

ಮಹಿಳೆಯರು ತಮ್ಮ ವೈವಾಹಿಕ ಸ್ಥಿತಿಯನ್ನು ಪರಿಗಣಿಸದೆ 'ಕರ್ವಾ ಚೌತ್' ಆಚರಿಸುವುದನ್ನು ಕಡ್ಡಾಯಗೊಳಿಸುವ ಕಾನೂನು ಜಾರಿಗೆ ತರುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ [ನರೇಂದರ್ ಕುಮಾರ್ ಮಲ್ಹೋತ್ರಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಇದೇ ವೇಳೆ ಅರ್ಜಿದಾರರಿಗೆ ₹1,000 ಸಾಂಕೇತಿಕ ದಂಡ ವಿಧಿಸಿದ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಸುಮೀತ್ ಗೋಯೆಲ್ ಅವರಿದ್ದ ಪೀಠ, ಚಂಡೀಗಢದ ಬಡ ರೋಗಿಗಳ ಕಲ್ಯಾಣ ನಿಧಿಗೆ ದಂಡದ ಮೊತ್ತ ಪಾವತಿಸುವಂತೆ ಜನವರಿ 22ರಂದು ನೀಡಿದ ಆದೇಶದಲ್ಲಿಸೂಚಿಸಿದೆ. ಪ್ರಕರಣ ಶಾಸಕಾಂಗದ ವ್ಯಾಪ್ತಿಗೆ ಬರಲಿದ್ದು ಇದರಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದು ತಿಳಿಸಿದೆ.
ಸಾಮಾನ್ಯವಾಗಿ ವಿವಾಹಿತ ಹಿಂದೂ ಮಹಿಳೆಯರು ತಮ್ಮ ಗಂಡನ ಸುರಕ್ಷತೆ ಮತ್ತು ದೀರ್ಘಾಯುಷ್ಯಕ್ಕಾಗಿ ಸೂರ್ಯೋದಯದಿಂದ ಚಂದ್ರೋದಯದವರೆಗೆ ಉಪವಾಸ ಮಾಡುವ ಆಚರಣೆಯೇ ಕರ್ವಾ ಚೌತ್.
ಕೆಲವು ವರ್ಗದ ಮಹಿಳೆಯರಿಗೆ, ಅದರಲ್ಲಿಯೂ ವಿಧವೆಯರಿಗೆ ಕರ್ವಾ ಚೌತ್ ಆಚರಿಸಲು ಅವಕಾಶವಿಲ್ಲ. ಅಂತಹ ಮಹಿಳೆಯರು ಹಬ್ಬದಲ್ಲಿ ಭಾಗವಹಿಸುವಂತೆ ಮಾಡುವುದಕ್ಕಾಗಿ ಕಾನೂನು ಜಾರಿಗೆ ತರಬೇಕು. ಯಾವುದೇ ತಾರತಮ್ಯವಿಲ್ಲದೆ ಮತ್ತು ವೈವಾಹಿಕ ಸ್ಥಾನಮಾನ ಲೆಕ್ಕಿಸದೆ ಎಲ್ಲಾ ಮಹಿಳೆಯರು ಕರ್ವಾ ಚೌತ್ ಆಚರಿಸುವುದನ್ನು ಕಡ್ಡಾಯಗೊಳಿಸಬೇಕು. ಇದರಲ್ಲಿ ಯಾವುದೇ ಲೋಪ ಉಂಟಾದರೆ ಅಂತಹವರನ್ನು ಶಿಕ್ಷಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ವಿಧವೆಯರು, ಕಾನೂನುಬದ್ಧವಾಗಿ ಪರಿತ್ಯಕ್ತರಾದವರು, ವಿಚ್ಛೇದಿತರು ಅಥವಾ ಸಹ ಜೀವನ ನಡೆಸುತ್ತಿರುವ ಮಹಿಳೆಯರು ಕೂಡ ಕರ್ವಾ ಚೌತ್ ಆಚರಿಸಬೇಕು. ಹಬ್ಬವನ್ನು ಮಹಿಳಾ ಜಾನಪದ ಹಬ್ಬ ಅಥವಾ "ಮಾ ಗೌರಿ ಉತ್ಸವ" ಅಥವಾ "ಮಾ ಪಾರ್ವತಿ ಉತ್ಸವ" ಎಂದು ಘೋಷಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಇದಲ್ಲದೆ ಎಲ್ಲಾ ಸ್ತರ ಹಾಗೂ ವರ್ಗದ ಮಹಿಳೆಯರು ಉತ್ಸವದಲ್ಲಿ ಭಾಗವಹಿಸುವಂತೆ ಮಾಡಲು ಕಾನೂನು ಜಾರಿಗೊಳಿಸಬೇಕಿದೆ. ಯಾವುದೇ ವರ್ಗದ ವ್ಯಕ್ತಿಗಳು ಹಬ್ಬದಲ್ಲಿ ಭಾಗವಹಿಸುವುದನ್ನು ನಿರಾಕರಿಸುವುದು ಶಿಕ್ಷಾರ್ಹ ಎಂದು ಘೋಷಿಸಬೇಕಿದೆ ಎಂಬುದಾಗಿ ಅರ್ಜಿಯಲ್ಲಿ ತಿಳಿಸಲಾಗಿತ್ತು.
ನ್ಯಾಯಾಲಯ ಮನವಿ ಪರಿಗಣಿಸದ ಹಿನ್ನೆಲೆಯಲ್ಲಿ ಅಂತಿಮವಾಗಿ ಅರ್ಜಿದಾರರ ಪರ ವಕೀಲರು ಮನವಿ ಹಿಂಪಡೆಯಲು ಮುಂದಾದರು. ಇದಕ್ಕೆ ನ್ಯಾಯಾಲಯ ಸಮ್ಮತಿಸಿತಾದರೂ ಅರ್ಜಿದಾರರಿಗೆ ದಂಡ ವಿಧಿಸಿತು.