ಮಹಿಳೆಯ ವಿಳಾಸ ದುರ್ಬಳಕೆ ಮಾಡಿ ಸಿಮ್‌ ಖರೀದಿಸಿ ಅಶ್ಲೀಲ ವಿಡಿಯೊ ಅಪ್‌ಲೋಡ್‌: ಎಫ್‌ಐಆರ್‌ ರದ್ದತಿಗೆ ಹೈಕೋರ್ಟ್‌ ನಕಾರ

ಮೊಬೈಲ್ ಸೇವೆ ಒದಗಿಸುವ ಸಂಸ್ಥೆಯಿಂದ ಮಾಹಿತಿ ಪಡೆದ ಪೊಲೀಸರಿಗೆ ಹಾಜೀರಾ ಆಸ್ಮಾ ಅವರ ಬೆಂಗಳೂರಿನ ವಿಳಾಸ ನೀಡಿ ಖರೀದಿಸಿದ್ದ ಸಿಮ್ ಬಳಸಿ ವಿಡಿಯೊ ಅಪ್ಲೋಡ್ ಮಾಡಿರುವ ವಿಚಾರ ಗಮನಕ್ಕೆ ಬಂದಿತ್ತು.
Karnataka High Court
Karnataka High Court

ಅಂತರ್ಜಾಲದಲ್ಲಿ ಅಶ್ಲೀಲ ವಿಡಿಯೊ ಅಪ್‌ಲೋಡ್‌ ಮಾಡಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಕೋರಿದ್ದ ದುಬೈನಲ್ಲಿ ನೆಲೆಸಿರುವ ಮಹಿಳೆಯೊಬ್ಬರ ಮನವಿಯನ್ನು ಹೈಕೋರ್ಟ್‌ ಇತ್ತೀಚೆಗೆ ತಿರಸ್ಕರಿಸಿದೆ.

ಬೆಂಗಳೂರು ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಕೋರಿ ಕಳೆದ 13 ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ಹಾಜೀರಾ ಆಸ್ಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾಗೊಳಿಸಿದೆ. ತಮ್ಮ ಬೆಂಗಳೂರಿನ ವಿಳಾಸವನ್ನು ಬಳಸಿ ಸಿಮ್‌ ಕಾರ್ಡ್‌ ಪಡೆದು ಅದನ್ನು ದುರ್ಬಳಕೆ ಮಾಡಲಾಗಿದೆ. ಹಾಗಾಗಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎನ್ನುವುದು ಮಹಿಳೆಯ ಕೋರಿಕೆಯಾಗಿತ್ತು.

