ಇತ್ತೀಚೆಗೆ ಪೋಶ ಕಾರು ಚಲಾಯಿಸಿ ಇಬ್ಬರನ್ನು ಕೊಂದಿದ್ದ 17 ವರ್ಷದ ಬಾಲಕನ ತಂದೆ ಮತ್ತು ಅಜ್ಜನನ್ನು ಪುಣೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಮಂಗಳವಾರದ ವಿಚಾರಣೆ ವೇಳೆ ನ್ಯಾಯಾಲಯ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಿತ್ತು.
ಮೇ 19ರಂದು ಸಂಭವಿಸಿದ ಅಪಘಾತದ ಜವಾಬ್ದಾರಿಯನ್ನು ಹೊರುವಂತೆ ತಮ್ಮ ಕುಟುಂಬದ ಚಾಲಕನನ್ನು ಆತನ ಇಚ್ಛೆಗೆ ವಿರುದ್ಧವಾಗಿ ಬಂಧಿಸಿ ಹಣ ಮತ್ತು ಉಡುಗೊರೆಗಳ ಆಮಿಷ ಒಡ್ಡಿದ ಆರೋಪದಲ್ಲಿ ಇಬ್ಬರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು.
ಭಾರತೀಯ ದಂಡ ಸಂಹಿತೆ- 1860ರ ಸೆಕ್ಷನ್ 365 (ಒಬ್ಬ ವ್ಯಕ್ತಿಯನ್ನು ರಹಸ್ಯವಾಗಿ ಮತ್ತು ತಪ್ಪಾಗಿ ಬಂಧಿಸುವ ಸಲುವಾಗಿ ನಡೆಸುವ ಅಪಹರಣ) ಮತ್ತು 368 (ತಪ್ಪಾಗಿ ಮರೆಮಾಚುವುದು ಅಥವಾ ಬಂಧನದಲ್ಲಿಡುವುದು) ಅಡಿಯಲ್ಲಿ ಅಪಘಾತ ಎಸಗಿದ್ದ ಆರೋಪಿ ಅಪ್ರಾಪ್ತ ವಯಸ್ಕನ ತಂದೆ ಮತ್ತು ಅಜ್ಜ ಇಬ್ಬರ ವಿರುದ್ಧವೂ ಮತ್ತೊಂದು ಪ್ರಕರಣ ದಾಖಲಿಸಲಾಗಿತ್ತು.
ಅಪ್ರಾಪ್ತ ವಯಸ್ಕ, ಆತನ ತಂದೆ, ಅಜ್ಜ ಹಾಗೂ ಅಪ್ರಾಪ್ತ ವಯಸ್ಕ ಮದ್ಯ ಸೇವಿಸಲು ಅನುವು ಮಾಡಿಕೊಟ್ಟ ಪಬ್‌ಗೆ ಸಂಬಂಧಿಸಿದವರನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು.
ಅಪಘಾತದ ನಂತರ ಅಪ್ರಾಪ್ತ ವಯಸ್ಕನನ್ನು ಬಾಲನ್ಯಾಯ ಮಂಡಳಿ (ಜೆಜೆಬಿ) ಪೋಷಕರ ಮೇಲ್ವಿಚಾರಣೆಯಲ್ಲಿ ಬಿಡುಗಡೆ ಮಾಡಿದ್ದರೂ, ನಂತರ ಅವನ ಜಾಮೀನನ್ನು ರದ್ದುಗೊಳಿಸಿ ವಿಚಕ್ಷಣಾ ಗೃಹಕ್ಕೆ ಕಳುಹಿಸಲಾಗಿತ್ತು.