ಬೀದಿನಾಯಿ ಕಡಿತ: ಮೈ ಮೇಲೆ ಮೂಡಿದ ಪ್ರತಿ ಹಲ್ಲಿನ ಗುರುತಿಗೂ ₹10 ಸಾವಿರ ಪರಿಹಾರ ನೀಡುವಂತೆ ಪಂಜಾಬ್ ಹೈಕೋರ್ಟ್ ಆದೇಶ
ಪಂಜಾಬ್, ಹರಿಯಾಣ ಹಾಗೂ ಚಂಡೀಗಢದಲ್ಲಿ ಬೀದಿ ಅಥವಾ ಕಾಡುಪ್ರಾಣಿಗಳಿಂದ ದಾಳಿಗೆ ತುತ್ತಾಗಿ ಸಂತ್ರಸ್ತರಾದವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರ್ದೇಶನ ನೀಡಿದೆ [ರಜ್ವೀಂದರ್ ಕೌರ್ ಮತ್ತಿತರರು ಹಾಗೂ ಹರ್ಯಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಸಾರ್ವಜನಿಕ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೀದಿ ನಾಯಿಗಳ ದಾಳಿ, ಬಿಡಾಡಿ ದನ, ಗೂಳಿಗಳು ಅಥವಾ ಕಾಡು ಪ್ರಾಣಿಗಳು ಗುದ್ದಿ ಸಂಭವಿಸಿದ ಗಾಯ ಅಥವಾ ಸಾವಿಗೆ ಪರಿಹಾರ ಕೋರಿ ಸಲ್ಲಿಸಲಾಗಿದ್ದ 193 ಅರ್ಜಿಗಳಿಗೆ ಸಂಬಂಧಿಸಿದಂತೆ ಆಗಸ್ಟ್ 18, 2023ರಂದು ಈ ನಿರ್ದೇಶನಗಳನ್ನು ನೀಡಲಾಯಿತು.
ಪರಿಹಾರ ಕೋರಿ ಯಾವ ಅಧಿಕಾರಿಯನ್ನು ಸಂಪರ್ಕಿಸಬೇಕು ಎಂಬ ಗೊಂದಲ ಸಂತ್ರಸ್ತರು ಮತ್ತವರ ಕುಟುಂಬಗಳಲ್ಲಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ “ಸರ್ಕಾರ ಯಾವುದೇ ನೀತಿ ಜಾರಿಗೆ ತಂದಿದ್ದರೂ ಕೂಡ ಅದನ್ನು ದಾವೆದಾರರಿಗೆ ತಿಳಿಸುವುದಿಲ್ಲ. ಹಣಕಾಸಿನ ನೆರವು ಕೂಡ ಕ್ಷುಲ್ಲಕವಾಗಿದೆ” ಎಂದು ಕಿಡಿಕಾರಿತು.
ಆದ್ದರಿಂದ ಪಂಜಾಬ್, ಹರಿಯಾಣ ಮತ್ತು ಚಂಡೀಗಢಗಳಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಸುಲಭವಾಗುವಂತೆ ಸಮಿತಿಗಳನ್ನು ನ್ಯಾಯಾಲಯ ರಚಿಸಿತು. ಪರಿಹಾರ ಕುರಿತಂತೆ ತ್ವರಿತ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಈ ಸಮಿತಿಗಳಿಗೆ ನ್ಯಾಯಾಲಯ ಕೆಲ ಮಾರ್ಗಸೂಚಿಗಳನ್ನು ನೀಡಿತು.
ಬೀದಿ ನಾಯಿ ಕಡಿತದ ಪ್ರಕರಣಗಳಲ್ಲಿ, ನಾಯಿಯ ಹಲ್ಲಿನ ಗುರುತು ಮೂಡಿದ್ದರೆ ಕನಿಷ್ಠ ಪ್ರತಿ ಹಲ್ಲಿನ ಗುರುತಿಗೆ ₹ 10,000 ಪರಿಹಾರ ನೀಡಬೇಕು. ಕಚ್ಚಿದ್ದರಿಂದಾಗಿ ಚರ್ಮವು ಹರಿದು ಮಾಂಸವು ಕಿತ್ತುಬಂದಿದ್ದರೆ 0.2 ಸೆಂ.ಮೀ. ಗಾಯಕ್ಕೆ ಕನಿಷ್ಠ ₹ 20,000 ಪರಿಹಾರ ಮೊತ್ತ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
ಆಯಾ ರಾಜ್ಯದ ನೀತಿಗಳ ಪ್ರಕಾರ ಪರಿಹಾರ ನೀಡಬೇಕಿದ್ದರೂ ಚಂಡೀಗಢದ ವಿಚಾರದಲ್ಲಿ ಪಂಜಾಬ್ ನೀತಿ ಹೆಚ್ಚು ಪ್ರಯೋಜನಕಾರಿಯಾಗಿರುವುದರಿಂದ ಅದನ್ನೇ ಅನ್ವಯಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಅಗತ್ಯವಿದ್ದರೆ ಸಮಿತಿಯ ಮುಂದಿರುವ ಪರಿಹಾರದ ಹಕ್ಕಿಗಾಗಿ ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸಲು ಹಕ್ಕುದಾರರನ್ನು ತಡೆಯುವಂತಿಲ್ಲ ಎಂದು ನ್ಯಾಯಮೂರ್ತಿ ವಿನೋದ್ ಎಸ್ ಭಾರದ್ವಾಜ್ ಸ್ಪಷ್ಟಪಡಿಸಿದರು.