ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ 2015-16ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಎಲ್ಲ 15 ಆರೋಪಿಗಳನ್ನು ಖುಲಾಸೆಗೊಳಿಸಿ ಬೆಂಗಳೂರು ನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣ ಸಂಬಂಧ ಸುಧೀರ್ಘ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಧೀಶರಾದ ಮುರಳೀಧರ ಪೈ ಗುರುವಾರ ಪ್ರಕಟಿಸಿದ್ದಾರೆ.
ಸಾಕ್ಷ್ಯಧಾರಗಳ ಕೊರತೆಯಿಂದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣದಲ್ಲಿ ಒಟ್ಟು 19 ಮಂದಿ ಆರೋಪಿಗಳಿದ್ದರು. ಅವರ ಪೈಕಿ ವಿಚಾರಣೆ ಹಂತದಲ್ಲಿಯೇ ಆರೋಪಿಗಳಾಗಿದ್ದ ಓಬಳರಾಜು, ರುದ್ರಪ್ಪ ಮತ್ತು ರಂಗನಾಥ್ ಅವರ ವಿರುದ್ಧದ ಆರೋಪಗಳನ್ನು ಕೈ ಬಿಡಲಾಗಿತ್ತು. ಎರಡನೇ ಆರೋಪಿಯಾಗಿದ್ದ ಶಿವಕುಮಾರಯ್ಯ ಅಲಿಯಾಸ್ ಗುರೂಜಿ ವಿಚಾರಣಾ ಹಂತದಲ್ಲಿಯೇ ಸಾವನ್ನಪ್ಪಿದ್ದರು. ಹೀಗಾಗಿ, ಅವರ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು. ಉಳಿದಂತೆ ಕುಮಾರಸ್ವಾಮಿ, ಈರಮಲ್ಲಯ್ಯ, ಸಂತೋಷ್ ಅಗಸಿಮನಿ, ಕೆ ಎಂ ಮುರಳೀಧರ ಮತ್ತು ಅನಿಲ್ ಕುಮಾರ್ ಸೇರಿದಂತೆ 15 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಗುರುವಾರ ತೀರ್ಪು ಪ್ರಕಟಿಸಲಾಗಿದೆ.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ 126 ಸಾಕ್ಷ್ಯಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಆರೋಪಿಗಳ ವಿರುದ್ಧ ಹಲವಾರು ದಾಖಲಾತಿಗಳನ್ನು ಹಾಜರು ಪಡಿಸಿತ್ತು. ಆದರೆ, ಆರೋಪಿಗಳ ಮೇಲಿನ ಆರೋಪಗಳನ್ನು ಸೂಕ್ತ ಸಾಕ್ಷ್ಯಧಾರಗಳ ಸಮೇತ ಸಾಬೀತುಪಡಿಸುವಲ್ಲಿ ತನಿಖಾಧಿಕಾರಿಗಳು ಮತ್ತು ಪ್ರಾಸಿಕ್ಯೂಷನ್ ವಿಫಲವಾಗಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಅಲ್ಲದೆ, ಹಾನಗಲ್ ಉಪ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿಲ್ಲ. ಪ್ರಕರಣದಲ್ಲಿ ಪ್ರಮುಖ ಕಾಲೇಜುಗಳು ಭಾಗಿಯಾಗಿದ್ದವು. ಈ ಅಂಶದ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸಿಲ್ಲ. ಆರೋಪಿಗಳ ಸ್ವಇಚ್ಛೆ ಹೇಳಿಕೆಗಳು ಮತ್ತು ತಪ್ಪೊಪ್ಪಿಗೆ ಹೇಳಿಕೆಗಳು ಒಂದೇ ತೆರನಾಗಿವೆ. ತಪ್ಪೊಪ್ಪಿಗೆ ಹೇಳಿಕೆಗಳನ್ನು ತಿರುಚಲಾಗಿದೆ. 13 ಮಂದಿ ಸಹಾಯಕ ತನಿಖಾ ಅಧಿಕಾರಿಗಳು ತನಿಖೆಗೆ ಸಹಕರಿಸಿದ್ದಾರೆ. ಆದರೆ, ಅವರು ಸಮರ್ಪಕ ರೀತಿಯಲ್ಲಿ ಮುಖ್ಯ ತನಿಖಾಧಿಕಾರಿಗಳಿಗೆ ತನಿಖಾ ವರದಿ ಸಲ್ಲಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆರೋಪಿಗಳ ಮೊಬೈಲ್‌ಗೆ ಪ್ರಶ್ನೆ ಪತ್ರಿಕೆಗಳು ರವಾನೆಯಾದ ಮೂಲ ಹೇಳಲು ಎಫ್‌ಎಸ್‌ಎಲ್ ತಜ್ಞರಿಗೆ ಸಾಧ್ಯವಾಗಲಿಲ್ಲ. ಆರೋಪಿಗಳ ವಿರುದ್ಧ ಕೋಕಾ ಕಾಯಿದೆ ಹೂಡುವಲ್ಲಿ ಮತ್ತು ಕಾಯಿದೆ ಅಡಿ ತನಿಖೆ ನಡೆಸಲು ಅನುಮತಿ ನೀಡುವುದರಲ್ಲಿ ಸ್ವತಂತ್ರವಾಗಿ ವಿವೇಚನೆ ಬಳಕೆಯಾಗಿಲ್ಲ. ಈ ಎಲ್ಲಾ ಕಾರಣಗಳಿಂದ ಆರೋಪಿಗಳ ವಿರುದ್ಧ ಆರೋಪಗಳು ಸಾಬೀತಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದು, ಅವರುಗಳನ್ನು ಖುಲಾಸೆಗೊಳಿಸಲಾಗುತ್ತಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಪರ ವಕೀಲ ಆರ್ ಪಿ ಚಂದ್ರಶೇಖರ್ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: 2015–16ರ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ರಸಾಯನಶಾಸ್ತ್ರ ವಿಭಾಗದ ಪರೀಕ್ಷೆ 2016 ಮಾರ್ಚ್ 21ರಂದು ನಡೆದಿತ್ತು. ಅಂದು ಬೆಳಿಗ್ಗೆ 7.29ಕ್ಕೆ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ವಾಟ್ಸ್ ಆ್ಯಪ್ ಮೂಲಕ ಸೋರಿಕೆಯಾಗಿತ್ತು. ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಪ್ರಕರಣವು ಸಿಐಡಿಗೆ ವರ್ಗಾವಣೆಯಾಗಿತ್ತು. ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಒಟ್ಟು 19 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಕಳೆದ ಎಂಟು ವರ್ಷಗಳ ಸುದೀರ್ಘ ವಿಚಾರಣೆ ನಂತರ ಇದೀಗ ಎಲ್ಲ ಆರೋಪಿಗಳು ಖುಲಾಸೆಗೊಂಡಿದ್ದಾರೆ.