ಪೋಶ ಕಾರನ್ನು ಅತಿವೇಗದಲ್ಲಿ ಚಲಾಯಿಸಿ ಇಬ್ಬರ ಪ್ರಾಣಕ್ಕೆ ಕುತ್ತು ತಂದ ಆರೋಪ ಎದುರಿಸುತ್ತಿರುವ 17 ವರ್ಷದ ಬಾಲಕನ ತಂದೆಗೆ ಪುಣೆ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.
ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಬಾಲಕನ ತಂದೆಯನ್ನು ಮೇ 21ರಂದು ಪೊಲೀಸರು ಬಂಧಿಸಿದ್ದರು. ಐಪಿಸಿ ಸೆಕ್ಷನ್ 75 (ಮಗುವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವುದು ಅಥವಾ ಮಗುವನ್ನು ಮಾನಸಿಕ ಅಥವಾ ದೈಹಿಕ ಕಾಯಿಲೆಗಳಿಗೆ ಒಡ್ಡುವುದು) ಮತ್ತು ಸೆಕ್ಷನ್ 77 (ಅಪ್ರಾಪ್ತ ವಯಸ್ಕರಿಗೆ ಅಮಲು ನೀಡುವ ಮದ್ಯ ಅಥವಾ ಮಾದಕ ದ್ರವ್ಯ ಸರಬರಾಜು) ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಎರಡು ದಿನಗಳ ಕಾಲ ಪೊಲೀಸ್ ವಶದಲ್ಲಿದ್ದ ಪುಣೆಯ ಬಿಲ್ಡರ್ ಆಗಿರುವ ತಂದೆಯನ್ನು ನಂತರ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಇದೀಗ ಅವರಿಗೆ ಜಾಮೀನು ದೊರೆತಿದೆ.
ಈ ಮಧ್ಯೆ ಬಾಲಕನನ್ನು ವೀಕ್ಷಣಾ ಗೃಹದಿಂದ ಬಿಡುಗಡೆ ಮಾಡುವಂತೆ ಜೂನ್ 24ರಂದು ಬಾಂಬೆ ಹೈಕೋರ್ಟ್ ಆದೇಶಿಸಿತ್ತು.
ಅಪಘಾತದ ನಂತರ ಅಪ್ರಾಪ್ತ ವಯಸ್ಕನನ್ನು ಬಾಲನ್ಯಾಯ ಮಂಡಳಿ (ಜೆಜೆಬಿ) ಪೋಷಕರ ಮೇಲ್ವಿಚಾರಣೆಯಲ್ಲಿ ಬಿಡುಗಡೆ ಮಾಡಿದ್ದರೂ, ನಂತರ ಅವನ ಜಾಮೀನನ್ನು ರದ್ದುಗೊಳಿಸಿ ವೀಕ್ಷಣಾ ಗೃಹಕ್ಕೆ ಕಳುಹಿಸಲಾಗಿತ್ತು. ವೀಕ್ಷಣಾ ಗೃಹದಲ್ಲಿರಿಸಿಕೊಳ್ಳುವಂತೆ ನೀಡಿರುವ ಆದೇಶ ಕಾನೂನುಬಾಹಿರ ಮತ್ತು ಅಧಿಕಾರ ವ್ಯಾಪ್ತಿಯಿಲ್ಲದೆ ಇದನ್ನು ಹೊರಡಿಸಲಾಗಿದೆ ಎಂದಿದ್ದ ಹೈಕೋರ್ಟ್ ಬಾಲ ಆರೋಪಿಯನ್ನು ಆತನ ಚಿಕ್ಕಮ್ಮನ ಸುಪರ್ದಿಗೆ ನೀಡುವಂತೆ ನಿರ್ದೇಶಿಸಿತ್ತು.
ಅಪ್ರಾಪ್ತ ವಯಸ್ಕ ಆರೋಪಿ ವಿರುದ್ಶ ಸೆಕ್ಷನ್ 304 (ಕೊಲೆಗೆ ಸಮನಲ್ಲದ ನರಹತ್ಯೆ) ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿತ್ತು.
ಅಪಘಾತ ನಡೆದ ವೇಳೆ ಮದ್ಯಪಾನ ಮಾಡಿದ್ದ ಅಪ್ರಾಪ್ತ ವಯಸ್ಕನ ರಕ್ತದ ಮಾದರಿ ವರದಿಯನ್ನು ತಿರುಚಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರು ಮತ್ತು ಒಬ್ಬ ಜವಾನನನ್ನು ಕೂಡ ಪೊಲೀಸರು ಬಂಧಿಸಿದ್ದರು.