ಪಿಎಂಎಲ್ಎ ಆರೋಪಿಗಳಿಗೆ ದೀರ್ಘಾವಧಿ ಸೆರೆವಾಸ: ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್

ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಗಳನ್ನು ಸುಪ್ರೀಂ ಕೋರ್ಟ್ ಇದೀಗ ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಿದ್ದರೂ ಹೈಕೋರ್ಟ್‌ಗಳು ಜಾಮೀನು ನೀಡುತ್ತಿಲ್ಲ. ಇದು ದುರದೃಷ್ಟಕರ ಎಂದು ಅವರು ಹೇಳಿದರು.
Atmaram Nadkarni
Atmaram Nadkarni
Published on

ವಿಚಾರಣೆಯಿಲ್ಲದೆ ಅಕ್ರಮ ಹಣ ವರ್ಗಾವಣೆ ಆರೋಪಿಗಳನ್ನು ಜೈಲಿನಲ್ಲಿ ಇರಿಸುವ ಜಾರಿ ನಿರ್ದೇಶನಾಲಯದ (ಇ ಡಿ) ನಡೆಯನ್ನು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಆತ್ಮರಾಮ್ ನಾಡಕರ್ಣಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಗೋವಾದಲ್ಲಿ ಶನಿವಾರ ನಡೆದ ಪ್ರಪ್ರಥಮ ಅಂತರರಾಷ್ಟ್ರೀಯ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ ಕಾನೂನು ಸಮಾವೇಶದಲ್ಲಿ ಅವರು ಮಾತನಾಡಿದರು.

ಆರೋಪಿಗಳು ಜೈಲಿನೊಳಗೆ ವಿಚಾರಣೆ ಎದುರು ನೋಡುತ್ತಿರುವಾಗ ಪ್ರಕರಣಗಳ ತನಿಖೆಗೆ ಇ ಡಿ ವಿಳಂಬ ಮಾಡಬಾರದು ಎಂದು ಅವರು ಆಗ್ರಹಿಸಿದರು.  ಇ ಡಿ ವರ್ಷಾನುಗಟ್ಟಲೆ ತನಿಖೆ ಮಾಡುವಂತಿಲ್ಲ. ತನಿಖೆ ಬಳಿಕ ವ್ಯಕ್ತಿಗಳನ್ನು ಅದು ಬಿಡುಗಡೆ ಮಾಡಬೇಕಾಗುತ್ತದೆ ಎಂದರು.

ಇ ಡಿ ತನ್ನ ಯಜಮಾನನ ಅಣತಿಗೆ ತಕ್ಕಂತೆ ಕೆಲಸ ಮಾಡುತ್ತದೆ. ಇದನ್ನು ಬಹಿರಂಗವಾಗಿ ಹೇಳುತ್ತಿದ್ದೇನೆ. ಏಕೆಂದರೆ ಇಂತಹ ವಿಚಾರ ಬಹಿರಂಗವಾಗಿ ಹೇಳುವವರು ಬೇಕು. ಜನ ಇದನ್ನು ಹೇಳದಿರುವುದು ಅತ್ಯಂತ ದುರದೃಷ್ಟಕರ.
ಆತ್ಮರಾಮ್ ನಾಡಕರ್ಣಿ

ನಾಡಕರ್ಣಿ ಅವರ ಭಾಷಣದ ಪ್ರಮುಖಾಂಶಗಳು

  • ಇ ಡಿಯ ಅಧಿಕಾರ ಎಂಬುದು ಅದು ಯಾರಿಗೆ ನಿಷ್ಠವಾಗಿರುತ್ತದೋ ಅವರನ್ನು ಅವಲಂಬಿಸಿರುತ್ತದೆ. ಆದ್ದರಿಂದ ಅದು ತನ್ನ ಮಾಲೀಕನ ಧ್ವನಿಗೆ ಅನುಗುಣವಾಗಿ ಕೆಲಸ ಮಾಡುತ್ತದೆ.  

  • ಬೇರೆ ಉದ್ದೇಶಗಳಿಗಾಗಿ ವ್ಯವಸ್ಥೆಯನ್ನು ಬಳಸಿದರೆ ನನ್ನ ರಕ್ತ ಕುದಿಯುತ್ತದೆ.

  • ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿದ್ದ ದಿನದಿಂದಲೂ ನಾನು ಈ ವಿಚಾರ ಹೇಳುತ್ತಿದ್ದೇನೆ.

  • ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಗಳನ್ನು ಸುಪ್ರೀಂ ಕೋರ್ಟ್ ಈಗ ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಿದ್ದರೂ ಹೈಕೋರ್ಟ್‌ಗಳು ಜಾಮೀನು ನೀಡುತ್ತಿಲ್ಲ. ಇದು ದುರದೃಷ್ಟಕರ.

