ರಾಮನವಮಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸಿದ ಕಲ್ಕತ್ತಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ [ಪಶ್ಚಿಮ ಬಂಗಾಳ ಸರ್ಕಾರ ಮತ್ತು ಸುವೆಂದು ಅಧಿಕಾರಿ ನಡುವಣ ಪ್ರಕರಣ].
ಎನ್‌ಐಎ ಕಾಯಿದೆಯ ಸೆಕ್ಷನ್ 6 (5) ರ ಅಡಿಯಲ್ಲಿ ಹೊರಡಿಸಲಾದ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿಲ್ಲ ಎನ್ನುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಇಂದು ಈ ಆದೇಶ ನೀಡಿತು.
"ಎನ್‌ಐಎ ನಡೆಸಬೇಕಾದ ತನಿಖೆಯ ನಿಖರವಾದ ರೂಪುರೇಖೆಗಳನ್ನು ಈ ಹಂತದಲ್ಲಿ ನಿರೀಕ್ಷಿಸಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮತ್ತು ಕೇಂದ್ರ ಸರ್ಕಾರದ ಅಧಿಸೂಚನೆಗೆ ಸವಾಲು ಇಲ್ಲದಿರುವ ಕಾರಣಕ್ಕೆ ವಿಶೇಷ ಅನುಮತಿ ಅರ್ಜಿಯನ್ನು ಪರಿಗಣಿಸುವುದಿಲ್ಲ," ಎಂದು ನ್ಯಾಯಾಲಯ ಹೇಳಿದೆ.
ಕಳೆದ ಮಾರ್ಚ್‌ನಲ್ಲಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಎನ್ಐಎ ತನಿಖೆಗೆ ಏಪ್ರಿಲ್ 2023ರಂದು ನಿರ್ದೇಶಿಸಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶ ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಸರ್ಕಾರವು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಬಿಜೆಪಿಯ ಮುಖಂಡ ಸುವೇಂದು ಅಧಿಕಾರಿ ಮತ್ತು ಪ್ರಿಯಾಂಕ ಟಿಬ್ರೆವಾಲ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ಎನ್‌ಐಎ ತನಿಖೆಗೆ ಆದೇಶಿಸಿತ್ತು.
ಘಟನೆ ನಿಗದಿತ ಅಪರಾಧಗಳನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆ ನಡೆಸಬಹುದು ಎಂದು ಸಿಜೆಐ ನೇತೃತ್ವದ ಪೀಠ ಕಳೆದ ಮೇನಲ್ಲಿ ತಿಳಿಸಿತ್ತು.