ಪುಣೆ ಕಾರು ಅಪಘಾತ ಪ್ರಕರಣ: ತಪ್ಪೆಸಗಿದ ಬಾಲಕನ ತಂದೆಯನ್ನು ಪೊಲೀಸ್ ವಶಕ್ಕೆ ನೀಡಿದ ನ್ಯಾಯಾಲಯ

ಪೊಲೀಸರು ಬಾಲಕನ ತಂದೆಯನ್ನು 7 ದಿನಗಳ ಕಸ್ಟಡಿಗೆ ಕೋರಿದರು. ಆದರೆ, ನ್ಯಾಯಾಲಯ ಕೇವಲ 2 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ವರದಿಯಾಗಿದೆ.
Highway
Highway

ಮದ್ಯದ ನಶೆಯಲ್ಲಿ ಪೋಶ ವಿಲಾಸಿ ಕಾರು ಚಲಾಯಿಸಿ ಇಬ್ಬರು ಟೆಕಿಗಳನ್ನು ಕೊಂದ 17 ವರ್ಷದ ಬಾಲಕನ ತಂದೆಯನ್ನು ಪುಣೆ ನ್ಯಾಯಾಲಯ ಮೇ 24ರವರೆಗೆ ಪೊಲೀಸ್ ವಶಕ್ಕೆ ನೀಡಿದೆ.

ಪೊಲೀಸರು ಬಾಲಕನ ತಂದೆಯನ್ನು 7 ದಿನಗಳ ಕಸ್ಟಡಿಗೆ ಕೋರಿದರು. ಆದರೆ, ನ್ಯಾಯಾಲಯ ಕೇವಲ 2 ದಿನಗಳ ಪೊಲೀಸ್ ವಶಕ್ಕೆ ನೀಡಿದೆ ಎಂದು ವರದಿಯಾಗಿದೆ.

ಮಂಗಳವಾರ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ರಿಯಲ್‌ ಎಸ್ಟೇಟ್‌ ಉದ್ಯಮಿ ಆಗಿರುವ ಬಾಲಕನ ತಂದೆಯನ್ನು ಬಂಧಿಸಲಾಗಿತ್ತು. ಬಾಲಕನ ತಂದೆಯ ವಿರುದ್ಧ ಬಾಲನ್ಯಾಯ ಕಾಯಿದೆ 2015ರ ಸೆಕ್ಷನ್ 75 (ಮಗುವಿನ ಉದ್ದೇಶಪೂರ್ವಕ ನಿರ್ಲಕ್ಷ್ಯ, ಅಥವಾ ಮಗುವನ್ನು ಮಾನಸಿಕ ಅಥವಾ ದೈಹಿಕ ಕಾಯಿಲೆಗಳಿಗೆ ಒಡ್ಡುವುದು) ಮತ್ತು ಸೆಕ್ಷನ್ 77 (ಮದ್ಯ ಅಥವಾ ಮಾದಕ ದ್ರವ್ಯಗಳನ್ನು ಮಗುವಿಗೆ ಸರಬರಾಜು ಮಾಡುವುದು) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಬಾಲಕನಿಗೆ ಮದ್ಯ ಪೂರೈಸಿದ ಆರೋಪದಡಿ ಬಂಧಿತರಾಗಿದ್ದ ಕೋಸಿ ಹೋಟೆಲ್ ಮಾಲೀಕ ನಮನ್ ಭೂತಾಡ, ಬಾರ್ ಕೌಂಟರ್ ಮ್ಯಾನೇಜರ್ ಸಚಿನ್ ಕಾಟ್ಕರ್ ಮತ್ತು ಬ್ಲಾಕ್ ಕ್ಲಬ್ ಮ್ಯಾನೇಜರ್ ಸಚಿನ್ ಸಾಂಗ್ಲೆ ಅವರನ್ನು ಮಂಗಳವಾರ ಮೇ 24ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿತ್ತು.

ಪುಣೆಯ ಕಲ್ಯಾಣಿನಗರ ಪ್ರದೇಶದಲ್ಲಿ ಮೇ 19 ರಂದು ಮದ್ಯದ ನಶೆಯಲ್ಲಿ 17 ವರ್ಷದ ಬಾಲಕ ಚಲಾಯಿಸುತ್ತಿದ್ದ ಪೋಶ ವಿಲಾಸಿ ಕಾರು (ಆಡುಮಾತಿನಲ್ಲಿ 'ಪೋರ್ಶೆ' ಎಂದು ಅಪಭ್ರಂಶಗೊಂಡಿರುವ ಜರ್ಮನಿಯ ಕಾರು ತಯಾರಿಕಾ ಕಂಪೆನಿ) ಎರಡು ಬೈಕ್‌ಗಳಿಗೆ ಗುದ್ದಿದ ಪರಿಣಾಮ ಇಬ್ಬರು ಟೆಕಿಗಳು ಸಾವನ್ನಪ್ಪಿದ್ದರು.

ದುಡುಕಿನ ಮತ್ತು ನಿರ್ಲಕ್ಷ್ಯದ ಚಾಲನೆ, ಜೀವಗಳ ಸುರಕ್ಷತೆಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಕನ ವಿರುದ್ಧ  ಐಪಿಸಿ ಸೆಕ್ಷನ್‌ 304 ಎ, 279, 337 ಮತ್ತು 338 ಮಹಾರಾಷ್ಟ್ರ ಮೋಟಾರು ವಾಹನಗಳ ಕಾಯಿದೆಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆತನ ವಿರುದ್ಧ ಐಪಿಸಿಯ ಸೆಕ್ಷನ್ 304ರಡಿಯೂ (ಕೊಲೆಗೆ ಸಮನಲ್ಲದ ನರಹತ್ಯೆ) ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ವಯಸ್ಕರಂತೆಯೇ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

ರಸ್ತೆ ಅಪಘಾತ ಕುರಿತು 300 ಪದಗಳ ಪ್ರಬಂಧ ಬರೆಯಬೇಕು ಎಂಬ ಷರತ್ತು ವಿಧಿಸಿ ಪುಣೆಯ ಬಾಲ ನ್ಯಾಯಮಂಡಳಿ (ಜೆಜೆಬಿ) ಭಾನುವಾರ ಅಪ್ರಾಪ್ತ ವಯಸ್ಕನಿಗೆ ಜಾಮೀನು ನೀಡಿತ್ತು. ಭವಿಷ್ಯದಲ್ಲಿ ಆತ ಇಂತಹ ಕೃತ್ಯ ಎಸಗದಂತೆ ಮತ್ತು ಕೆಟ್ಟ ಸಹವಾಸದಿಂದ ದೂರ ಇರುವಂತೆ ನೋಡಿಕೊಳ್ಳಬೇಕು ಎಂದು ಪೋಷಕರಿಗೆ ಅದು ಸೂಚಿಸಿತ್ತು. ಈ ತೀರ್ಪು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

Kannada Bar & Bench
kannada.barandbench.com