  • ಜಾಮೀನು ನೀಡುವ ವಿಚಾರ ಕೂಡ ಪ್ರಕರಣದಿಂದ ಪ್ರಕರಣಕ್ಕೆ ಭಿನ್ನವಾಗಿರುತ್ತದೆ.

  • ನಿಯಂತ್ರಣ ವ್ಯವಸ್ಥೆಯೇ ಭ್ರಷ್ಟಾಚಾರವನ್ನು ಹುಟ್ಟುಹಾಕುತ್ತದೆ ಎಂಬುದು ನ್ಯಾಯಾಂಗಕ್ಕೆ ಚೆನ್ನಾಗಿ ತಿಳಿದಿದೆ  ಆದರೆ ಅದನ್ನು ನ್ಯಾಯಾಲಯ ಒಪ್ಪಿಕೊಳ್ಳುವುದಿಲ್ಲ.

  • ಪಿಎಂಎಲ್‌ಎಯನ್ನು 2002ರಲ್ಲಿ ಬಿಜೆಪಿ ರೂಪುಗೊಳಿಸಿದಾಗ ಹೆಚ್ಚಿನ ಜನ ಪ್ರತಿನಿಧಿಗಳಿಗೆ ಅದರ ಪರಿಣಾಮಗಳ ಬಗ್ಗೆ ತಿಳಿದಿರಲಿಲ್ಲ. ಯುಪಿಎ ಸರ್ಕಾರ ಅಧಿಕಾರ ಹಿಡಿದು ಪಿ ಚಿದಂಬರಂ ಹಣಕಾಸು ಸಚಿವರಾದಾಗ ಕಾಯಿದೆ ಜಾರಿಗೆ ಬಂದಿತು. ಆದರೆ ಇದೇ ಕಾಯಿದೆಗೆ ಚಿದಂಬರಂ ಖುದ್ದು ಈಡಾದರು. 2018ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಯಿತು.

  • ಇ ಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತದೆ. ಆದರೆ ಅದನ್ನು ಎಂದಿಗೂ ಮರಳಿಸುವುದಿಲ್ಲ.

  • ಕೆಲವೊಮ್ಮೆ ಅಪರಾಧಕ್ಕೆ ಸಂಬಂಧಿಸದ ಆರೋಪಿಯ ಪೂರ್ವಜರ ಆಸ್ತಿಗಳನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

  • ಅಂತಹ ಸಂದರ್ಭಗಳಲ್ಲಿ ನ್ಯಾಯಾಂಗವೇ ಆರೋಪಿಗಳ ಪಾಲಿನ ಏಕೈಕ ಆಸರೆ.

  • ಹಾಗಾಗಿ ಇಂತಹ ಸಂದರ್ಭಗಳಲ್ಲಿ ನ್ಯಾಯಾಂಗ ಇನ್ನು ಮುಂದೆ ಸಕ್ರಿಯವಾಗಿ ತೊಡಗಿಕೊಳ್ಳಲಿದೆ ಎಂಬ ಭರವಸೆ ಇದೆ.  

ನ್ಯಾಯದ ಗುಣಮಟ್ಟ ಎಒಆರ್‌ಗಳನ್ನು ಆಧರಿಸಿದೆ: ನ್ಯಾ. ಓಕಾ

Justice AS Oka
Justice AS Oka

ಸಮಾವೇಶದಲ್ಲಿ ಎರಡನೇ ದಿನವಾದ ಭಾನುವಾರ ಮಾತನಾಡಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎ ಎಸ್‌ ಓಕಾ ಅವರು ಸುಪ್ರೀಂ ಕೋರ್ಟ್‌ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ ಅವರ ಗುಣಮಟ್ಟದ ಮೇಲೆ ನ್ಯಾಯದ ಗುಣಮಟ್ಟ ನಿಂತಿದೆ ಎಂದು ಬಣ್ಣಿಸಿದರು.

ಅರ್ಜಿಗಳು ಸಮಗ್ರವಾಗಿದ್ದಾಗ, ಸಂಬಂಧಪಟ್ಟ ದಿನಾಂಕಗಳು ಮತ್ತು ದಾಖಲೆಗಳನ್ನು ಸರಿಯಾಗಿ ಲಗತಿಸಿದ್ದರೆ ಪ್ರಕರಣದ ಅನಗತ್ಯ ಮುಂದೂಡಿಕೆ ತಪ್ಪುತ್ತದೆ ಎಂದು ಅವರು ಹೇಳಿದರು.

ನ್ಯಾಯದ ಗುಣಮಟ್ಟ ಹೆಚ್ಚಿಸುವುದು ಕೇವಲ ನ್ಯಾಯಾಂಗವನ್ನು ಆಧರಿಸಿರದೆ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ಗಳ ಶ್ರದ್ಧೆ ಮತ್ತು ವೃತ್ತಿಪರತೆಯನ್ನು ಅವಲಂಬಿಸಿರುತ್ತದೆ ಎಂದರು.

Kannada Bar & Bench
kannada.barandbench.com