

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯಾಗಿ 17 ವರ್ಷವಾದರೂ ಭಾರತ ಸರ್ಕಾರವು ಏಕೆ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಲಿಲ್ಲ ಎಂಬುದನ್ನು ಪತ್ತೆ ಹಚ್ಚಲು ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಕೋರಿ ಜಾಗೃತ ಕರ್ನಾಟಕ, ಜಾಗೃತ ಭಾರತ ಸಂಸ್ಥೆಯ ಅಧ್ಯಕ್ಷ ಕೆ ಎನ್ ಮಂಜುನಾಥ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿರುವ ಕರ್ನಾಟಕ ಹೈಕೋರ್ಟ್, ಹತ್ತು ಸಾವಿರ ರೂಪಾಯಿ ದಂಡ ವಿಧಿಸಿದೆ.
ಸಾರ್ವಜನಿಕ ಹಿತಾಸಕ್ತಿಯಲ್ಲಿ ಯಾವುದೇ ಸಾರ್ವಜನಿಕ ಹಿತ ಕಾಣುತ್ತಿಲ್ಲ. ನ್ಯಾಯಾಂಗದ ಅಮೂಲ್ಯ ಸಮಯವನ್ನು ಪೋಲು ಮಾಡಲು ಸಲ್ಲಿಸಿರುವ ಇದು ಪ್ರಚಾರದ ಅರ್ಜಿಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ವಿಭಾಗೀಯ ಪೀಠ ಹೇಳಿದೆ.
ವಿಚಾರಣೆ ವೇಳೆ ಅರ್ಜಿಯನ್ನು ಪರಿಶೀಲಿಸಿದ ಪೀಠವು ಈ ಹಿಂದೆಯೂ ಇದೇ ಮನವಿ ಮಾಡಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇದೀಗ ಮತ್ತೆ ಅದೇ ಮನವಿಯೊಂದಿಗೆ ಅರ್ಜಿ ಸಲ್ಲಿಸಿದ್ದೀರಿ. ಅರ್ಜಿಯಲ್ಲಿ ಯಾವುದೇ ರೀತಿಯ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ನಿಮ್ಮ ನಡೆ ನ್ಯಾಯಾಂಗ ವ್ಯವಸ್ಥೆಯ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವ ಪ್ರಕ್ರಿಯೆಯಾಗಿದೆ ಎಂದು ಕಿಡಿಕಾರಿತು.
ಆಗ ಮಂಜುನಾಥ್ ಅವರು ಪ್ರಕರಣದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಅಡಗಿದೆ. ಆದ್ದರಿಂದ ನಮ್ಮ ವಾದವನ್ನು ಆಲಿಸಬೇಕು ಎಂದು ಪದೇ ಪದೇ ಮನವಿ ಮಾಡಿದರು.
ಇದನ್ನು ತಿರಸ್ಕರಿಸಿದ ಪೀಠವು ಅರ್ಜಿವಜಾಗೊಳಿಸಿ ದಂಡ ವಿಧಿಸಿ ಆದೇಶಿಸಿತು. ಅಲ್ಲದೆ, ಮುಂದಿನ ಎರಡು ವಾರಗಳಲ್ಲಿ ದಂಡದ ಮೊತ್ತವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ನಿರ್ದೇಶಿಸಿತು.
ಪ್ರಕರಣದ ಹಿನ್ನೆಲೆ: ಮಹಾತ್ಮ ಗಾಂಧೀಜಿ ಅವರ ಹತ್ಯೆಗೆ ಸಂಬಂಧಿಸಿದಂತೆ 1947ರಿಂದ 1965ರವರೆಗೂ ಅಂದರೆ 17 ವರ್ಷಗಳ ಕಾಲ ನ್ಯಾಯಾಂಗ ವಿಚಾರಣಾ ಆಯೋಗವನ್ನು ರಚನೆ ಮಾಡದಿರಲು ಕಾರಣವೇನು ಎಂಬುದನ್ನು ತಿಳಿಯಲು ಜಂಟಿ ಸಂಸದೀಯ ಸಮಿತಿ ರಚನೆ ಮಾಡಬೇಕು. ಅಲ್ಲದೆ, 17 ವರ್ಷಗಳ ಬಳಿಕ ಅಂದರೆ 1965ರಲ್ಲಿ ನ್ಯಾಯಾಂಗ ವಿಚಾರಣೆಯನ್ನು ಪ್ರಾರಂಭಿಸಿದ ಅಂಶಗಳ ಕುರಿತು ತನಿಖೆ ನಡೆಸಬೇಕು ಎಂದು ಕೋರಲಾಗಿದೆ.
1947ರ ಮೇ 8ರಂದು ಬ್ರಿಟಿಷ್ ವೈಸರಾಯ್‌ಗೆ ಬರೆದ ಪತ್ರದಲ್ಲಿ ಭಾರತದ ವಿಭಜನೆಯನ್ನು ತಡೆಯಲು ಶಸ್ತ್ರಸಜ್ಜಿತ ಸಂಘರ್ಷವನ್ನೂ ಒಂದು ಆಯ್ಕೆಯಾಗಿ ಗಾಂಧೀಜಿ ಪರಿಗಣಿಸಿದ್ದರು ಎಂಬ ಉಲ್ಲೇಖದ ಹಿನ್ನೆಲೆಯನ್ನು ಪರಿಶೀಲಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಗಾಂಧೀಜಿಯವರ ಆತ್ಮಕಥೆಯ ಎರಡನೇ ಸಂಪುಟದ ಕರಡು ದಾಖಲೆಗಳು 2008ರಲ್ಲಿ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯದಿಂದ ಸ್ಥಳಾಂತರಿಸಲಾಯಿತು ಎನ್ನಲಾದ 51 ಪೆಟ್ಟಿಗೆಗಳ ದಾಖಲೆಗಳ ಪತ್ತೆಗೆ ವಿಶೇಷ ಶೋಧ ಕಾರ್ಯಾಚರಣೆ ನಡೆಸಬೇಕು.
ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ 1947ರ ಡಿಸೆಂಬರ್ 30ರಂದು ಗಾಂಧೀಜಿ ವಿಶ್ವಸಂಸ್ಥೆಗೆ ಬರೆದಿದ್ದಾರೆ ಎನ್ನಲಾದ ಪತ್ರವು ಕಾಣೆಯಾಗಿದ್ದು, ಅದರ ಬದಲಿಗೆ 1948ರ ಜನವರಿ 1ರ ಮತ್ತೊಂದು ಪತ್ರವನ್ನು ಬಳಸಲಾಗಿದೆ.. ಈ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ತನಿಖೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕಣ್ಮರೆಯಾಗಿರುವ ಆತ್ಮತಥೆ ʼಸತ್ಯದೊಂದಿಗೆ ನನ್ನ ಪ್ರಯೋಗಗಳು (ಮೈ ಎಕ್ಸ್‌ಪೆರಿಮೆಂಟ್ಸ್ ವಿತ್ ಟ್ರುತ್) ಸಂಪುಟ-2ʼರ ಬಗ್ಗೆ ಬೆಳಕು ಚೆಲ್ಲಲು ವಿಪಕ್ಷ ನಾಯಕ ರಾಹುಲ್ ಗಾಂಧಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜ್ಯ ಶಿಕ್ಷಣ ಇಲಾಖೆ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ಸ್‌ಗೆ ನಿರ್ದೇಶನ ಕೋರಿ 2025ರ ಆಗಸ್ಟ್ 28ರಂದು ಮಂಜುನಾಥ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.