ನಕಲಿ ಜಾತಿ ಪ್ರಮಾಣ ಪತ್ರದಿಂದ ಪಡೆದಿರುವ ಪ್ರಯೋಜನ ಪ್ರಶ್ನಿಸಲು ಕಾಲಮಿತಿಯ ಪ್ರಶ್ನೆ ಉದ್ಭವಿಸುವುದಿಲ್ಲ: ಹೈಕೋರ್ಟ್‌

ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಆಯುಷ್ ವೈದ್ಯಾಧಿಕಾರಿ ಹುದ್ದೆ ಗಿಟ್ಟಿಸಿಕೊಂಡು ಸೇವೆ ಸಲ್ಲಿಸುತ್ತಿದ್ದ ಡಾ.ಗುಡ್ಡದೇವ್ ಗೊಲ್ಲಪ್ಪ ಯಡ್ರಾಮಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ.
Justice V Srishananda and Karnataka HC's Kalburgi Bench
Justice V Srishananda and Karnataka HC's Kalburgi Bench

ನಕಲಿ ಜಾತಿ ಪ್ರಮಾಣ ಪತ್ರದಿಂದ ಪಡೆದಿರುವ ಪ್ರಯೋಜನ ಪ್ರಶ್ನಿಸಲು ಕಾಲಮಿತಿಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠ ಈಚೆಗೆ ಆದೇಶಿಸಿದೆ.

ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಆಯುಷ್ ವೈದ್ಯಾಧಿಕಾರಿ ಹುದ್ದೆ ಗಿಟ್ಟಿಸಿಕೊಂಡು ಸೇವೆ ಸಲ್ಲಿಸುತ್ತಿದ್ದ ಡಾ.ಗುಡ್ಡದೇವ್ ಗೊಲ್ಲಪ್ಪ ಯಡ್ರಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಷಾನಂದ ಅವರ ಏಕಸದಸ್ಯ ಪೀಠ ವಜಾ ಮಾಡಿದೆ.

ಅರ್ಜಿದಾರರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯವು ವಿಜಯಪುರದಲ್ಲಿ ಕಾಲೇಜಿಗೆ ಸೇರುವಾಗ ಭರ್ತಿ ಮಾಡಿದ್ದ ನಮೂನೆಯಲ್ಲಿ ಅರ್ಜಿದಾರರು ತಾನು ಹಿಂದೂ (ಕುರುಬ), ಹಿಂದುಳಿದ ವರ್ಗದಕ್ಕೆ ಸೇರಿದವನು ಎಂದು ಉಲ್ಲೇಖಿಸಿದ್ದಾರೆ. ಆದರೆ, ಉದ್ಯೋಗದ ವೇಳೆಗೆ ಅವರು ಹೇಗೆ ಗೊಂಡಾ ಜಾತಿಗೆ ಸೇರಿದ ಪರಿಶಿಷ್ಟ ಪಂಗಡದವರು ಎಂದು ಬದಲಾಗಲು ಸಾಧ್ಯ ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಅರ್ಜಿದಾರರು ನಿಜವಾಗಿಯೂ ಎಸ್‌ಟಿ ವರ್ಗಕ್ಕೆ ಸೇರಿದ್ದರೆ ಅವರು 1975ರಲ್ಲಿ ಕಾಲೇಜಿಗೆ ಸೇರುವಾಗ ಕುರುಬ ಜಾತಿ ಎಂದು ಉಲ್ಲೇಖಿಸುತ್ತಿರಲಿಲ್ಲ. ಹೀಗಾಗಿ ಅರ್ಜಿದಾರರು ಶುದ್ಧಹಸ್ತದಿಂದ ನ್ಯಾಯಾಲಯದ ಮೆಟ್ಟಿಲೇರಿಲ್ಲ. ತಮ್ಮ ಪರವಾಗಿ ಆದೇಶ ಪಡೆಯಲು ಅವರು ಹಲವು ಸಂಗತಿಗಳನ್ನು ಮುಚ್ಚಿಟ್ಟಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ನೇಮಕಾತಿ ಪ್ರಾಧಿಕಾರದ ಮುಂದೆ ಅರ್ಜಿದಾರರು ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಅದರ ಸಹಾಯದಿಂದ ಉದ್ಯೋಗ ಪಡೆದು ಸಾಕಷ್ಟು ಪ್ರಯೋಜನ ಪಡೆದಿದ್ದಾರೆ. ಹೀಗಾಗಿ, ಅವರ ಅರ್ಜಿ ವಜಾಗೊಳಿಸುತ್ತಿರುವುದಾಗಿ ಪೀಠ ಹೇಳಿದೆ.

