ತಪ್ಪು ಚಿಕಿತ್ಸೆ ನೀಡಿ 2022ರಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣರಾದ ನಕಲಿ ವೈದ್ಯರೊಬ್ಬರಿಗೆ ಈಚೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಜಾಮೀನು ನಿರಾಕರಿಸಿದೆ [ಮೊಹಮ್ಮದ್ ಫಾಹೀಮ್ ಮತ್ತು ಹರಿಯಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಆರೋಪಿ ಕಾನೂನು ಪ್ರಕಾರ ವೃತ್ತಿಪರ ಪದವಿ ಇಲ್ಲದೆ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂಬುದಾಗಿ ನ್ಯಾಯಮೂರ್ತಿ ನಮಿತ್ ಕುಮಾರ್ ಹೇಳಿದರು.
ಸಾಕ್ಷ್ಯ ನಾಶಪಡಿಸುವ ಸಲುವಾಗಿ ಆರೋಪಿಗಳು ಸಂತ್ರಸ್ತೆಯ ಮೃತದೇಹವನ್ನು ಪೇಯಿಂಗ್ ಗೆಸ್ಟ್ ವಸತಿಗೃಹದ ಬಳಿ ರಸ್ತೆಯ ಮೇಲೆ ಎಸೆದಿದ್ದರು.
ಅರ್ಜಿದಾರ ನೋಂದಾಯಿತ ವೈದ್ಯಕೀಯ ವೃತ್ತಿಪರನೇ ಎಂಬುದನ್ನು ವಿಚಾರಣಾ ನ್ಯಾಯಾಲಯ ಗಮನಿಸಬೇಕಿದೆ. ವ್ಯಕ್ತಿಯೊಬ್ಬರ ಜೀವ ಹೋಗಿದೆ. ಇಂತಹ ನೋಂದಣಿಯಾಗದ ವೈದ್ಯರು ದೇಶದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಭಾರೀ ಧಕ್ಕೆ ತರುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
“ಕಾಯಿದೆ ಕಾನೂನುಗಳಿದ್ದರೂ ನೋಂದಾಯಿಸಿಕೊಳ್ಳದ ವೈದ್ಯರು ಚಿಕಿತ್ಸೆಗೆ ಮುಂದಾಗಿ ರೋಗಿಯ ಬದುಕನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ. ಪರಿಣಾಮ ರೋಗಿಯ ಕಾಯಿಲೆ ಉಲ್ಬಣಗೊಳ್ಳುತ್ತದೆ. ಇಂತಹವರು ಭಾರತದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತಾರೆ" ಎಂದು ಅದು ವಿವರಿಸಿದೆ.
ಆರೋಪಿ ಫಹೀಮ್ ಗುರುಗ್ರಾಮ್‌ನ ಮನೇಸರ್‌ನ ಅಲಿಯಾರ್ ಗ್ರಾಮದಲ್ಲಿ ವೈದ್ಯಕೀಯ ಕ್ಲಿನಿಕ್ ನಡೆಸುತ್ತಿದ್ದ. ಫಹೀಮ್ ಸೂಕ್ತ ಚಿಕಿತ್ಸೆ ನೀಡಿದ ಪರಿಣಾಮ ತನ್ನ ಸೋದರಳಿಯ ಲೀಲಾಧರ್ ಸಾವನ್ನಪ್ಪಿದರು ಎಂದು ದೂರುದಾರ ರಾಮ್ ಅವತಾರ್ ಆರೋಪಿಸಿದ್ದರು.
ಆದರೆ ಲೀಲಾಧರ್ ಉಸಿರಾಟದ ತೊಂದರೆಯಿಂದ ಸಹಜವಾಗಿ ಸಾವನ್ನಪ್ಪಿದ್ದು ಫೀಹೀಮ್ ನೀಡಿದ್ದ ಚುಚುಮದ್ದು ಕೇವಲ ಆಂಟಿಬಯೋಟಿಕ್ ಎಂದು ಫಹೀಮ್ ಪರವ ವಕೀಲರು ವಾದಿಸದಿದರು.
ವಾದ ಆಲಿಸಿದ ನ್ಯಾಯಾಲಯ ವೈದ್ಯಕೀಯ ಸಾಕ್ಷ್ಯಗಳು, ಕಾರ್ಯವಿಧಾನಗಳು ಅಥವಾ ಚಿಕಿತ್ಸೆಗಳನ್ನು ಅರ್ಥೈಸಲು ಅಗತ್ಯವಾದ ವೈದ್ಯಕೀಯ ಅಥವಾ ತಾಂತ್ರಿಕ ಪರಿಣತಿ ತನಗೆ ಇಲ್ಲವಾದ ಕಾರಣ ಈ ಹಂತದಲ್ಲಿತಾನು ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಇದಲ್ಲದೆ, ಐಪಿಸಿಯ ಸೆಕ್ಷನ್ 304 (II) ಅಡಿಯಲ್ಲಿ ಅಪರಾಧ ಎಸಗಿದ ವ್ಯಕ್ತಿಯು ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾನೆ ಎಂದ ಅದು ಅರ್ಜಿಯನ್ನು ವಜಾಗೊಳಸಿದೆ.