ಮಲ್ಟಿಪ್ಲೆಕ್ಸ್‌ನಲ್ಲಿ ಸಿನೆಮಾ ಟಿಕೆಟ್ ದರದ ಮೇಲೆ ಶೇ. 2ರಷ್ಟು ಸೆಸ್: ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

“ಮೊದಲು ಕಾಯಿದೆ ಜಾರಿಗೆ ಬರಲಿ, ಆ ನಂತರ ಅದರ ನಿಯಮಗಳ ವ್ಯಾಖ್ಯಾನ ಮಾಡೋಣ. ಜಾರಿಯಲ್ಲೇ ಇಲ್ಲದ ಕಾಯಿದೆ ಅಡಿ ಹಣ ಪಾವತಿಸಲು ನೋಟಿಸ್ ನೀಡಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ ಹೈಕೋರ್ಟ್‌.
Cinema Theatre
Cinema Theatre
Published on

ಸಿನಿಮಾ ಹಾಗೂ ಸಾಂಸ್ಕೃತಿಕ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಅನುದಾನ ಒದಗಿಸಲು ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ನಲ್ಲಿ ಸಿನೆಮಾ ಟಿಕೆಟ್ ದರದ ಮೇಲೆ ಶೇ. 2ರಷ್ಟು ಸೆಸ್ ವಿಧಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಬುಧವಾರ ಕರ್ನಾಟಕ ಹೈಕೋರ್ಟ್ ವಿವರಣೆ ಕೇಳಿದೆ.

ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಮಿಕರ ಸಾಮಾಜಿಕ ಭದ್ರತಾ (ಕಲ್ಯಾಣ) ಕಾಯಿದೆ - 2024ರಡಿ 2026ರ ಸೆಪ್ಟೆಂಬರ್‌ 1ರಿಂದ ಕಡ್ಡಾಯವಾಗಿ ಟಿಕೆಟ್ ದರದ ಮೇಲೆ ಶೇ.2ರಷ್ಟು ಸೆಸ್ ಸಂಗ್ರಹ ಮಾಡಬೇಕು ಎಂದು ರಾಜ್ಯ ಸರ್ಕಾರದ ಪರವಾಗಿ ಕಾರ್ಮಿಕ ಆಯುಕ್ತರು 2026ರ ಆಗಸ್ಟ್ 29ರಂದು ಹೊರಡಿಸಿರುವ ಸುತ್ತೋಲೆ ರದ್ದುಪಡಿಸುವಂತೆ ಕೋರಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಪಿವಿಆರ್ ಐನಾಕ್ಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಚ್ ಟಿ ನರೇಂದ್ರಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ಪೀಠವು ರಾಜ್ಯ ಸರ್ಕಾರ, ಕಾರ್ಮಿಕ ಇಲಾಖೆ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು. ಅರ್ಜಿಯಲ್ಲಿ ಆಕ್ಷೇಪಿಸಲಾದ ವಿಷಯದ ಬಗ್ಗೆ ವಿವರಣೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್‌ 10 (ಗುರುವಾರ)ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ವಾದ ಮಂಡಿಸಿ, ಕಾಯಿದೆಯ ಸೆಕ್ಷನ್ 1(2)ರ ಪ್ರಕಾರ ಸರ್ಕಾರವು ಈ ಕಾಯಿದೆ ಎಂದು ಜಾರಿಗೆ ಬರಲಿದೆ ಎಂದು ಪ್ರತ್ಯೇಕ ಅಧಿಕೃತ ಅಧಿಸೂಚನೆ ಹೊರಡಿಸಬೇಕು. ಆದರೆ, ಸರ್ಕಾರ ಇನ್ನೂ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ಹೀಗಿದ್ದರೂ ಕಾಯಿದೆ ಜಾರಿಯಲ್ಲಿದೆ ಎಂದು ನೋಟಿಸ್ ಕಳುಹಿಸಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಪೀಠಕ್ಕೆ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಮೊದಲು ಕಾಯಿದೆ ಜಾರಿಗೆ ಬರಲಿ, ಆ ನಂತರ ಅದರ ನಿಯಮಗಳ ವ್ಯಾಖ್ಯಾನ ಮಾಡೋಣ. ಜಾರಿಯಲ್ಲೇ ಇಲ್ಲದ ಕಾಯಿದೆ ಅಡಿ ಹಣ ಪಾವತಿಸಲು ನೋಟಿಸ್ ನೀಡಲು ಹೇಗೆ ಸಾಧ್ಯ?” ಎಂದು ಮೌಖಿಕವಾಗಿ ಪ್ರಶ್ನಿಸಿತು. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ನಾಳೆಗೆ ಮುಂದೂಡಿತು.

Kannada Bar & Bench
kannada.barandbench.com