ಕ್ಷುಲ್ಲಕ ಕಾರಣಗಳಿಗಾಗಿ ಕಾನೂನುಬದ್ಧ, ಜನೋಪಯೋಗಿ ಕಾರ್ಯಕ್ರಮವನ್ನು ನಿಷೇಧಿಸಲಾಗದು: ಹೈಕೋರ್ಟ್‌

“ಬಹುಜನರಿಗೆ ರೂಪಿಸಿರುವ ಕಲ್ಯಾಣ ಕಾರ್ಯಕ್ರಮದ ಆಶಯವನ್ನು ನ್ಯಾಯಾಲಯ ರಕ್ಷಿಸಬೇಕೇ ವಿನಾ ಕೆಲವರನ್ನಲ್ಲ” ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.
ಕ್ಷುಲ್ಲಕ ಕಾರಣಗಳಿಗಾಗಿ ಕಾನೂನುಬದ್ಧ, ಜನೋಪಯೋಗಿ  ಕಾರ್ಯಕ್ರಮವನ್ನು ನಿಷೇಧಿಸಲಾಗದು: ಹೈಕೋರ್ಟ್‌
Published on

“ಕ್ಷುಲ್ಲಕ ಕಾರಣಗಳ ಆಧಾರದಲ್ಲಿ ಕಾನೂನುಬದ್ಧ, ಜನೋಪಯೋಗಿ ಕಾರ್ಯಕ್ರಮವನ್ನು ನಿಷೇಧಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಮಾಡಿದಂತೆ” ಎಂದಿರುವ ಕರ್ನಾಟಕ ಹೈಕೋರ್ಟ್‌, 500 ಮೀಟರ್‌ ಅಂತರದಲ್ಲಿ ಎರಡು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ತೆರೆಯಲು ಅನುಮತಿಸಬಾರದು ಎಂದು ಕೋರಿದ್ದ ಅರ್ಜಿಯನ್ನು ಈಚೆಗೆ ತಿರಸ್ಕರಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಶೀಲಾ ಭಟ್‌ ಎಂಬುವರಿಗೆ ಜನೌಷಧಿ ಕೇಂದ್ರ ತೆರಯಲು ಅನುಮತಿಸಿರುವುದನ್ನು ಪ್ರಶ್ನಿಸಿ ಅದೇ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಸವಿನಯ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

“ಪ್ರತಿವಾದಿಯಾಗಿರುವ ಶೀಲಾ ಭಟ್‌ ಅವರಿಗೆ ಜನೌಷಧ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ. ಆದರೆ, ಸವಿನಯ ಅವರಿಗೆ ಜನೌಷಧಿ ಕೇಂದ್ರ ಸ್ಥಾಪಿಸಲು ತಾತ್ವಿಕ ಒಪ್ಪಿಗೆ ಮಾತ್ರ ನೀಡಲಾಗಿದೆ. ಹೀಗಿರುವಾಗ, ತನಗೆ ಮಂಜೂರಾಗಿರುವ ಕೇಂದ್ರಕ್ಕೂ ಶೀಲಾ ಭಟ್‌ಗೆ ಮಂಜೂರಾಗಿರುವ ಕೇಂದ್ರದ ನಡುವಿನ ಅಂತರ ಒಂದು ಕಿಲೋ ಮೀಟರ್‌ ಮಾತ್ರ ಇದೆ ಎಂದು ಸವಿನಯ ವಾದಿಸುವ ಹಕ್ಕು ಹೊಂದಿಲ್ಲ. ಸವಿನಯ ಅವರಿಗೆ ಮಂಜೂರಾಗಿವರು ಕೇಂದ್ರ ಈಗಾಗಲೇ ಅಸ್ವಿತ್ವದಲ್ಲಿದ್ದು, 500 ಮೀಟರ್‌ ಅಂತರದಲ್ಲಿ ಮತ್ತೊಂದು ಜನೌಷಧಿ ಕೇಂದ್ರಕ್ಕೆ ಮಂಜೂರಾತಿ ನೀಡಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತು” ಎಂದು ನ್ಯಾಯಾಲಯ ಹೇಳಿದೆ.

“ಕಾನೂನಿನ ಭದ್ರ ಬುನಾದಿ ಹೊಂದಿರದ ಮರಳಿನ ಗೋಪುರದ ಮೇಲೆ ಅರ್ಜಿ ರೂಪಿಸಲಾಗಿದೆ. ಶೀಲಾ ಭಟ್‌ಗೆ ಜನೌಷಧಿ ಕೇಂದ್ರ ತೆರೆಯಲು ಅನುಮತಿಸಿರುವುದರಲ್ಲಿ ಯಾವುದೇ ದೋಷ ಹುಡುಕಲಾಗದು” ಎಂದು ನ್ಯಾಯಾಲಯ ಹೇಳಿದೆ.

