.
ಸಿಬಿಐ ಕಳಪೆ ತನಿಖೆ ನಡೆಸಿದೆ ಎಂದು ತೋರಿಸುವ ಒಂದು ಶ್ರೇಷ್ಠ ಪ್ರಕರಣ ಇದು ಎಂದು ಪೀಠ ಇದೇ ವೇಳೆ ಅತೃಪ್ತಿ ವ್ಯಕ್ತಪಡಿಸಿತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]