ವಿಕಲಚೇತನ ಸ್ನೇಹಿಯಲ್ಲದ ಹೊಸ ಬಸ್‌ಗಳ ಖರೀದಿಗೆ ಆಕ್ಷೇಪ: ಬಿಎಂಟಿಸಿ ಹಾಗೂ ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್‌ ನೋಟಿಸ್‌

ಬಾಗಿಲು ಮೂಲಕ ಗಾಲಿ ಕುರ್ಚಿಗಳಿಂದ ಹತ್ತಿ ಇಳಿಯಲು ಅನುಕೂಲವಾಗುವಂತೆ ವ್ಯವಸ್ಥೆ ಇರುವ (ವೀಲ್ ಚೇರ್ ಬೋರ್ಡಿಂಗ್ ಡಿವೈಸ್) ಬಸ್‌ಗಳನ್ನು ಖರೀದಿ ಮಾಡಲು ಆದೇಶಿಸಬೇಕು ಎಂದು ಕೋರಿರುವ ಅರ್ಜಿದಾರರು.
High Court of Karnataka
High Court of Karnataka

ಬೆಂಗಳೂರು ಮಹಾನಗರದ ಸಾರಿಗೆ ಸಂಸ್ಥೆ (ಬಿಎಂಟಿಸಿ) 840 ಹೊಸ ಬಸ್‌ಗಳ ಖರೀದಿಗೆ ಹೊರಡಿಸಿದ್ದ ಟೆಂಡರ್ ಅಧಿಸೂಚನೆಯನ್ನು ಪ್ರಶ್ನಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸೋಮವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಕರ್ನಾಟಕ ಹೈಕೋರ್ಟ್‌ ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.

ಬೆಂಗಳೂರು ನಿವಾಸಿ ವಿಕಲಚೇತನರಾದ ಸುನೀಲ್ ಕುಮಾರ್ ಜೈನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರ ಪರ ವಕೀಲ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಸಾರಿಗೆ ಇಲಾಖೆ, ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ವಿಕಲಚೇತನರ ಸಬಲೀಕರಣ ಇಲಾಖೆ ಮತ್ತು ಬಿಎಂಟಿಸಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಪೋಲಿಯೋ ಕಾರಣಕ್ಕೆ ಅಂಗವೈಕಲ್ಯಕ್ಕೆ ತುತ್ತಾಗಿರುವ ಅರ್ಜಿದಾರರು, ಓಡಾಟಕ್ಕಾಗಿ ಗಾಲಿ ಖುರ್ಚಿಯನ್ನು ಅವಲಂಬಿಸಿದ್ದಾರೆ. ಬಿಎಂಟಿಸಿ 840 ಹೊಸ ಬಸ್‌ಗಳ ಖರೀದಿಗೆ ಟೆಂಡರ್ ಆಹ್ವಾನಿಸಿ 2022ರ ಅಕ್ಟೋಬರ್‌ 28ರಂದು ಅಧಿಸೂಚನೆ ಹೊರಡಿಸಿದೆ. ಇದನ್ನು ಪ್ರಶ್ನಿಸಿರುವ ಅರ್ಜಿದಾರರು ಪ್ರಶ್ನಿಸಿದ್ದಾರೆ. ಖರೀದಿಸಲು ಉದ್ದೇಶಿಸಿರುವ ಬಸ್‌ಗಳ ಚಾಸಿಸ್‌ನ (ತಳಕಟ್ಟು) ಎತ್ತರ, 1,000 ಮಿಲಿ ಮೀಟರ್ ಇರಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಆದರೆ, ಇದು ಮೋಟಾರು ವಾಹನ ಕಾಯಿದೆಯ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ, ಖರೀದಿಸಲು ಉದ್ದೇಶಿಸಿರುವ ಬಸ್‌ಗಳ ಚಾಸಿಸ್‌ನ (ತಳಕಟ್ಟು) ಎತ್ತರ 1,000 ಮಿಲಿ ಮೀಟರ್ ಇರಬೇಕು ಎನ್ನುವುದಕ್ಕೆ ಸೀಮಿತವಾಗಿ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

ನೆಲಮಟ್ಟದಿಂದ 400 ಮಿಲಿ ಮೀಟರ್‌ನಿಂದ 650 ಮಿಮೀ ಎತ್ತರ ಇರುವ ಮತ್ತು ಬಾಗಿಲು ಮೂಲಕ ಗಾಲಿ ಕುರ್ಚಿಗಳಿಂದ ಹತ್ತಿ ಇಳಿಯಲು ಅನುಕೂಲವಾಗುವಂತೆ ವ್ಯವಸ್ಥೆ ಇರುವ (ವೀಲ್ ಚೇರ್ ಬೋರ್ಡಿಂಗ್ ಡಿವೈಸ್) ಬಸ್‌ಗಳನ್ನು ಖರೀದಿ ಮಾಡಲು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಈ ಮಧ್ಯೆ ಅರ್ಜಿ ನ್ಯಾಯಾಲಯದಲ್ಲಿ ಇತ್ಯರ್ಥವಾಗುವರೆಗೆ 840 ಹೊಸ ಬಸ್‌ಗಳ ಖರೀದಿಗೆ ಹೊರಡಿಸಿರುವ ಟೆಂಡರ್ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು. ಇಲ್ಲವೇ ಬಸ್ ಖರೀದಿ ಪ್ರಕ್ರಿಯು ಅರ್ಜಿ ಕುರಿತ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿ ಆದೇಶ ಹೊರಡಿಸಬೇಕು ಎಂದು ಮಧ್ಯಂತರ ಮನವಿಯನ್ನು ಅರ್ಜಿದಾರರು ಮಾಡಿದ್ದಾರೆ.

Kannada Bar & Bench
kannada.barandbench.com