“ಅತ್ಯಂತ ಕಡಿಮೆ ಅಂತರದಲ್ಲಿ ಮತ್ತೊಂದು ಜನೌಷಧಿ ಕೇಂದ್ರ ತೆರೆಯಲು ಅನುಮತಿಸಿದರೆ ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂದು ಸವಿನಯ ಬಿಂಬಿಸಿದ್ದಾರೆ. ಆದರೆ, ವಾಸ್ತವಿಕ ಚಿತ್ರಣ ಅದಲ್ಲ. ಹಲವರಿಗಾಗಿ ರೂಪಿಸಿರುವ ಕಲ್ಯಾಣ ಕಾರ್ಯಕ್ರಮದ ಭಾವನೆಯನ್ನು ನ್ಯಾಯಾಲಯ ರಕ್ಷಿಸಬೇಕೆ ವಿನಾ ಕೆಲವರ ಭಾವನೆಯಲ್ಲ. ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂಬ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು” ಎಂದು ನ್ಯಾಯಪೀಠ ಹೇಳಿದೆ.

“ಎರಡು ಕೇಂದ್ರಗಳ ನಡುವಿನ ಭೌಗೋಳಿಕ ಪ್ರದೇಶದ ಅಂತರ ಕಡಿಮೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಆದರೆ, ಹಾಗೇನಿಲ್ಲ. ಅಂತೆಯೇ, ಅರ್ಜಿದಾರರ ಅರ್ಜಿಯು ಅರ್ಜಿಯಾಗಿಯೇ ಉಳಿದಿದೆ. ಈ ನೆಲೆಯಲ್ಲಿ ಅರ್ಜಿಯು ಅನೂರ್ಜಿತವಾಗಿದ್ದು, ಅಕ್ರಮ, ಪ್ರಕ್ರಿಯೆಯಲ್ಲಿ ಲೋಪ ಅಥವಾ ಸ್ವೇಚ್ಛೆ ಕಾಣಲಾಗದು. ಕ್ಷುಲ್ಲಕ ಕಾರಣಗಳ ಆಧಾರದಲ್ಲಿ ಕಾನೂನುಬದ್ಧವಾದ, ಜನೋಪಯೋಗಿ ಯೋಜನೆಯನ್ನು ನಿಷೇಧಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಮಾಡಿದಂತಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕುಂಬ್ರಾ ಗ್ರಾಮದಲ್ಲಿ ಜನೌಷಧಿ ಕೇಂದ್ರ ಆರಂಭಿಸುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಜನೌಷಧಿ ಕೇಂದ್ರ ಆರಂಭಿಸಲು ಅಧಿಸೂಚನೆ ಪ್ರಕಟವಾದ ಬೆನ್ನಿಗೇ ಸವಿನಯ ಅವರು 20-11-2023ರಂದು ಮಹಿಳಾ ಉದ್ಯಮಿ ವಿಭಾಗದಡಿ ಪ್ರಾಥಮಿಕ ಕೃಷಿ ಪತ್ತಿನ ಕಟ್ಟಡದ ನೆಲಮಹಡಿಯಲ್ಲಿ ಜನೌಷಧಿ ಕೇಂದ್ರ ಆರಂಭಿಸುವ ಸಂಬಂಧ ಅರ್ಜಿ ಹಾಕಿದ್ದು, ಇದಕ್ಕೆ ತಾತ್ವಿಕ ಒಪ್ಪಿಗೆ ದೊರೆತಿತ್ತು.

ಅಲ್ಲದೇ, ಸಂಬಂಧಿತ ದಾಖಲೆ ಒದಗಿಸಿ, ಒಪ್ಪಿಗೆ ನೀಡಿ ಸ್ಟೋರ್‌ ಕೋಡ್‌ ನೀಡುವಂತೆ ಕೋರಿದ್ದರು. ಈ ನಡುವೆ, ಶೀಲಾ ಭಟ್‌ ಸಹ ಅರ್ಜಿ ಹಾಕಿದ್ದು, ಅವರಿಗೆ ಜನೌಷಧಿ ಅಂಗಡಿ ಮಂಜೂರಾತಿ ದೊರೆತು, ಸ್ಟೋರ್‌ ಕೋಡ್‌ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ, ಶೀಲಾ ಭಟ್‌ಗೆ ಸ್ಟೋರ್‌ ಕೋಡ್‌ ನೀಡಿರುವುದನ್ನು ರದ್ದುಪಡಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಅಲ್ಲಿ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸವಿನಯ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರೆಯ ಪರವಾಗಿ ಆರ್‌ ಭದ್ರಿನಾಥ್‌, ಪ್ರತಿವಾದಿಗಳ ಪರವಾಗಿ ಎಂ ಸುಧಾಕರ್‌ ಪೈ ಮತ್ತು ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿ ಭೂಷಣ್‌ ವಾದಿಸಿದ್ದರು.

Attachment
PDF
Savinaya Vs Sheela Bhat
Preview
Kannada Bar & Bench
kannada.barandbench.com