ಸಿಬಿಐಗೆ ಪಂಜಾಬ್‌ನಲ್ಲೂ ನಿರ್ಬಂಧ: ರಾಜ್ಯ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ನೀಡಿದ್ದ ಅನುಮತಿ ಹಿಂಪಡೆತ

ಮುಖ್ಯಮಂತ್ರಿ ಅಮರೀಂದರ್ ಸಿಂಗ್‌ ನೇತೃತ್ವದ ರಾಜ್ಯ ಸರ್ಕಾರವು ಸಿಬಿಐಗೆ ತನಿಖೆ ನಡೆಸಲು ನೀಡಿದ್ದ ಸಾಮಾನ್ಯ ಅನುಮತಿ ಹಿಂಪಡೆದಿರುವುದರಿಂದ ರಾಜ್ಯ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಪ್ರತೀ ಪ್ರಕರಣಕ್ಕೂ ಸಿಬಿಐ ರಾಜ್ಯದ ಅನುಮತಿ ಕೋರಬೇಕಿದೆ.
CBI
CBI

ಪಂಜಾಬ್‌ ರಾಜ್ಯದ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಅಮರೀಂದರ್‌ ಸಿಂಗ್‌ ನೇತೃತ್ವದ ರಾಜ್ಯ ಸರ್ಕಾರ ಹಿಂಪಡೆದಿದೆ.

ಕೇಂದ್ರ ಹಾಗೂ ರಾಜ್ಯಗಳಲ್ಲಿ ಭಿನ್ನ ಪಕ್ಷಗಳು ಅಧಿಕಾರದಲ್ಲಿದ್ದಾಗ ಉದ್ಭವಿಸುವ ಸಂಘರ್ಷಗಳಿಂದಾಗಿ ಕೇಂದ್ರದಲ್ಲಿನ ಸರ್ಕಾರವು ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳನ್ನು ಅಸ್ಥಿರಗೊಳಿಸಲು ಸಿಬಿಐ ಅನ್ನು ಬಳಸಿಕೊಳ್ಳುತ್ತದೆ ಎನ್ನುವಂತಹ ಅಪಾದನೆಗಳು ರಾಜಕಾರಣದಲ್ಲಿ ಸಾಮಾನ್ಯವಾಗಿ ಕೇಳಿಬರುವ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ, ಕಳೆದ ಕೆಲವು ವರ್ಷಗಳಲ್ಲಿ ದೇಶಾದ್ಯಂತ ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಿಬಿಐ ತನಿಖೆಗೆ ನೀಡಿರುವ ಅನುಮತಿಯನ್ನು ಅಲ್ಲಿನ ಸರ್ಕಾರಗಳು ಹಿಂಪಡೆದಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

ನವೆಂಬರ್‌ 8ರಂದು ಹೊರಡಿಸಿರುವ ಆದೇಶದಲ್ಲಿ ಪಂಜಾಬ್‌ನಲ್ಲಿರುವ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರವು ಹೀಗೆ ಹೇಳಿದೆ:

“ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ (ಡಿಎಸ್‌ಪಿಇ) ಕಾಯಿದೆ 1946ರ (1946ರ ಕೇಂದ್ರ ಕಾಯಿದೆ 25) ಸೆಕ್ಷನ್‌ 6ರ ಅನ್ವಯ ದೆಹಲಿಯ ವಿಶೇಷ ಪೊಲೀಸ್‌ ದಳದ ಸದಸ್ಯರಿಗೆ ಪಂಜಾಬ್‌ ಸರ್ಕಾರವು ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಈ ಮೂಲಕ ಹಿಂಪಡೆಯಲಾಗಿದೆ” ಎಂದು ಹೇಳಿದೆ.

ಹಿಂದೆ ನೀಡಲಾಗಿದ್ದ ಸಾಮಾನ್ಯ ಒಪ್ಪಿಗೆ ರದ್ದಾಗಿದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ. ರಾಜ್ಯ ಸರ್ಕಾರವು ಸಿಬಿಐಗೆ ತನಿಖೆ ನಡೆಸಲು ನೀಡಿದ್ದ ಸಾಮಾನ್ಯ ಅನುಮತಿ ಹಿಂಪಡೆದಿರುವುದರಿಂದ ರಾಜ್ಯ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಪ್ರತೀ ಪ್ರಕರಣಕ್ಕೂ ಕಾಯಿದೆಯ ಸೆಕ್ಷನ್‌ 3ರ ಅಡಿ ತನಿಖೆಗೂ ಪೂರ್ವದಲ್ಲಿ ಸಿಬಿಐ ಅನುಮತಿ ಕೋರುವುದು ಕಡ್ಡಾಯವಾಗಲಿದೆ” ಎಂದು ಹೇಳಲಾಗಿದೆ.

Also Read
ರಾಜ್ಯ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದ ಕೇರಳ ಸರ್ಕಾರ

ಜಾರ್ಖಂಡ್‌ ಮತ್ತು ಕೇರಳ ರಾಜ್ಯಗಳು ಈಚೆಗೆ ಸಿಬಿಐ ಸಂಬಂಧಿತ ರಾಜ್ಯಗಳಲ್ಲಿ ತನಿಖೆ ನಡೆಸಲು ನಿರ್ಬಂಧ ಹೇರಿದ್ದವು. ಉತ್ತರ ಪ್ರದೇಶ ಸರ್ಕಾರವು ಟಿಆರ್‌ಪಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಸಿಬಿಐಗೆ ನೀಡಿದ್ದ ಸಾಮಾನ್ಯ ಅನುಮತಿಯನ್ನು ಹಿಂಪಡೆದಿತ್ತು.

ಕಳೆದ ಜುಲೈನಲ್ಲಿ ರಾಜಸ್ಥಾನ ಹಾಗೂ 2018 ಮತ್ತು 2019ರಲ್ಲಿ ಕ್ರಮವಾಗಿ ಪಶ್ಚಿಮ ಬಂಗಾಳ ಮತ್ತು ಛತ್ತೀಸಗಢ ರಾಜ್ಯಗಳು ಸಿಬಿಐಗೆ ರಾಜ್ಯ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಸಮ್ಮತಿ ಹಿಂಪಡೆದಿದ್ದವು. ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತೃತ್ವದ ಟಿಡಿಪಿಯು 2018ರಲ್ಲಿ ರಾಜ್ಯದಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದಿತ್ತು. ಬಳಿಕ ಅಧಿಕಾರಕ್ಕೆ ಬಂದ ವೈಎಸ್‌ಆರ್‌ ಕಾಂಗ್ರೆಸ್‌ನ ಜಗನ್‌ ಮೋಹನ್‌ ರೆಡ್ಡಿ ಮತ್ತೆ ಸಿಬಿಐಗೆ ಅನುಮತಿ ನೀಡಿದರು.

Kannada Bar & Bench
kannada.barandbench.com