ಪ್ರಕರಣ ಹಿಂಪಡೆಯುವಾಗ ಅಭಿಯೋಜಕರು ವಿವೇಚನೆ ಬಳಸಬೇಕೆ ವಿನಾ ಸರ್ಕಾರದ ಭಾಗವಾಗಿ ಕೆಲಸ ಮಾಡಕೂಡದು: ಕೇರಳ ಹೈಕೋರ್ಟ್‌

ಸರ್ಕಾರದ ಸೂಚನೆಯ ಭಾಗವಾಗಿ ಅಭಿಯೋಜಕರು ಕೆಲಸ ಮಾಡಬಾರದು. ಪ್ರಕರಣ ಹಿಂಪಡೆಯಲು ಅನುಮತಿ ಕೊಡುವುದಕ್ಕೂ ಮುನ್ನ ಅವರು ವಿವೇಚನೆ ಬಳಸಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ.
Kerala High Court
Kerala High Court
Published on

ಸರ್ಕಾರದ ನಿರ್ದೇಶನದಂತೆ ನಡೆಯುವುದಕ್ಕೆ ಬದಲಾಗಿ ಸರ್ಕಾರಿ ಅಭಿಯೋಜಕರು ಪ್ರಕರಣ ಹಿಂಪಡೆಯುವ ವಿಚಾರದಲ್ಲಿ ವಿವೇಚನೆ ಬಳಸಬೇಕು ಮತ್ತು ಸ್ವತಂತ್ರವಾಗಿ ನಿರ್ಧರಿಸಬೇಕು ಎಂದು ಈಚೆಗೆ ಕೇರಳ ಹೈಕೋರ್ಟ್‌ ಒತ್ತಿ ಹೇಳಿದೆ.

ತಮ್ಮ ವಿರುದ್ಧದ ಪ್ರಾಸಿಕ್ಯೂಷನ್‌ ಕೈಬಿಡಲು ವಿಚಾರಣಾಧೀನ ನ್ಯಾಯಾಲಯ ನಿರಾಕರಿಸಿದ್ದನ್ನು ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ಬಾಬು ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 321 ಅಡಿ ನ್ಯಾಯಾಲಯದ ಅನುಮತಿಯಂತೆ ಪ್ರಕರಣ ಹಿಂಪಡೆಯಲು ಅಭಿಯೋಜಕರಿಗೆ ಅನುಮತಿಸುತ್ತದೆ. ಅದರ ಜೊತೆಗೆ ಪ್ರಕರಣ ಹಿಂಪಡೆಯುವುದಕ್ಕೂ ಮುನ್ನ ಅದರ ಸಂಬಂಧ ತಮ್ಮ ಮುಂದೆ ಇರುವ ದಾಖಲೆಗಳನ್ನು ಅಭಿಯೋಜಕರು ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದೂ ಹೇಳುತ್ತದೆ ಎಂದು ನ್ಯಾಯಾಲಯ ನೆನಪಿಸಿತು.

ಸರ್ಕಾರದ ಸೂಚನೆಯ ಭಾಗವಾಗಿಯಷ್ಟೇ ಅಭಿಯೋಜಕರು ಕೆಲಸ ಮಾಡಬಾರದು. ಪ್ರಕರಣ ಹಿಂಪಡೆಯಲು ಅನುಮತಿ ಕೂರುವುದಕ್ಕೂ ಮುನ್ನ ಅವರು ಅದು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿದೆಯೇ ಎಂಬುದರ ಕುರಿತು ವಿವೇಚನೆ ಬಳಸಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ.

“ನಿರ್ದಿಷ್ಟ ಪ್ರಕರಣವನ್ನು ಪ್ರಾಸಿಕ್ಯೂಷನ್‌ನಿಂದ ಹಿಂಪಡೆಯುವಂತೆ ರಾಜ್ಯ ಸರ್ಕಾರವು ಸರ್ಕಾರಿ ಅಭಿಯೋಜಕರಿಗೆ ಸೂಚಿಸಿದರೂ ಪ್ರತಿಯೊಂದು ಪ್ರಕರಣವನ್ನು ಪರಿಶೀಲಿಸಿ ಅದು ಹಿಂಪಡೆಯಲು ಅರ್ಹವಾಗಿದೆಯೇ ಎಂಬುದು ಸಂತುಷ್ಟವಾದ ನಂತರವಷ್ಟೇ ಸರ್ಕಾರಿ ಅಭಿಯೋಜಕರಿಗೆ ಹಿಂಪಡೆಯಬೇಕು” ಎಂದು ನ್ಯಾಯಾಲಯ ಹೇಳಿದೆ.

Kannada Bar & Bench
kannada.barandbench.com