ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ನೀಡಿದ್ದ ಹೇಳಿಕೆಗಳಿಗಾಗಿ ಆಮ್ ಆದ್ಮಿ ಪಕ್ಷದ ಮಾಜಿ ಸದಸ್ಯ ಕುಮಾರ್ ವಿಶ್ವಾಸ್ ಮತ್ತು ಬಿಜೆಪಿ ಮುಖಂಡ ತಜೀಂದರ್ ಸಿಂಗ್ ಬಗ್ಗಾ ವಿರುದ್ಧ ದಾಖಲಾಗಿದ್ದ ಪ್ರತ್ಯೇಕ ಪ್ರಕರಣಗಳನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.
ಕೇಜ್ರಿವಾಲ್ ಅವರನ್ನು ಕಳೆದ ಫೆಬ್ರುವರಿಯಲ್ಲಿ ʼಪ್ರತ್ಯೇಕತಾವಾದಿʼ ಎಂದು ಜರೆದಿದ್ದ ಕುಮಾರ್ ವಿಶ್ವಾಸ್ ವಿರುದ್ಧ ಅಕ್ರಮ ಸಭೆ ಸೇರಿದ ಆರೋಪದ ಮೇಲೆ ಬಂಧಿಸಲಾಗಿತ್ತು. ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರದ ಬಗ್ಗೆ ಕೇಜ್ರಿವಾಲ್ ಅವರು ನೀಡಿದ್ದ ಅಭಿಪ್ರಾಯಕ್ಕಾಗಿ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಬಿಜೆಪಿ ಮುಖಂಡ ತಜೀಂದರ್ ಸಿಂಗ್ ಬಗ್ಗಾ ವಿರುದ್ಧ ಪಂಜಾಬ್ ಪೊಲೀಸರು ಕೆಲ ತಿಂಗಳುಗಳ ಹಿಂದೆ ಪ್ರಕರಣ ದಾಖಲಿಸಿದ್ದರು.
ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಅನೂಪ್ ಚಿತ್ಕಾರ ಅವರಿದ್ದ ಪೀಠ ತೀರ್ಪು ನೀಡಿದೆ. ಕುಮಾರ್ ವಿಶ್ವಾಸ್ ಕೇವಲ ತಮ್ಮ ವಾಕ್ ಸ್ವಾತಂತ್ರ್ಯವನ್ನು ಬಳಸಿಕೊಂಡಿದ್ದಾರೆಯೇ ಹೊರತು ಆರೋಪಿಸಲಾಗಿರುವಂತೆ ಕೇಜ್ರಿವಾಲ್ ವಿರುದ್ಧ ನಂಜು ಕಾರಿಲ್ಲ. ಮತೀಯತೆಯ ಆಧಾರದ ಮೇಲೆ ಸಮಾಜವನ್ನು ಒಡೆಯುವ ಪ್ರಯತ್ನ ಎಲ್ಲೂ ಕಂಡುಬಂದಿಲ್ಲ ಎಂದು ಪೀಠ ಹೇಳಿದೆ.
ಮತ್ತೊಂದೆಡೆ ಬಗ್ಗಾ ಅವರು ರಾಜಕೀಯ ಹೋರಾಟಗಾರ ಮತ್ತು ಪಕ್ಷವೊಂದರ ವಕ್ತಾರರಾಗಿದ್ದು ಎದುರಾಳಿ ನಾಯಕರ ವಿರುದ್ಧ ಜನರಲ್ಲಿ ಅರಿವು ಮೂಡಿಸುವ ಹಕ್ಕು ಅವರಿಗೆ ಇದೆ. ಅರ್ಜಿದಾರರ ಹೇಳಿಕೆಯು ಸಶಸ್ತ್ರ ಕ್ರಾಂತಿಗಾಗಲಿ, ಹಲ್ಲೆಗಾಗಲಿ ಪ್ರೇರೇಪಿಸಿಲ್ಲ ಎಂದು ಅಭಿಪ್ರಾಯಪಟ್ಟಿದೆ.
'ಕಾಶ್ಮೀರ್ ಫೈಲ್ಸ್' ಚಿತ್ರದ ಬಗ್ಗೆ ಕೇಜ್ರಿವಾಲ್ ಸಾಮಾಜಿಕ ಮಾಧ್ಯಮದ ಮೂಲಕ ವ್ಯಕ್ತಪಡಿಸಿದ್ದ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸುತ್ತಾ ಬಗ್ಗಾ ಅವರು ಕೇಜ್ರಿವಾಲ್ ಅವರು ಕ್ಷಮೆ ಕೇಳದೆ ಹೋದರೆ ಬಿಜೆಪಿ ಕಾರ್ಯಕರ್ತರು ಅವರನ್ನು ಬದುಕಲು ಬಿಡುವುದಿಲ್ಲ ಎಂದಿದ್ದರು.