ನೈತಿಕ ಅಸ್ಥಿರತೆ ಪ್ರಕರಣಗಳಲ್ಲಿ ಸಂದೇಹದ ಲಾಭದಡಿ ಖುಲಾಸೆಯಾದವರನ್ನು ಸಶಸ್ತ್ರ ಪಡೆಗೆ ನೇಮಿಸಬಹುದು: ಪಂಜಾಬ್ ಹೈಕೋರ್ಟ್

ಪೋಕ್ಸೊ ಕಾಯಿದೆಯಡಿಯ ಪ್ರಕರಣವೊಂದರಲ್ಲಿ ಖುಲಾಸೆಗೊಂಡ ವ್ಯಕ್ತಿಯನ್ನು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್‌ಗೆ (ಐಟಿಬಿಪಿ) ನೇಮಕ ಮಾಡಲಾಗಿತ್ತು. ಈ ನೇಮಕಾತಿ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ಆದೇಶವನ್ನು ನ್ಯಾಯಾಲಯ ಬದಿಗೆ ಸರಿಸಿತು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ಸಂದೇಹದ ಲಾಭದ ಆಧಾರದ ಮೇಲೆ ನೈತಿಕ ಅಸ್ಥಿರತೆಯ ಅಪರಾಧಗಳಲ್ಲಿ ಖುಲಾಸೆಗೊಂಡ ವ್ಯಕ್ತಿಗಳನ್ನು ಸಶಸ್ತ್ರ ಪಡೆಗಳಿಗೆ ನೇಮಿಸಬಹುದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ [ದೀಪಕ್ ಕುಮಾರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು].

ಅಂತಹ ವ್ಯಕ್ತಿಗಳನ್ನು ಸಶಸ್ತ್ರ ಪಡೆಗಳಿಗೆ ನೇಮಕ ಮಾಡಲು ಯಾವುದೇ ಆತ್ಯಂತಿಕ ನಿರ್ಬಂಧವಿಲ್ಲ ಎಂದು ನ್ಯಾಯಮೂರ್ತಿ ಜಗಮೋಹನ್ ಬನ್ಸಾಲ್ ಹೇಳಿದರು.

ಆ ಮೂಲಕ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) ಅಡಿಯ ಪ್ರಕರಣದಲ್ಲಿ 2019ರಲ್ಲಿ ಖುಲಾಸೆಗೊಂಡ ವ್ಯಕ್ತಿಯನ್ನು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪೇದೆಯಾಗಿ ನೇಮಕ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿತು.

2012ರಲ್ಲಿ ಗೃಹ ಸಚಿವಾಲಯ (ಎಂಎಚ್ಎ) ಹೊರಡಿಸಿದ ಸೂಚನೆಗಳನ್ನು ಪರಿಶೀಲಿಸಿದ ನ್ಯಾಯಾಲಯ, "ಸೂಚನೆಗಳ ಪ್ರಕಾರ, ಖುಲಾಸೆಗೊಂಡರೆ, ನೈತಿಕ ಅಸ್ಥಿರತೆಯ ಅಪರಾಧದಲ್ಲಿ ಸಿಲುಕಿರುವ ಅಭ್ಯರ್ಥಿಯನ್ನು ಸಶಸ್ತ್ರ ಪಡೆಗಳಿಗೆ ನೇಮಿಸಬಹುದು ಅಥವಾ ನೇಮಕ ಮಾಡದಿರಬಹುದು. ಸೂಚನೆಗಳಲ್ಲಿ, 'ಸಾಮಾನ್ಯವಾಗಿ' ಎಂಬ ಪದವನ್ನು ಬಳಸಲಾಗಿದೆ, ಇದು ಅನುಮಾನದ ಲಾಭದ ಆಧಾರದ ಮೇಲೆ ಖುಲಾಸೆಯಾಗುವ ನೇಮಕಾತಿಗೆ ಆತ್ಯಂತಿಕ ನಿರ್ಬಂಧವಿಲ್ಲ ಎಂಬುದನ್ನು ತೋರಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಸಕ್ಷಮ ಪ್ರಾಧಿಕಾರ ಅಭ್ಯರ್ಥಿಯ ವಾದವನ್ನು ಪರಿಗಣಿಸಬಹುದು" ಎಂದು ನುಡಿಯಿತು.

ತಂದೆಯ ಸಾವಿನಿಂದಾಗಿ ಅನುಕಂಪದ ಆಧಾರದಲ್ಲಿ ಐಟಿಬಿಪಿಯಲ್ಲಿ ಉದ್ಯೋಗ ಪಡೆದಿದ್ದ ಅರ್ಜಿದಾರ ದಿಲೀಪ್‌ ಕುಮಾರ್‌ ವಿರುದ್ಧ 2018ರಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಒಂದು ವರ್ಷದ ನಂತರ, ಅವರನ್ನು ಖುಲಾಸೆಗೊಳಿಸಲಾಯಿತು.