ಕಲಬುರಗಿ ಜಿಲ್ಲೆಯಲ್ಲಿ ಕುರುಬ ಮತ್ತು ಗೊಂಡಾ ಸಮುದಾಯವನ್ನು ಒಂದೇ ಎಂದು ಕರೆಯಲಾಗುತ್ತಿದೆ. ಎರಡೂ ಒಂದೇ ಅರ್ಥ ನೀಡುತ್ತವೆ. 1993ರಲ್ಲಿ ಎರಡೂ ಒಂದೇ ಎಂದು ಕರೆಯಲಾಗುತ್ತಿದೆ. ಎರಡೂ ಒಂದೇ ಅರ್ಥ ನೀಡುತ್ತವೆ. 1993ರಲ್ಲಿ ಎರಡೂ ಒಂದೇ ಸಮುದಾಯ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. 1997ರಲ್ಲಿ ಸರ್ಕಾರ ಕಲಬುರ್ಗಿ ಜಿಲ್ಲೆಯಲ್ಲಿನ ಗೊಂಡ ಸಮುದಾಯವನ್ನು ಎಸ್‌ ಟಿ ಪಟ್ಟಿಯಲ್ಲಿ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು ಎಂದು ಅರ್ಜಿದಾರರು ವಾದಿಸಿದ್ದರು.

ರಾಜ್ಯ ಸರ್ಕಾರದ ಪರ ವಿಶೇಷ ವಕೀಲ ಸಿ ಜಗದೀಶ್‌ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ 1986ರ ಆದೇಶವನ್ನು ಹಲವು ಪೀಠಗಳಲ್ಲಿ ಪ್ರಶ್ನಿಸಲಾಗಿದೆ. ಆ ಅದೇಶದ ಲಾಭ ಪಡೆಯಲು ಸಾಧ್ಯವಿಲ್ಲ. ಗೊಂಡಾ ಮತ್ತು ಕುರುಬ ಎರಡೂ ಬೇರೆ ಬೇರೆ ಜಾತಿಗಳು ಎಂದು ಪೀಠಕ್ಕೆ ತಿಳಿಸಿದ್ದರು.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಆಯುಷ್ ಇಲಾಖೆ ಆಯುಷ್ ವೈದ್ಯಾಧಿಕಾರಿ ಹುದ್ದೆಗೆ 1995ರ ಏಪ್ರಿಲ್‌ 9ರಂದು ನೇಮಕಗೊಂಡಿದ್ದರು. ಅದಕ್ಕಾಗಿ ಅವರು ಪರಿಶಿಷ್ಟ ಪಂಗಡ ಸಮುದಾಯದಡಿ ಬರುವ ಗೊಂಡಾ ಜಾತಿಯ ಪ್ರಮಾಣ ಪತ್ರ ಪಡೆದಿದ್ದರು.  ಜಾತಿ ಪ್ರಮಾಣ ಪತ್ರದ ಆಧಾರದಲ್ಲಿ ಅವರ ಸೇವೆ ಕಾಯಂ ಆಗಿ ಅವರು ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿದ್ದರು.

ಆದರೆ, ಕೃಷ್ಣಮೂರ್ತಿ ನಾಯಕ್ ಮತ್ತು ನಂಜರಾಜು ಅವರು ಅರ್ಜಿದಾರರು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ದೂರು ನೀಡಿದ್ದರು. ಅದನ್ನು ಆಧರಿಸಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಪರಿಶೀಲನೆ ನಡೆಸಿದಾಗ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವುದು ಸಾಬೀತಾಗಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಅರ್ಜಿದಾರರು ತಮ್ಮ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿರುವ ಆದೇಶವನ್ನು ಅನೂರ್ಜಿತಗೊಳಿಸಬೇಕು ಮತ್ತು ತಮ್ಮನ್ನು ಪುನಾ ಸೇವೆಗೆ ಸೇರ್ಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

Related Stories

No stories found.
Kannada Bar & Bench
kannada.barandbench.com