ಮದುವೆಯಾಗುವುದಾಗಿ ಹೇಳಿ ವಚನಭ್ರಷ್ಟನಾದ ಪ್ರಿನ್ಸ್‌ ಹ್ಯಾರಿ! ಮಹಿಳೆಯ ಅರ್ಜಿಯನ್ನು 'ಹಗಲುಗನಸು' ಎಂದ ನ್ಯಾಯಾಲಯ

ಸಾಮಾಜಿಕ ಮಾಧ್ಯಮದ ಮೂಲಕ ಹ್ಯಾರಿ ಜೊತೆ ಮಾತನಾಡಿರುವುದಾಗಿ ಹೇಳಿದ ಮಹಿಳೆಗೆ ಪೀಠವು, “ಪಂಜಾಬ್‌ನ ಹಳ್ಳಿಯೊಂದರ ಸೈಬರ್‌ ಕೆಫೆಯಲ್ಲಿಯೇ ಕೂತು ರಾಜಕುಮಾರ ಹ್ಯಾರಿ ಎಂಬಾತ ಹಸಿರು ಹುಲ್ಲುಗಾವಲನ್ನು ಹುಡುಕಿರುವ ಸಾಧ್ಯತೆಯ ಅಲ್ಲಗಳೆಯಲಾಗದು” ಎಂದಿತು!
Prince Harry and Punjab and Haryana High Court
Prince Harry and Punjab and Haryana High Court

ಬ್ರಿಟನ್‌ನ ರಾಜಕುಮಾರ ಹ್ಯಾರಿಯು ತನಗೆ ಮದುವೆಯಾಗುವುದಾಗಿ ವಚನ ನೀಡಿ ವಿಮುಖನಾಗಿದ್ದಾನೆ ಎನ್ನುವ ಅರ್ಜಿದಾರ ಮಹಿಳೆಯೊಬ್ಬರ ವಾದವನ್ನು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ನ್ಯಾಯಾಲಯವು 'ಹಗಲುಗನಸು ಕಾಣುವವರ ರಮ್ಯಕಲ್ಪನೆ' ಎಂದು ಹೇಳಿ ವಜಾಗೊಳಿಸಿದ ಪ್ರಕರಣ ನಡೆದಿದೆ.

ವಿವಾಹವಾಗುವುದಾಗಿ ನಂಬಿಸಿ ಕೈಕೊಡುವುದಕ್ಕೂ ಮುನ್ನ ಬ್ರಿಟನ್‌ ರಾಜಕುಮಾರ ಹ್ಯಾರಿಯು ತಮ್ಮ ಜೊತೆ ಸಾಮಾಜಿಕ ಮಾಧ್ಯಮದ ಮೂಲಕ ಸಂವಹನ ನಡೆಸಿರುವುದಾಗಿ ಅರ್ಜಿದಾರೆಯೂ ಆದ ವಕೀಲೆಯು ನ್ಯಾಯಾಲಯದ ಮುಂದೆ ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅರವಿಂದ್‌ ಸಿಂಗ್‌ ಸಾಂಗ್ವಾನ್‌ ಅವರಿದ್ದ ಏಕಸದಸ್ಯ ಪೀಠವು, ಫೇಸ್‌ಬುಕ್‌, ಟ್ವಿಟರ್‌ ಇತ್ಯಾದಿ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆ ಸೃಷ್ಟಿಸಿರುವವರ ಜೊತೆ ಮಹಿಳೆ ಸಂವಹನ ನಡೆಸಿರಬಹುದು. ಇದನ್ನು ಆಧರಿಸಿ ನ್ಯಾಯಾಲಯವು ನಿರ್ಣಯ ಕೈಗೊಳ್ಳಲಾಗದು ಎಂದು ಹೇಳಿದೆ.

“ಪಂಜಾಬ್‌ನ ಹಳ್ಳಿಯೊಂದರ ಸೈಬರ್‌ ಕೆಫೆಯಲ್ಲಿಯೇ ಕೂತು ರಾಜಕುಮಾರ ಹ್ಯಾರಿ ಎಂಬಾತ ಹಸಿರು ಹುಲ್ಲುಗಾವಲನ್ನು ಹುಡುಕಿರುವ ಸಾಧ್ಯತೆಯ ಅಲ್ಲಗಳೆಯಲಾಗದು” ಎಂದು ಈ ವೇಳೆ ಪೀಠವು ಅಭಿಪ್ರಾಯಪಟ್ಟಿತು.

ವಿವಾಹವಾಗುವುದಾಗಿ ವಾಗ್ದಾನ ನೀಡಿ ಅದನ್ನು ಈಡೇರಿಸದ ರಾಜಕುಮಾರ ಹ್ಯಾರಿ ವಿರುದ್ಧ ಕಾನೂನು ಕ್ರಮಕ್ಕೆ ಅರ್ಜಿದಾರ ವಕೀಲೆ ಕೋರಿದ್ದರು. ಹ್ಯಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬ್ರಿಟನ್‌ ಪೊಲೀಸರಿಗೆ ನಿರ್ದೇಶಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಹ್ಯಾರಿಗೆ ಬಂಧನ ವಾರೆಂಟ್‌ ಹೊರಡಿಸುವ ಮೂಲಕ ವಿವಾಹ ಮತ್ತಷ್ಟು ತಡವಾಗುವುದನ್ನು ತಪ್ಪಿಸಬಹುದು ಎನ್ನುವುದು ಅರ್ಜಿದಾರೆಯೂ ಆದ ನೊಂದ ವಕೀಲೆಯ ವಾದವಾಗಿತ್ತು!

