ಋತುಸ್ರಾವ ನೈರ್ಮಲ್ಯದ ಯೋಜನೆಗಳನ್ನು ರಾಜ್ಯಗಳು ಜಾರಿಗೊಳಿಸಬೇಕೆ ವಿನಾ ತಾನಲ್ಲ ಎಂದ ಕೇಂದ್ರ

ಯುವತಿಯರು ಮತ್ತು ಹದಿಹರೆಯದ ಹೆಣ್ಣುಮಕ್ಕಳಿಗೆ ಋತುಸ್ರಾವ ನೈರ್ಮಲ್ಯ ಸಂಪನ್ಮೂಲಗಳನ್ನು ಒದಗಿಸಲು ತಾನು ಬದ್ಧವಾಗಿರುವುದಾಗಿ ಕೇಂದ್ರ ಸ್ಪಷಪಡಿಸಿದೆ.
Supreme Court
Supreme Court

ಋತುಸ್ರಾವ ನೈರ್ಮಲ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ರಾಜ್ಯ ಸರ್ಕಾರಗಳು ಜಾರಿಗೊಳಿಸಬೇಕೆ ವಿನಾ ಕೇಂದ್ರ ಸರ್ಕಾರ ಮತ್ತದರ ಅಂಗಸಂಸ್ಥೆಗಳಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಡಾ. ಜಯಾ ಠಾಕೂರ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಸಾರ್ವಜನಿಕ ಆರೋಗ್ಯವು ರಾಜ್ಯಪಟ್ಟಿಗೆ ಸೇರಿರುವುದರಿಂದ ಸಾರ್ವಜನಿಕ ಆರೋಗ್ಯ ಸಂಪನ್ಮೂಲಗಳನ್ನು ಒದಗಿಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಬುಧವಾರ ಸಲ್ಲಿಸಿದ ಉತ್ತರದಲ್ಲಿ ತಿಳಿಸಲಾಗಿದೆ.

ಪ್ರತಿ ಶಾಲೆಯಲ್ಲಿ ಹದಿಹರೆಯದ ಬಾಲಕಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ನೀಡುವಂತೆ ಮತ್ತು ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ವಸತಿ ಶಾಲೆಗಳಲ್ಲಿ ಬಾಲಕಿಯರ ಪ್ರತ್ಯೇಕ ಶೌಚಾಲಯವನ್ನು ನಿರ್ಮಿಸುವಂತೆ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಆರೋಗ್ಯ ಸಚಿವಾಲಯ, ಶಿಕ್ಷಣ ಸಚಿವಾಲಯ ಮತ್ತು ಜಲ ಶಕ್ತಿ ಸಚಿವಾಲಯ ಸಲ್ಲಿಸಿದ ಸಾಮಾನ್ಯ ಅಫಿಡವಿಟ್‌ನಲ್ಲಿ ಈ ವಿಚಾರ ತಿಳಿಸಲಾಗಿದೆ. ಆದರೂ ಯುವತಿಯರು ಮತ್ತು ಹದಿಹರೆಯದ ಹೆಣ್ಣುಮಕ್ಕಳಿಗೆ ಋತುಸ್ರಾವ ನೈರ್ಮಲ್ಯ ಸಂಪನ್ಮೂಲಗಳನ್ನು ಒದಗಿಸಲು ತಾನು ಬದ್ಧವಾಗಿರುವುದಾಗಿ ಕೇಂದ್ರ ಸ್ಪಷಪಡಿಸಿದೆ.

10 ರಿಂದ 19 ವರ್ಷ ವಯಸ್ಸಿನ ಹದಿಹರೆಯದ ಹುಡುಗಿಯರಲ್ಲಿ ಋತುಸ್ರಾವ ನೈರ್ಮಲ್ಯ ಪ್ರೋತ್ಸಾಹಕ್ಕಾಗಿ 2011ರಿಂದ ಕೇಂದ್ರ ಯೋಜನೆಗಳನ್ನು ಹಮ್ಮಿಕೊಂಡಿದೆ.. ಇದು ದೀರ್ಘವಾದ ಯೋಜನೆಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

ಋತುಸ್ರಾವ ನೈರ್ಮಲ್ಯ ನೀತಿಗಳನ್ನು ಜಾರಿಗೆ ತರುವುದಕ್ಕಾಗಿ ರಾಜ್ಯಗಳಿಗೆ 2022-23 ನೇ ಸಾಲಿನಲ್ಲಿ   ₹ 197 ಕೋಟಿಗಿಂತ ಹೆಚ್ಚಿನ ಅನುದಾನ ನೀಡಲಾಗಿದೆ. ಇದಲ್ಲದೆ, 2015-16 ರಿಂದ, ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಖರೀದಿಯನ್ನು ರಾಜ್ಯಗಳು ಸ್ವೀಕರಿಸಿದ ಪ್ರಸ್ತಾವನೆಗಳ ಆಧಾರದ ಮೇಲೆ ರಾಜ್ಯ ಕಾರ್ಯಕ್ರಮ ಅನುಷ್ಠಾನ ಯೋಜನೆಗಳ (ಪಿಐಪಿ) ಮೂಲಕ ರಾಷ್ಟ್ರೀಯ ಆರೋಗ್ಯ ಮಿಷನ್ ಬೆಂಬಲಿಸುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ನ್ಯಾಯಾಲಯವು ಈ ಹಿಂದೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರಿಗೆ ಪ್ರಕರಣದಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದ್ದರಿಂದ ಪ್ರಕರಣಕ್ಕೆ ಹೆಚ್ಚು ಪ್ರಾಮುಖ್ಯತೆ ಒದಗಿತ್ತು.

ವಕೀಲರಾದ ವರೀಂದರ್ ಕುಮಾರ್ ಶರ್ಮಾ ಅವರ ಮೂಲಕ ಅರ್ಜಿದಾರರು ಸಲ್ಲಿಸಿದ್ದ ಮನವಿಯಲ್ಲಿ ಮುಟ್ಟಿನ ನೈರ್ಮಲ್ಯ ಕುರಿತಾದ ಅಸಮರ್ಪಕ ನಿರ್ವಹಣೆಯಿಂದಾಗಿ ಶಿಕ್ಷಣಕ್ಕೆ ಪ್ರಮುಖ ಅಡಚಣೆ ಉಂಟಾಗಿದ್ದು, ನೈರ್ಮಲ್ಯ ಸೌಲಭ್ಯಗಳು ಮತ್ತು ಋತುಸ್ರಾವಕ್ಕೆ ಸಂಬಂಧಿಸಿದ ಉತ್ಪನ್ನಗಳ ಲಭ್ಯತೆ ಇಲ್ಲದಿರುವುದರಿಂದ ಅನೇಕ ಹೆಣ್ಣುಮಕ್ಕಳು ಶಾಲೆ  ತೊರೆಯುತ್ತಾರೆ. ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಶೌಚಾಲಯ ಸೌಲಭ್ಯ  ಇಲ್ಲದಿರುವುದರಿಂದ  ಹುಡುಗಿಯರು ಎದುರಿಸುತ್ತಿರುವ ತೊಂದರೆಗಳು ಜಟಿಲವಾಗಿವೆ. ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಶೌಚಾಲಯದ ಕೊರತೆ ಇರುವುದರಿಂದಾಗಿ ಈ ಹುಡುಗಿಯರು ಎದುರಿಸುತ್ತಿರುವ ತೊಂದರೆಗಳು ಹೆಚ್ಚಿವೆ  ಎಂದು ತಿಳಿಸಲಾಗಿತ್ತು.

Kannada Bar & Bench
kannada.barandbench.com