ಮಾಸ್ಕ್ ಇಲ್ಲದೇ ಸಾರ್ವಜನಿಕ ಸಮಾವೇಶಗಳಲ್ಲಿ ಭಾಗವಹಿಸುವ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರ ರೂಪಿಸಿರುವ ಸಾಮಾಜಿಕ ಅಂತರ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸಾರ್ವಜನಿಕ ಸಮಾವೇಶಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಗೂ ಸಂಯುಕ್ತ ದಂಡ (ಕಾಂಪೌಂಡಿಂಗ್ ಫೀ) ವಿಧಿಸುವಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಇಂಥ ನಡೆತೆಗೆ ಕ್ಷಮೆ ಇರುವುದಿಲ್ಲ ಮತ್ತು ನಿಯಮಗಳನ್ನು ಉಲ್ಲಂಘಿಸುವ ಪ್ರತಿಯೊಬ್ಬರಿಗೂ ಶಿಕ್ಷೆ ವಿಧಿಸಬೇಕು. ಬರೀ ಸಮಾವೇಶ ಆಯೋಜಿಸುವವರಿಗೆ ಮಾತ್ರ ಶಿಕ್ಷೆ ವಿಧಿಸಿದರೆ ಸಾಲದು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
“ಸುಮಾರು 10,000 ಮಂದಿ ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದರೆ ಅಂಥ ಪ್ರತಿಯೊಬ್ಬರಿಂದಲೂ ಸಂಯುಕ್ತ ದಂಡ ಸಂಗ್ರಹಿಸಿ… ಇದನ್ನು ಕ್ಷಮಿಸಲಾಗದು. ಅಂಥವರ ವಿರುದ್ಧ ಎಫ್‌ಐಆರ್ ದಾಖಲಿಸಿ ಮತ್ತು ತನಿಖೆ ನಡೆಸಿ. ಇಲ್ಲವಾದಲ್ಲಿ ಲಲಿತಾ ಕುಮಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾರಿಗೊಳಿಸಿರುವ ಮಾರ್ಗಸೂಚಿಗಳು ಅರ್ಥ ಕಳೆದುಕೊಳ್ಳಲಿವೆ” ಎಂದು ನ್ಯಾಯಾಲಯ ಹೇಳಿದೆ.
ರಾಜ್ಯದಲ್ಲಿ ಸರಿಯಾದ ರೀತಿಯಲ್ಲಿ ಕೋವಿಡ್ ಶಿಷ್ಟಾಚಾರ ಮಾರ್ಗದರ್ಶಿಗಳನ್ನು ಜಾರಿಗೊಳಿಸುವಂತೆ ಕೋರಿ ಲೆಟ್ಜ್‌ಕಿಟ್ ಫೌಂಡೇಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.
“ಮಾಸ್ಕ್ ಇಲ್ಲದೇ ಲಕ್ಷಾಂತರ ಜನರು ಒಟ್ಟಾಗಿ ಸೇರುತ್ತಾರೆ. ಇದನ್ನು ಕ್ಷಮಿಸಲಾಗದು. ಇದನ್ನು ನಾವು ಸಹಿಸುವುದಿಲ್ಲ. ಕೆಲವರು ಕಾನೂನು ಉಲ್ಲಂಘಿಸಿದರೂ ವಿನಾಯಿತಿ ಪಡೆಯುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.
ಸಮಾವೇಶದಲ್ಲಿ ಭಾಗವಹಿಸಿರುವ ಜನರು ನಿಯಮ ಉಲ್ಲಂಘಿಸಿದ್ದರೆ ಸಂಘಟಕರಿಂದ ದಂಡ ವಸೂಲಿ ಮಾಡುವುದಾಗಿ ಸೋಮವಾರ ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದ ಸಂದರ್ಭದಲ್ಲಿ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.
“ಮಾಸ್ಕ್ ಧರಿಸದೇ ಒಂದು ಸ್ಥಳದಲ್ಲಿ 200 ಸೇರಿದರೆ ಪ್ರತಿಯೊಬ್ಬರಿಗೂ ಸಂಯುಕ್ತ ದಂಡ ಅನ್ವಯಿಸುತ್ತದೆ. ನೀವು ಸಂಘಟಕರು ಮಾತ್ರ ಪಾವತಿಸಬೇಕು ಎಂದು ಹೇಳುತ್ತಿದ್ದೀರಿ” ಎಂದು ಪೀಠ ಹೇಳಿತು.
ದಂಡದ ಮೊತ್ತ 50,000 ರೂಪಾಯಿ ಎಂದು ಮುಖ್ಯ ನ್ಯಾಯಮೂರ್ತಿ ಓಕಾ ಅವರಿಗೆ ತಿಳಿಸುತ್ತಿದ್ದಂತೆ ಅವರು “50,000, 50 ಅಥವಾ 5 ರೂಪಾಯಿ ಏನಾದರೂ ಇರಲಿ, ಅದನ್ನು ಎಲ್ಲರಿಂದಲೂ ವಸೂಲಿ ಮಾಡಬೇಕು” ಎಂದು ಓಕಾ ಸ್ಪಷ್ಟವಾಗಿ ಹೇಳಿದರು.
ರಾಜ್ಯ ಸಾಂಕ್ರಾಮಿಕ ರೋಗಗಳ ಕಾಯಿದೆ 2020ರ ಅಡಿ ಸಂಯೋಜಿತ ಅಪರಾಧಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆಯೂ ನ್ಯಾಯಾಲಯ ಸೋಮವಾರ ನೋಟಿಸ್ ಜಾರಿಗೊಳಿಸಿದೆ. ಮಾರ್ಚ್ 24ಕ್ಕೆ ವಿಚಾರಣೆ ಮುಂದೂಡಲಾಗಿದೆ.