ಜಿಲ್ಲಾ ನ್ಯಾಯಾಧೀಶರ ವಿರುದ್ಧದ ತನಿಖಾ ಪ್ರಕರಣ: ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ₹10 ಲಕ್ಷ ದಂಡ ವಿಧಿಸಿದ ಹೈಕೋರ್ಟ್

2013ರ ಮೇ 30ರ ತನಿಖಾ ಪ್ರಾಧಿಕಾರದ ವರದಿಯು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಆದೇಶಿಸಿರುವ ಹೈಕೋರ್ಟ್.‌
The New Indian Express and Karnataka HC
The New Indian Express and Karnataka HC

ಜಿಲ್ಲಾ ನ್ಯಾಯಾಧೀಶರೊಬ್ಬರ ವಿರುದ್ಧದ ಅಕ್ರಮ ಸಂಬಂಧ ಮತ್ತು ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ಆಡಳಿತಾತ್ಮಕ ಸಮಿತಿಯು ತನಿಖಾ ಪ್ರಾಧಿಕಾರದ ವರದಿಯನ್ನು ಒಪ್ಪದಿರಲು ನಿರ್ಧರಿಸಿದ ಹೊರತಾಗಿಯೂ ವರದಿಯನ್ನು ಉಲ್ಲೇಖಿಸಿ ಸುದ್ದಿ ಪ್ರಕಟಿಸಿದ್ದ ಆಂಗ್ಲ ಪತ್ರಿಕೆ ದ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಮಾತೃ ಸಂಸ್ಥೆ ಎಕ್ಸ್‌ಪ್ರೆಸ್‌ ಪಬ್ಲಿಕೇಷನ್ಸ್‌ (ಮಧುರೈ) ಲಿಮಿಟೆಡ್‌ಗೆ ₹10 ಲಕ್ಷ ದಂಡ ವಿಧಿಸಿ ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದೆ.

ಜಿಲ್ಲಾ ನ್ಯಾಯಾಂಗ ಅಧಿಕಾರಿಯೂ ಆಗಿದ್ದ ಹಾಲಿ ಹಿರಿಯ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರ ನೇತೃತ್ವದ ಏಕಸದಸ್ಯ ಪೀಠ ತಿರಸ್ಕರಿಸಿದೆ.

“ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಜವಾಬ್ದಾರಿಯುತ ಪತ್ರಿಕೆಗೆ ತಕ್ಕಂತೆ ನಡೆದುಕೊಂಡಿಲ್ಲ. ಪತ್ರಿಕೆಯ ವರದಿಗಾರರು ಮತ್ತು ಸಂಪಾದಕರ ನಡೆ ಒಪ್ಪಿತ ರೀತಿಯಲ್ಲಿ ಇಲ್ಲ. ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯು ಆಕ್ಷೇಪಾರ್ಹವಾದ ವರದಿ ಪ್ರಕಟಿಸುವುದಕ್ಕೂ ಆರು ತಿಂಗಳ ಮುನ್ನ ತನಿಖಾ ಪ್ರಾಧಿಕಾರದ ವರದಿ ಒಪ್ಪದಿರಲು ಪೂರ್ಣ ನ್ಯಾಯಾಲಯ ನಿರ್ಧರಿಸಿತ್ತು. ಅದಾಗ್ಯೂ, ಈ ಮಹತ್ವದ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

"ಶೀಘ್ರ ಲಿಪಿಗಾರ್ತಿಯೊಂದಿಗೆ ಒಪ್ಪಿತವಲ್ಲದ ಅತ್ಮೀಯ ಸಂಬಂಧವನ್ನು ಅರ್ಜಿದಾರರು ಹೊಂದಿದ್ದಾರೆ ಎನ್ನುವುದನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳ ವರದಿಯಲ್ಲಿ ಇದಾಗಲೇ ನಿರೂಪಿಸಲಾಗಿದೆ ಎನ್ನುವ ರೀತಿಯಲ್ಲಿ ಪತ್ರಿಕೆಯು ವರದಿಗಾರಿಕೆ ಮಾಡಿದೆ. ಅಲ್ಲದೆ, ಮುಂದುವರೆದು ಅರ್ಜಿದಾರರ ವಿರುದ್ಧ ಹೊರಿಸಲಾದ ಎಲ್ಲ ಆರೋಪಗಳ ಸಾರಾಂಶವನ್ನು ನೀಡಿದೆ," ಎನ್ನುವ ಅಂಶವನ್ನು ನ್ಯಾಯಾಲಯವು ಆದೇಶದಲ್ಲಿ ಗಣನೆಗೆ ತೆಗೆದುಕೊಂಡಿತು.

