ಮುಡಾ ಮಾಜಿ ಆಯುಕ್ತ ನಟೇಶ್‌ಗೆ ನೀಡಿದ್ದ ಸಮನ್ಸ್‌ ವಜಾ: ಇ ಡಿ ಮೇಲ್ಮನವಿ ವಿಚಾರಣೆಗೆ ಪರಿಗಣಿಸಿದ ಹೈಕೋರ್ಟ್‌

'ನಂಬಲರ್ಹ ಕಾರಣ’ಗಳು ಇಲ್ಲದೇ ಇರುವುದರಿಂದ ನಟೇಶ್‌ ಅವರ ಮನೆಯಲ್ಲಿ ಶೋಧ ನಡೆಸಿ, ಜಫ್ತಿ ಮಾಡಿದ್ದು ಹಾಗೂ ಆನಂತರ ಪಿಎಂಎಲ್‌ ಸೆಕ್ಷನ್‌ 17(1)(f) ಅಡಿ ಹೇಳಿಕೆ ದಾಖಲಿಸಿಕೊಂಡಿದ್ದು ದೋಷಪೂರಿತ ಮತ್ತು ಕಾನೂನುಬಾಹಿರ ಎಂದು ಆದೇಶಿಸಲಾಗಿತ್ತು.
ED and Karnataka HC
ED and Karnataka HC
Published on

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿಗೆ 14 ನಿವೇಶನಗಳನ್ನು ಹಂಚಿಕೆ ಮಾಡಿದ್ದ ಅವಧಿಯಲ್ಲಿ ಮುಡಾ ಆಯುಕ್ತರಾಗಿದ್ದ ಡಾ. ಡಿ ಬಿ ನಟೇಶ್‌ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯ ಶೋಧ ನಡೆಸಿ, ಸಮನ್ಸ್‌ ಜಾರಿ ಮಾಡಿದ್ದನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ವಿಚಾರಣೆಗೆ ಪರಿಗಣಿಸಿದೆ.

ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

“ಮೇಲ್ಮನವಿಯು ಬಾಕಿ ಇರುವಾಗ ಏಕಸದಸ್ಯ ಪೀಠದ ಆದೇಶದ ಪ್ರಕಾರ ಪ್ರತಿವಾದಿಗಳು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬಾರದು. ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗಿದ್ದು, ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಬೇಕು” ಎಂದು ನ್ಯಾಯಾಲಯವು ಆದೇಶಿಸಿದೆ. ವಿಚಾರಣೆಯನ್ನು ಏಪ್ರಿಲ್‌ 8ಕ್ಕೆ ಮುಂದೂಡಿದೆ.

ನಟೇಶ್‌ ಅವರ ಅರ್ಜಿ ಪುರಸ್ಕರಿಸಿದ್ದ ಏಕಸದಸ್ಯ ಪೀಠವು ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ 62ರ ಅಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬಹುದು ಎಂದು ಆದೇಶಿಸಿತ್ತು. ಆಕ್ಷೇಪಾರ್ಹವಾದ ಶೋಧ ಮತ್ತು ಜಫ್ತಿಯು ಅರ್ಜಿದಾರರಿಗೆ ಕಿರಿಕಿರಿ ಉಂಟು ಮಾಡು ಉದ್ದೇಶದಿಂದ ಮಾಡಲಾಗಿತ್ತೇ ಎಂಬುದು ವಿಚಾರಣೆಯಿಂದ ತಿಳಿಯಬೇಕಿದೆ ಎಂದು ನ್ಯಾಯಾಲಯ ಹೇಳಿತು.

ಏಕಸದಸ್ಯ ಪೀಠದ ಆದೇಶದಲ್ಲಿನ ನಿರ್ದೇಶನವು ಅದೇ ಆದೇಶದಲ್ಲಿ ಹೊರಡಿಸಿರುವ ಇತರ ನಿರ್ದೇಶನಗಳಿಗೆ ವಿರುದ್ಧವಾಗಿದೆ ಎಂದು ಪೀಠವು ಮೌಖಿಕವಾಗಿ ತಿಳಿಸಿತು. ಅಲ್ಲದೆ ಅರ್ಜಿದಾರರು ಯಾವುದೇ ಮಧ್ಯಂತರ ಪರಿಹಾರ ಕೋರದೆ ಇರುವ ಹಿನ್ನೆಲೆಯಲ್ಲಿ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಲು ಪೀಠವು ಅನುಮತಿಸಿತು.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು “ಏಕಸದಸ್ಯ ಪೀಠದ ಆದೇಶವನ್ನು ಹಲವು ಕಡೆ ಉಲ್ಲೇಖಿಸಲಾಗುತ್ತಿರುವುದರಿಂದ ಜಾರಿ ನಿರ್ದೇಶನಾಲಯಕ್ಕೆ ಪೂರ್ವಾಗ್ರಹ ಉಂಟಾಗುತ್ತಿದೆ. ಏಕಸದಸ್ಯ ಪೀಠವು ಪಿಎಂಎಲ್‌ಎ ಸೆಕ್ಷನ್‌ 19 ಮತ್ತು 17ಕ್ಕೆ ಗೊಂದಲ ಮಾಡಿಕೊಂಡಿದೆ. ಈ ಆದೇಶವು ಒಂದು ದಿನದ ಮಟ್ಟಿಗೂ ನಿಲ್ಲುವುದಿಲ್ಲ” ಎಂದರು.

ಡಾ. ನಟೇಶ್‌ ಪರವಾಗಿ ಕೇವಿಯಟರ್‌ ಆಗಿ ಹಾಜರಾಗಿದ್ದ ಹಿರಿಯ ವಕೀಲ ದುಷ್ಯಂತ್‌ ದವೆ ಅವರು “ಏಕಸದಸ್ಯ ಪೀಠ ಸೂಕ್ತ ಆದೇಶ ಮಾಡಿದೆ” ಎಂದು ಸಮರ್ಥಿಸಿದರು.

‘ನಂಬಲರ್ಹ ಕಾರಣ’ಗಳು ಇಲ್ಲದೇ ಇರುವುದರಿಂದ ನಟೇಶ್‌ ಅವರ ಮನೆಯಲ್ಲಿ ಶೋಧ ನಡೆಸಿ, ಜಫ್ತಿ ಮಾಡಿದ್ದು ಹಾಗೂ ಆನಂತರ ಪಿಎಂಎಲ್‌ ಸೆಕ್ಷನ್‌ 17(1)(f) ಅಡಿ ಹೇಳಿಕೆ ದಾಖಲಿಸಿಕೊಂಡಿದ್ದು ದೋಷಪೂರಿತ ಮತ್ತು ಕಾನೂನುಬಾಹಿರವಾಗಿದೆ. ಹೀಗಾಗಿ, ಸೆಕ್ಷನ್‌ 50ರ ಅಡಿ ಜಾರಿ ಮಾಡಿರುವ ಸಮನ್ಸ್‌ ಅಮಾನ್ಯ ಎಂದು ಏಕಸದಸ್ಯ ಪೀಠ ಆದೇಶಿಸಿತ್ತು.

Kannada Bar & Bench
kannada.barandbench.com