ಕೃತ್ಯಕ್ಕೆ ಬಳಕೆಯಾಗಿರುವ ಸಿಮ್ ಕಾರ್ಡ್ ಅನ್ನು ಅರ್ಜಿದಾರರೇ ಖರೀದಿಸಿದ್ದರೋ ಅಥವಾ ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ಮೊಹಮ್ಮದ್ ತಾಹಾ, ಅರ್ಜಿದಾರರ ಫೋಟೊ ಹಾಗೂ ಹೆಸರು ದುರ್ಬಳಕೆ ಮಾಡಿಕೊಂಡು ಸಿಮ್ ಖರೀದಿಸಿದ್ದಾರೋ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ. ಅರ್ಜಿದಾರ ಮಹಿಳೆ ಪೊಲೀಸರ ಮುಂದೆ ಹಾಜರಾಗಿ ತಾವು ಯಾವುದೇ ಸಿಮ್ ಖರೀದಿಸಿಲ್ಲ, ತಮ್ಮ ಹೆಸರಿನಲ್ಲಿ ಮತ್ತೊಬ್ಬರು ಖರೀದಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ದೃಢಪಡಿಸಿದರೆ, ಪೊಲೀಸರು ಅವರ ಹೆಸರನ್ನು ತೆಗೆದು ಸಿಮ್ ಖರೀದಿಸಿದ ವ್ಯಕ್ತಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಯಾಗಿರುವುದರಿಂದ ಪ್ರಕರಣದಲ್ಲಿ ಅವರ ಹೆಸರನ್ನು ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಆಕೆಯೇ ಅಪರಾಧಿ ಎಂದರ್ಥವಲ್ಲ. ಅವರು ಶಂಕಿತ ಆರೋಪಿಯಷ್ಟೇ ಆಗಿದ್ದು, ತನಿಖೆಯ ಉದ್ದೇಶಕ್ಕೆ ಅವರ ಉಪಸ್ಥಿತಿ ಅಗತ್ಯವಾಗಿದೆ. ಆದ್ದರಿಂದ, ಈ ಹಂತದಲ್ಲಿ ಎಫ್ಐಆರ್ ರದ್ದುಪಡಿಸಲಾಗದು ಎಂದಿರುವ ನ್ಯಾಯಾಲಯ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಸಯ್ಯದ್‌ ಪೀರ್‌ ಉಲ್ಲಾ ಶಾ ಖಾದ್ರಿ ಅವರು “ಅರ್ಜಿದಾರೆ ಕಳೆದ 13 ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದಾರೆ. ಹೀಗಿರುವಾಗ ಬೆಂಗಳೂರಿನ ಮನೆಯ ವಿಳಾಸ ನೀಡಿ ಸಿಮ್ ಖರೀದಿಸಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆಕೆಯ ಹೆಸರಿನಲ್ಲಿ ಬೇರೆಯವರು ಸಿಮ್ ಖರೀದಿಸಿದ್ದರೆ ಅದಕ್ಕೆ ಅರ್ಜಿದಾರರು ಜವಾಬ್ದಾರರಲ್ಲ. ಅವರ ವಿರುದ್ಧದ ತನಿಖೆ ಮುಂದುವರಿಸಿದರೆ ಅದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ. ಆದ್ದರಿಂದ, ಎಫ್ಐಆರ್ ರದ್ದುಪಡಿಸಬೇಕು” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಅಪ್ರಾಪ್ತರ ನಗ್ನ ವಿಡಿಯೊಗಳನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದ ಆರೋಪದಲ್ಲಿ ಬೆಂಗಳೂರು ಪೂರ್ವ ವಿಭಾಗದ ಸಿಇಎನ್ ಪೊಲೀಸರು 2021ರ ಜನವರಿ 16ರಂದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67 ಹಾಗೂ 67(ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಮೊಬೈಲ್ ಸೇವೆ ಒದಗಿಸುವ ಸಂಸ್ಥೆಯಿಂದ ಮಾಹಿತಿ ಪಡೆದ ಪೊಲೀಸರಿಗೆ ಹಾಜೀರಾ ಆಸ್ಮಾ ಅವರ ಬೆಂಗಳೂರಿನ ವಿಳಾಸ ನೀಡಿ ಖರೀದಿಸಿದ್ದ ಸಿಮ್ ಬಳಸಿ ವಿಡಿಯೊ ಅಪ್ಲೋಡ್ ಮಾಡಿರುವ ವಿಚಾರ ತಿಳಿದಿತ್ತು. ತನಿಖೆ ಆರಂಭಿಸಿದ್ದ ಪೊಲೀಸರು ಮೊಹಮ್ಮದ್ ತಾಹಾ ಎಂಬಾತನನ್ನು ಶಂಕಿತ ಆರೋಪಿಯಾಗಿ ಗುರುತಿಸಿದ್ದರು. ಆತ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದ. ಪ್ರಕರಣವಿನ್ನೂ ತನಿಖಾ ಹಂತದಲ್ಲಿರುವಾಗಲೇ ಹಾಜೀರಾ ಎಫ್ಐಆರ್ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ನ್ಯಾಯಾಲಯ ನಿರಾಕರಿಸಿದೆ.

Related Stories

No stories found.
Kannada Bar & Bench
kannada.barandbench.com