ದಿಲೀಪ್‌ ಅವರಿಗೆ ಕೇಂದ್ರ ಸರ್ಕಾರ 2022ರಲ್ಲಿ ನೇಮಕಾತಿ ಪತ್ರ ನೀಡಿತು. ಈ ಸಮಯದಲ್ಲಿ ಅವರು ತಮ್ಮ ವಿರುದ್ಧ ಕ್ರಿಮಿನಲ್‌ ಪ್ರಕರಣ ಇದುದ್ದನ್ನು ತಾವು ಪ್ರಕರಣದಲ್ಲಿ ಖುಲಾಸೆಗೊಂಡಿರುವ ವಿಚಾರವನ್ನು ಸರ್ಕಾರಕ್ಕೆ ಬಹಿರಂಗಪಡಿಸಿದರು.

ಬಳಿಕ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿದ ಅಧಿಕಾರಿಗಳು ಸಂದೇಹದ ಲಾಭದ ಆಧಾರದಲ್ಲಿ ಖುಲಾಸೆಗೊಂಡಿರುವುದರಿಂದ ತಮ್ಮ ನೇಮಕಾತಿಯನ್ನು ಏಕೆ ರದ್ದುಗೊಳಿಸಬಾರದು ಎಂದು ದಿಲೀಪ್‌ ಕುಮಾರ್‌ ಅವರನ್ನು ಪ್ರಶ್ನಿಸಿದ್ದರು. ಕುಮಾರ್‌ ಪ್ರತಿಕ್ರಿಯೆ ಬಳಿಕ ನೇಮಕಾತಿ ರದ್ದುಗೊಂಡಿತ್ತು.

ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋದ ದಿಲೀಪ್‌, ತಾನು ಅತ್ಯಚಾರ ಎಸಗಿಲ್ಲ ಎಂದು ಸಂತ್ರಸ್ತೆ ಮತ್ತು ಆಕೆಯ ತಾಯಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

ಆದರೆ ಕೇಂದ್ರವನ್ನು ಪ್ರತಿನಿಧಿಸಿದ್ದ ವಕೀಲರು, ಅನುಮಾನದ ಲಾಭದ ಆಧಾರದ ಮೇಲೆ ಅವರನ್ನು ಖುಲಾಸೆಗೊಳಿಸಿದರೆ ಅಥವಾ ಸಾಕ್ಷಿಗಳು ಪ್ರತಿಕೂಲವಾಗಿದ್ದರೆ, ಅಭ್ಯರ್ಥಿಯನ್ನು ಸಾಮಾನ್ಯವಾಗಿ ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗೆ ಸೂಕ್ತವೆಂದು ಪರಿಗಣಿಸಲಾಗುವುದಿಲ್ಲ ಎಂದು ಗೃಹಸಚಿವಾಲಯ ಹೊರಡಿಸಿದ ಸೂಚನೆಗಳನ್ನು ದಿಲೀಪ್‌ ಪ್ರಶ್ನಿಸಿಲ್ಲ ಎಂಬುದಾಗಿ ವಾದಿಸಿದರು.

ನ್ಯಾಯಮೂರ್ತಿ ಜಗಮೋಹನ್ ಬನ್ಸಾಲ್
ನ್ಯಾಯಮೂರ್ತಿ ಜಗಮೋಹನ್ ಬನ್ಸಾಲ್

ಗೃಹಸಚಿವಾಲಯ ಹೊರಡಿಸಿದ ಸೂಚನೆಗಳು ಅನುಮಾನದ ಲಾಭದ ಆಧಾರದ ಮೇಲೆ ಖುಲಾಸೆಗೊಂಡವರ ನೇಮಕಾತಿಗೆ ಸಂಪೂರ್ಣ ತಡೆ ನೀಡುವುದಿಲ್ಲ ಎಂದು ತೀರ್ಮಾನಿಸಿದ ಹೈಕೋರ್ಟ್‌, ಅಧಿಕಾರಿಗಳು ಅರ್ಜಿದಾರರ ಪೂರ್ವಾಪರಗಳನ್ನು ಪರಿಶೀಲಿಸಿಲ್ಲ ಎಂದಿತು.

ದಿಲೀಪ್‌ ಅವರ ಪ್ರಕರಣದಲ್ಲಿ ಗೃಹ ಸಚಿವಾಲಯದ ಸೂಚನೆಗಳನ್ನು ಯಾಂತ್ರಿಕವಾಗಿ ಅನ್ವಯಿಸಲಾಗಿದೆ ಎಂದು ತೀರ್ಮಾನಿಸಿದ ನ್ಯಾಯಾಲಯ ಅವರ ಮನವಿಯನ್ನು ಪುರಸ್ಕರಿಸಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
Deepak Kumar v. Union of India and others.pdf
Preview
Kannada Bar & Bench
kannada.barandbench.com