ಅರ್ಜಿದಾರರು ಎಂದಾದರು ಬ್ರಿಟನ್‌ಗೆ ಭೇಟಿ ನೀಡಿದ್ದರೇ? ಎಂದು ನ್ಯಾಯಾಲಯ ಪ್ರಶ್ನಿಸಿದಾಗ 'ಇಲ್ಲ' ಎನ್ನುವ ಉತ್ತರ ಬಂದಿತು. ಆದರೆ, ಸಾಮಾಜಿಕ ಮಾಧ್ಯಮದ ಮೂಲಕ ತಾವು ಸಂವಹನ ನಡೆಸಿರುವುದಾಗಿ ಅರ್ಜಿದಾರರು ತಿಳಿಸಿದರು.

ಹ್ಯಾರಿ ಅವರ ತಂದೆ ರಾಜಕುಮಾರ ಚಾರ್ಲ್ಸ್‌ ಅವರಿಗೂ ತಾನು ಸಂದೇಶ ಕಳುಹಿಸಿರುವುದಾಗಿ ಅರ್ಜಿದಾರೆ ನ್ಯಾಯಾಲಯದ ಗಮನಕ್ಕೆ ತಂದರು. “ಮನವಿಯಲ್ಲಿ ಯಾವುದೇ ಸತ್ವವಿಲ್ಲ. ಇದು ರಾಜಕುಮಾರ ಹ್ಯಾರಿಯನ್ನು ವರಿಸುವ ಹಗಲುಗನಸು ಕಾಣುವವರ ರಮ್ಯ ಕಲ್ಪನೆಯಾಗಿದೆ. ಅರ್ಜಿಯನ್ನು ಕಳಪೆಯಾಗಿ ಸಿದ್ಧಪಡಿಸಲಾಗಿದ್ದು, ಸಾಕಷ್ಟು ವ್ಯಾಕರಣ ದೋಷಗಳಿಂದ ತುಂಬಿದೆ. ಅಲ್ಲದೆ, ಕೋರಿಕೆ ಸಲ್ಲಿಸಲು ಅಗತ್ಯವಾದ ಅರಿವೂ ಇದರಲ್ಲಿ ಇಲ್ಲದಿರುವುದು ಎದ್ದು ಕಾಣುತ್ತದೆ. ಅರ್ಜಿದಾರೆ ಮತ್ತು ರಾಜಕುಮಾರ ಹ್ಯಾರಿ ನಡುವಿನ ಇಮೇಲ್‌ ರವಾನೆಯ ಕುರಿತು ಅರ್ಜಿಯು ತಿಳಿಸುತ್ತದೆ. ಇಮೇಲ್‌ ಕಳುಹಿಸಿರುವ ವ್ಯಕ್ತಿಯು ಶೀಘ್ರದಲ್ಲೇ ವಿವಾಹವಾಗುವುದಾಗಿ ತಿಳಿಸಿದ್ದಾನೆ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಅರ್ಜಿಯ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ.

Also Read
ನೀರವ್ ಮೋದಿ ಪ್ರಕರಣ: ಬ್ಯಾಂಕ್, ಕೇಂದ್ರ ಸರ್ಕಾರದ ಕಾರ್ಯವೈಖರಿ ಕುರಿತು ಬ್ರಿಟನ್ ನ್ಯಾಯಾಲಯ ಹೇಳಿದ್ದೇನು?

ಹೀಗೆ ನಡೆದಿದೆ ಎನ್ನಲಾದ ಸಂವಹನದ ಪ್ರತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅವುಗಳೂ ಸಹ ನೈಜ ಪ್ರತಿಗಳಲ್ಲ. ಅದರಲ್ಲಿ ಕೆಲವೊಂದು ಭಾಗವನ್ನು ಡಿಲೀಟ್‌ ಮಾಡಲಾಗಿದೆ. ಹೀಗಾಗಿ ಅದನ್ನು ಆಧಾರವಾಗಿ ಇಟ್ಟುಕೊಳ್ಳಲಾಗದು. ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ನಕಲಿ ಖಾತೆಗಳು ಸಾಮಾನ್ಯ ಎಂದು ನ್ಯಾಯಾಲಯವು ಹೇಳಿದೆ.

“ಮೇಲಿನ ವಿಚಾರಗಳನ್ನು ಗಮನಿಸಿದ ಬಳಿಕ ಈ ಮನವಿಯನ್ನು ವಿಚಾರಣೆ ಮಾಡಲಾಗದು. ಅರ್ಜಿದಾರೆಯು ನಕಲಿ ಸಂಭಾಷಣೆಯನ್ನು ಸತ್ಯ ಎಂದು ಭಾವಿಸಿರುವುದಕ್ಕೆ ಮರುಕ ವ್ಯಕ್ತಪಡಿಸಬಹುದಷ್ಟೆ” ಎಂದು ಹೇಳಿದ ಪೀಠವು ಮನವಿಯನ್ನು ವಜಾಗೊಳಿಸಿತು.

Related Stories

No stories found.
Kannada Bar & Bench
kannada.barandbench.com