ಒಂಬತ್ತು ವರ್ಷಗಳ ಹಿಂದೆ ಅಂದರೆ 2014ರಲ್ಲಿ ನಡೆದಿದ್ದ ಕೋಮುಗಲಭೆ ವೇಳೆ ಯುವ ಐ ಟಿ ಉದ್ಯೋಗಿ ಮೊಹ್ಸಿನ್ ಶೇಖ್ ಅವರನ್ನು ಕೊಂದ ಆರೋಪಕ್ಕೆ ಸಂಬಂಧಿಸಿದಂತೆ ಹಿಂದೂ ರಾಷ್ಟ್ರ ಸೇನೆ (ಎಚ್‌ಆರ್‌ಎಸ್) ಅಧ್ಯಕ್ಷ ಧನಂಜಯ್ ದೇಸಾಯಿ ಸೇರಿ 20 ಜನರನ್ನು ಪುಣೆಯ ಸೆಷನ್ಸ್ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್ ಬಿ ಸಾಳುಂಕೆ ಅವರು ಅವರು ತಿಳಿಸಿದ್ದಾರೆ. ಆದೇಶದ ವಿವರವಾದ ಪ್ರತಿ ಇನ್ನಷ್ಟೇ ಲಭಿಸಬೇಕಿದೆ.
ಜೂನ್ 2014ರಲ್ಲಿ, 22 ವರ್ಷ ವಯಸ್ಸಿನ ಮೊಹ್ಸಿನ್ ಅವರು ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸಿ ಮನಗೆ ಮರಳುತ್ತಿದ್ದರು. ಆ ವೇಳೆ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ 23 ಜನರ ಗುಂಪು ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿತ್ತು. ಪರಿಣಾಮ ಮೊಹ್ಸಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಶಿವಾಜಿ ಮತ್ತು ಇತರ ಹಿಂದೂ ದೇವತೆಗಳ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಯಾರೋ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಪುಣೆಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮೊಹ್ಸಿನ್ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ವಿಶೇಷ ಅಭಿಯೋಜಕರ ನೇಮಕಾತಿ ಮತ್ತು ಬಾಂಬೆ ಹೈಕೋರ್ಟ್‌ನ ವಿವಾದಾತ್ಮಕ ಜಾಮೀನು ಆದೇಶಕ್ಕೆ ಸಂಬಂಧಿಸಿದಂತೆ ಪ್ರಕರಣ ಚರ್ಚೆಗೆ ಗ್ರಾಸವಾಗಿತ್ತು.
ಆರಂಭದಲ್ಲಿ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಆಗಿದ್ದ ಉಜ್ವಲ್ ನಿಕಮ್ ಅವರು ಕಾರಣ ನೀಡದೆ ಹುದ್ದೆಯಿಂದ ಕೆಳಗಿಳಿದಿದ್ದರು. ತರುವಾಯ ಮೊಹ್ಸಿನ್ ಕುಟುಂಬ, ವಕೀಲೆ ರೋಹಿಣಿ ಸಾಲಿಯಾನ್ ಅವರನ್ನು ಎಸ್‌ಪಿಪಿಯಾಗಿ ನೇಮಿಸುವಂತೆ ಕೋರಿದ್ದರೂ ಮಹಾರಾಷ್ಟ್ರ ಸರ್ಕಾರ ಉಜ್ವಲಾ ಪವಾರ್ ಅವರನ್ನು ಆ ಹುದ್ದೆಗೆ ನೇಮಿಸಿತ್ತು.
ಇತ್ತ ಕುತೂಹಲಕಾರಿಯಾಗಿ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ನೀಡುವಾಗ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಮೃದುಲಾ ಭಟ್ಕರ್ ಮಾಡಿದ್ದ ಕೆಲ ಅವಲೋಕನಗಳು ವ್ಯಾಪಕ ಟೀಕೆಗೆ ಗುರಿಯಾಗಿದ್ದವು. ಮೃತನ ಏಕೈಕ ದೋಷವೆಂದರೆ ಆತ ಬೇರೆ ಧರ್ಮಕ್ಕೆ ಸೇರಿದವನಾಗಿರುವುದು. ಧಾರ್ಮಿಕ ಕುಮ್ಮಕ್ಕಿಗೆ ಒಳಗಾಗಿದ್ದನ್ನು ಹೊರತುಪಡಿಸಿ ಇನ್ನಾವ ಕ್ರಿಮಿನಲ್ ಹಿನ್ನೆಲೆಯೂ ಆರೋಪಿಗಳಿಗೆ ಇಲ್ಲ ಎಂದು ಅವರು ಹೇಳಿದ್ದರು.
ಈ ಆದೇಶವನ್ನು ಅಂದಿನ ನ್ಯಾಯಮೂರ್ತಿ ಶರದ್ ಬೊಬ್ಡೆ (ಈಗ ನಿವೃತ್ತ ಸಿಜೆಐ) ಅವರ ನೇತೃತ್ವದ ಪೀಠ ವಜಾಗೊಳಿಸಿತ್ತು. “ಕೊಲೆ ಮಾಡಲು ಧರ್ಮ ಆಧಾರವಾಗಬಾರದು” ಎಂದು ನ್ಯಾಯಾಲಯ ಹೇಳಿತ್ತು. ನಂತರ ಜಾಮೀನು ಅರ್ಜಿಯನ್ನು ಹೊಸದಾಗಿ ಆಲಿಸುವಂತೆ ನ್ಯಾ. ಮೃದುಲಾ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ತರುವಾಯ ಅವರು ಆರೋಪಿಗಳಿಗೆ ಜಾಮೀನು ನೀಡಿದ್ದರು.