“ಅರ್ಜಿದಾರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಸಾರಾಂಶವನ್ನು ನೋಡಿದರೆ ಪತ್ರಿಕೆಗೆ ತನಿಖಾ ಪ್ರಾಧಿಕಾರದ ವರದಿ ಸಿಕ್ಕಿದೆ. ಆದರೆ, ತನಿಖಾ ಪ್ರಾಧಿಕಾರದ ವರದಿಯನ್ನು ಆಡಳಿತಾತ್ಮಕ ಸಮಿತಿಯ ಮುಂದಿಡಲಾಗುತ್ತದೆ. ಆನಂತರ ಅದರ ಸಂಬಂಧ ನಿರ್ಣಯ ಕೈಗೊಳ್ಳಲು ಎಲ್ಲಾ ದಾಖಲೆಗಳನ್ನು ಪೂರ್ಣ ನ್ಯಾಯಾಲಯದ ಮುಂದೆ ಇಡಲಾಗುತ್ತದೆ ಎಂಬ ಪ್ರಕ್ರಿಯೆ ಬಗ್ಗೆ ಪತ್ರಿಕೆಗೆ ತಿಳಿದಿಲ್ಲ ಎಂಬುದನ್ನು ಒಪ್ಪಲಾಗದು. ಆಡಳಿತಾತ್ಮಕ ಸಮಿತಿಯ ತೀರ್ಮಾನದ ಬಗ್ಗೆ ತಿಳಿದಿರಲಿಲ್ಲ. ಅದಕ್ಕಾಗಿ ಆ ಅಂಶವನ್ನು ಸುದ್ದಿಯಲ್ಲಿ ಅಡಕಗೊಳಿಸಿರಲಿಲ್ಲ ಎಂದು ತನ್ನ ಜವಾಬ್ದಾರಿಯಿಂದ ಪತ್ರಿಕೆ ನುಣಿಚಿಕೊಳ್ಳಲಾಗದು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಪತ್ರಿಕೆಯಲ್ಲಿ ವರದಿ ಪ್ರಕಟಿಸುವುದಕ್ಕೂ ಮುನ್ನ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಮತ್ತು ಅರ್ಜಿದಾರರನ್ನು ಸಂಪರ್ಕಿಸಿರುವ ಪತ್ರಿಕೆಯು ತನಿಖೆಗೆ ಸಂಬಂಧಿಸಿದಂತೆ ಪ್ರಕ್ರಿಯೆ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳುವುದನ್ನು ಒಪ್ಪಲಾಗದು. ಪ್ರಕರಣ ಸೂಕ್ಷ್ಮವಾಗಿದ್ದು, ವೃತ್ತಿಪರವಾಗಿ ನಡೆದುಕೊಳ್ಳದೇ ಇರುವುದರಿಂದ ಅರ್ಜಿದಾರರಿಗೆ ಅಪಾರ ಹಾನಿಯಾಗಿದ್ದು, ನ್ಯಾಯಾಂಗ ಅಧಿಕಾರಿಯ ನಡತೆ ನಿರ್ಧರಿಸುವ ಸಂಪೂರ್ಣ ನ್ಯಾಯಾಂಗ ಪ್ರಕ್ರಿಯೆಗೆ ಹಿನ್ನಡೆಯಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಜವಾಬ್ದಾರಿಯುತವಾದ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯು ಸಂಪೂರ್ಣ ಮಾಹಿತಿ ಪಡೆಯಬೇಕಿತ್ತು. ಹಿರಿಯ ನ್ಯಾಯಾಂಗ ಅಧಿಕಾರಿಗೆ ಸಂಬಂಧಿಸಿದ ಸೂಕ್ಷ್ಮ ಪ್ರಕರಣದ ಕುರಿತು ಅರೆಬೆಂದ ವಾಸ್ತವಿಕ ಅಂಶಗಳನ್ನು ಒಳಗೊಂಡ ವರದಿಯನ್ನು ಪತ್ರಿಕೆ ಪ್ರಕಟಿಸಬಾರದಿತ್ತು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಹೀಗಾಗಿ, “ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಮಾತೃ ಸಂಸ್ಥೆ ಎಕ್ಸ್‌ಪ್ರೆಸ್‌ ಪಬ್ಲಿಕೇಷನ್ಸ್‌ (ಮಧುರೈ) ಲಿಮಿಟೆಡ್‌ಗೆ ₹10 ಲಕ್ಷ ದಂಡ ವಿಧಿಸಲು ಇದು ಸೂಕ್ತ ಪ್ರಕರಣವಾಗಿದ್ದು, ಅದನ್ನು ಎರಡು ತಿಂಗಳ ಒಳಗಾಗಿ ಎಕ್ಸ್‌ಪ್ರೆಸ್‌ ಪಬ್ಲಿಕೇಷನ್ಸ್‌ ಸಂಸ್ಥೆಯು ರಾಜ್ಯ ಕಾನೂನು ಸೇವಗಳ ಪ್ರಾಧಿಕಾರಕ್ಕೆ ಪಾವತಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೇ, 2013ರ ಮೇ 30ರ ತನಿಖಾ ಪ್ರಾಧಿಕಾರದ ವರದಿಯು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ಹೈಕೋರ್ಟ್‌ ತನಿಖೆ ನಡೆಸಬೇಕು ಎಂದು ಆದೇಶಿಸಿದೆ.

Related Stories

No stories found.
Kannada Bar & Bench
kannada.barandbench.com