ವಿಧೇಯಕಗಳಿಗೆ ಒಪ್ಪಿಗೆ ನೀಡಲು ವಿಳಂಬ: ರಾಜ್ಯಪಾಲರುಗಳ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಪಂಜಾಬ್, ತಮಿಳುನಾಡು

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ರಾಜ್ಯಪಾಲರು ಮತ್ತು ಕೆಲ ರಾಜ್ಯ ಸರ್ಕಾರಗಳ ಮನಸ್ತಾಪ ಕಳೆದ ಕೆಲ ತಿಂಗಳುಗಳಲ್ಲಿ ಅನೇಕ ನ್ಯಾಯಾಲಯ ಹೋರಾಟಗಳಿಗೆ ಎಡೆ ಮಾಡಿಕೊಟ್ಟಿದೆ.
Supreme Court, Punjab and Tamil Nadu
Supreme Court, Punjab and Tamil Nadu

ವಿಧಾನಸಭೆ ಅಂಗೀಕರಿಸಿದ ಅಥವಾ ಮಂಡಿಸಲು ಉದ್ದೇಶಿಸಲಾದ ವಿಧೇಯಕಗಳಿಗೆ ಒಪ್ಪಿಗೆ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ತಮ್ಮ ರಾಜ್ಯಪಾಲರುಗಳ ವಿರುದ್ಧ ಪಂಜಾಬ್ ಮತ್ತು ತಮಿಳುನಾಡು ಸರ್ಕಾರಗಳು ಸುಪ್ರೀಂ ಕೋರ್ಟ್‌ ಕದ ತಟ್ಟಿವೆ.

ಈ ಸಂಬಂಧ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದ್ದು ಎರಡೂ ರಾಜ್ಯಗಳು ತಮ್ಮ ರಾಜ್ಯಪಾಲರ ಮುಂದೆ ಅನುಮೋದನೆಗಾಗಿ ಬಾಕಿ ಇರುವ ವಿಧೇಯಕಗಳನ್ನು ಸಕಾಲಿಕವಾಗಿ ವಿಲೇವಾರಿ ಮಾಡಲು ನ್ಯಾಯಾಲಯ ಮಧ್ಯಸ್ಥಿಕೆ ವಹಿಸುವಂತೆ ಕೋರಿವೆ. ಎರಡೂ ಅರ್ಜಿಗಳನ್ನು ಅಕ್ಟೋಬರ್ 28 ರಂದು ಸಲ್ಲಿಸಲಾಗಿದೆ.

ಪಂಜಾಬ್‌ ಸರ್ಕಾರದ ಅರ್ಜಿಯ ವಿಚಾರಣೆಗೆ ನ್ಯಾಯಾಲಯದ ಒಪ್ಪಿಗೆ ದೊರೆತಿದ್ದು ತಮಿಳುನಾಡು ಅರ್ಜಿಯ ಬಗೆಗಿನ ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ.

ಆಮ್ ಆದ್ಮಿ ಪಕ್ಷ (ಎಎಪಿ) ನೇತೃತ್ವದ ಸರ್ಕಾರದ ಅಧಿಕಾರಾವಧಿಯಲ್ಲಿ ಪಂಜಾಬ್ ವಿಧಾನಸಭೆ ಅಂಗೀಕರಿಸಿದ 27 ಮಸೂದೆಗಳಲ್ಲಿ 22ಕ್ಕೆ ಮಾತ್ರ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಒಪ್ಪಿಗೆ ನೀಡಿದ್ದಾರೆ.

ವಿಶೇಷ ಅಧಿವೇಶನಕ್ಕೆ ಮುಂಚಿತವಾಗಿ ಪೂರ್ವಾನುಮೋದನೆಗಾಗಿ ರಾಜ್ಯ ಸರ್ಕಾರ ಮೂರು ಹಣಕಾಸು ಮಸೂದೆಗಳನ್ನು ರವಾನಿಸಿದ್ದರೂ ರಾಜ್ಯಪಾಲ ಪುರೋಹಿತ್‌ ಅವರು ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈ ರೀತಿಯ ವಿಸ್ತೃತ ಅಧಿವೇಶನ ಕಾನೂನುಬಾಹಿರವಾಗಿದ್ದು ಆ ಸಮಯದಲ್ಲಿ ನಡೆಯುವ ಯಾವುದೇ ವ್ಯವಹಾರ ಕೂಡ ಅಕ್ರಮ ಎಂದಿದ್ದರು. ಪರಿಣಾಮ ಕಲಾಪ ಮುಂದೂಡಲಾಗಿತ್ತು. ರಾಜ್ಯಪಾಲರ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ತೆರಳಲಾಗುವುದು ಎಂದು ಆಗ ಸಿಎಂ ಮಾನ್‌ ಅವರು ಸದನಕ್ಕೆ ತಿಳಿಸಿದ್ದರು.

ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತಿದೆ ಎಂಬ ಸುದ್ದಿ ಕಳೆದ ವಾರ ಹೊರಬಿದ್ದ ನಂತರ, ಪುರೋಹಿತ್ ಅವರು ಮಾನ್ ಅವರಿಗೆ ಪತ್ರ ಬರೆದು ಮುಂದಿನ ದಿನಗಳಲ್ಲಿ ಉಳಿದ ಮಸೂದೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಭರವಸೆ ನೀಡಿದ್ದರು.

ಸದನದ ಬಜೆಟ್ ಅಧಿವೇಶನ ಕರೆಯಲು ವಿಫಲರಾದ ಕಾರಣ ಪುರೋಹಿತ್ ವಿರುದ್ಧ ಪಂಜಾಬ್ ಸರ್ಕಾರವು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಮಂತ್ರಿಮಂಡಲದ ಸಲಹೆಯಂತೆ ರಾಜ್ಯಪಾಲರು ವಿಧಾನಸಭೆ ಅಧಿವೇಶನ ಕರೆದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಅಂತಿಮವಾಗಿ ಇತ್ಯರ್ಥಪಡಿಸಿತ್ತು.

ಏತನ್ಮಧ್ಯೆ, ತಮಿಳುನಾಡು ಸರ್ಕಾರ ಅಂಗೀಕರಿಸಿದ 12 ಮಸೂದೆಗಳು ರಾಜ್ಯಪಾಲ ಆರ್‌ ಎನ್ ರವಿ ಅವರ ಕಚೇರಿಯಲ್ಲಿ ಬಾಕಿ ಉಳಿದಿವೆ ಎಂದು ಹೇಳಲಾಗಿದೆ.

ರಾಜ್ಯಪಾಲರು ಸಾರ್ವಜನಿಕ ಸೇವಕರ ವಿರುದ್ಧದ ಕಾನೂನು ಕ್ರಮ ಮತ್ತು ವಿವಿಧ ಕೈದಿಗಳ ಅಕಾಲಿಕ ಬಿಡುಗಡೆಗೆ ಸಂಬಂಧಿಸಿದ ಕಡತಗಳ ವಿಲೇವಾರಿ ಮಾಡಿಲ್ಲ ಎಂದು ಅದು ಆರೋಪಿಸಿದೆ.

ನ್ಯಾಯವಾದಿ ಶಬರೀಶ್ ಸುಬ್ರಮಣಿಯನ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ, ರಾಜ್ಯ ಸರ್ಕಾರವು ವಿಧೇಯಕಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದೆ.

ಇದಲ್ಲದೆ, ಸರ್ಕಾರಿಯಾ ಆಯೋಗದ ಶಿಫಾರಸುಗಳನ್ನು ಉಲ್ಲೇಖಿಸಿ, ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಜ್ಯಪಾಲರಿಗೆ ನೀಡುವ ಸಮಯ ಮಿತಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ನೀಡುವಂತೆ ಸರ್ಕಾರ ಕೋರಿದೆ.

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ರಾಜ್ಯಪಾಲರು ಮತ್ತು ಕೆಲ ರಾಜ್ಯ ಸರ್ಕಾರಗಳ ಮನಸ್ತಾಪ ಕಳೆದ ಕೆಲ ತಿಂಗಳುಗಳಲ್ಲಿ ಅನೇಕ ನ್ಯಾಯಾಲಯ ಹೋರಾಟಗಳಿಗೆ ಎಡೆ ಮಾಡಿಕೊಟ್ಟಿದೆ.

ತೆಲಂಗಾಣ ವಿಧಾನಸಭೆ ಅಂಗೀಕರಿಸಿದ ಹತ್ತು ಪ್ರಮುಖ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಜ್ಯಪಾಲೆ ತಮಿಳಿಸಾಯಿ ಸೌಂದರರಾಜನ್ ಅವರಿಗೆ ನಿರ್ದೇಶನ ನೀಡುವಂತೆ ತೆಲಂಗಾಣ ಸರ್ಕಾರ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.

Kannada Bar & Bench
kannada.barandbench.com