ದ್ವಿಪತ್ನಿತ್ವಕ್ಕೆ ದಾರಿ: ಪರ ಸ್ತ್ರೀ ಜೊತೆ ವಿವಾಹಿತ ಪುರುಷ ವಾಸಿಸಲು ಪಂಜಾಬ್ ಹೈಕೋರ್ಟ್ ಅನುಮತಿ ನಕಾರ

ವಿವಾಹಿತ ಪುರುಷ ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೆ ಕಾಮುಕವಾದ ಮತ್ತು ವ್ಯಭಿಚಾರದ ಜೀವನ ನಡೆಸುತ್ತಿದ್ದರೆ ಅದು ದ್ವಿಪತ್ನಿತ್ವದ ಅಪರಾಧವಾಗುತ್ತದೆ ಎಂದಿದೆ ಪೀಠ.
Punjab and Haryana High Court
Punjab and Haryana High Court

ಮೊದಲ ಸಂಗಾತಿಯಿಂದ ವಿಚ್ಛೇದನ ಪಡೆಯದೆ ‘ಕಾಮುಕವಾದ ಮತ್ತು ವ್ಯಭಿಚಾರ’ದ ಜೀವನ ನಡೆಸುವ ವ್ಯಕ್ತಿ ಐಪಿಸಿ ಸೆಕ್ಷನ್‌ 494ರ ಅಡಿ ದ್ವಿಪತ್ನಿತ್ವ ಅಪರಾಧಕ್ಕೆ ಹೊಣೆಗಾರನಾಗುತ್ತಾನೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ರೀನಾ ದೇವಿ ಮತ್ತಿತರರು ಹಾಗೂ ಪಂಜಾಬ್‌ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಜೋಡಿಯಲ್ಲಿ ಒಬ್ಬರಿಗೆ ಇದು ವಿವಾಹೇತರ ಸಂಬಂಧವಾಗಿದ್ದು ಮೊದಲ ಪತ್ನಿಯೊಂದಿಗಿನ ದಾಂಪತ್ಯದಿಂದಾಗಿ ಆತನಿಗೆ ಎರಡು ವರ್ಷದ ಮಗಳಿದ್ದಾಳೆ ಎಂಬುದನ್ನು ತಿಳಿದ ನ್ಯಾ. ಕುಲದೀಪ್ ತಿವಾರಿ ಅವರು ಜೋಡಿಗೆ ಪೊಲೀಸ್‌ ರಕ್ಷಣೆ ನೀಡಲು ನಿರಾಕರಿಸಿದರು.

ಮೊದಲ ಸಂಗಾತಿಗೆ ವಿಚ್ಛೇದನ ನೀಡುವ ಸಂಬಂಧ ಮಾನ್ಯವಾದ ತೀರ್ಪು ಪಡೆಯದೆ ಆರೋಪಿ ಸಹಜೀವನ ಸಂಗಾತಿಯೊಡನೆ ಕಾಮುಕವಾದ ಮತ್ತು ವ್ಯಭಿಚಾರದ ಜೀವನ ನಡೆಸುತ್ತಿದ್ದಾನೆ. ಇದು ಐಪಿಸಿಯ ಸೆಕ್ಷನ್ 494/495 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಲಿದ್ದು ಅಂತಹ ಸಂಬಂಧ ʼಲಿವ್‌ ಇನ್‌ ಸಂಬಂಧʼ ಅಥವಾ ʼಸಂಬಂಧʼದ ಪರಿಕಲ್ಪನೆಯಡಿ ಬರುವುದಿಲ್ಲ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.

ದ್ವಿಪತ್ನಿತ್ವವು ಐಪಿಸಿ ಸೆಕ್ಷನ್ 494ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು ದಂಡದ ಜೊತೆಗೆ ಗರಿಷ್ಠ ಏಳು ವರ್ಷ ಶಿಕ್ಷೆ ವಿಧಿಸಬಹುದಾಗಿದೆ.

Also Read
ಮುಸ್ಲಿಮರ ದ್ವಿಪತ್ನಿತ್ವ ಪ್ರಶ್ನಿಸಿದ್ದ ಅರ್ಜಿ: ಸೂಕ್ತ ಸಮಯದಲ್ಲಿ ಸಾಂವಿಧಾನಿಕ ಪೀಠ ರಚಿಸಲಾಗುವುದು ಎಂದ ಸುಪ್ರೀಂ

ಆತನ ಮತ್ತು ಮೊದಲ ಹೆಂಡತಿ ನಡುವಣ ವಿಚ್ಛೇದನ ಪ್ರಕರಣದ ವಿಚಾರಣೆ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಆಗ ಪೀಠ “ಆದರೂ ಆತನ ಕೃತ್ಯ ಐಪಿಸಿ ಸೆಕ್ಷನ್‌ 494 (ಗಂಡ ಅಥವಾ ಹೆಂಡತಿ ಬದುಕಿದ್ದಾಗಲೇ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗುವುದು) ಮತ್ತು 495ರ (ಎರಡನೇ ಮದುವೆಗೆ ಮುಂದಾದ ವ್ಯಕ್ತಿಯಿಂದ ಮೊದಲ ಮದುವೆಯನ್ನು ಮರೆಮಾಚುವುದು) ಅಡಿ ಇನ್ನಷ್ಟು ಅಪರಾಧವಾದೀತು” ಎಂದು ಎಚ್ಚರಿಕೆ ನೀಡಿತು.

ತಾನು ವಿವಾಹವಾಗಲಿರುವ ಮಹಿಳೆಯ ಸಂಬಂಧಿಕರು ಕೊಲೆ ಮಾಡುತ್ತಾರೆ ಎಂಬ ವ್ಯಕ್ತಿಯ ಆರೋಪ ಅಸ್ಪಷ್ಟತೆಯಿಂದ ಕೂಡಿದೆ ಎಂದು ನ್ಯಾ. ತಿವಾರಿ ಹೇಳಿದರು. ಈ ಆರೋಪಗಳಿಗೆ ದಾಖಲೆಗಳಿಲ್ಲ ಮತ್ತು ಹೇಗೆ ಬೆದರಿಕೆ ಒಡ್ಡಲಾಯಿತು ಎಂಬುದಕ್ಕೆ ನಿದರ್ಶನಗಳನ್ನು ನೀಡಿಲ್ಲ ಎಂದು ನ್ಯಾಯಾಲಯ ತಿಳಿಸಿತು.

ಈ ಹಿನ್ನೆಲೆಯಲ್ಲಿ “ವ್ಯಭಿಚಾರದಿಂದ ಎದುರಾಗಬಹುದಾದ ಕ್ರಿಮಿನಲ್‌ ಮೊಕದ್ದಮೆ ತಪ್ಪಿಸಲು ಈ ಆರೋಪ ಮಾಡಿರುವಂತೆ ತೋರುತ್ತಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಲಿವ್‌ ಇನ್‌ ಜೋಡಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿತು.

Related Stories

No stories found.
Kannada Bar & Bench
kannada.barandbench.com